ಬ್ರೆಕ್ಸಿಟ್ ಸವಾಲು ಗೆಲ್ಲುವರೇ ಥೆರೇಸಾ ?

ಐರೋಪ್ಯ ಒಕ್ಕೂಟದಿಂದ (ಇಯು) ಬ್ರಿಟನ್ ಹೊರಬರುವ ಬ್ರೆಕ್ಸಿಟ್ ಒಪ್ಪಂದಕ್ಕೆ ಇಯು ಮತ್ತು ಬ್ರಿಟನ್ ಸರ್ಕಾರ ಸಹಿ ಹಾಕಿದ್ದು, 45 ವರ್ಷಗಳ ಗೆಳೆತನ ಅಂತ್ಯಕ್ಕೆ ಬಂದಿದೆ. ಆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬ್ರಿಟನ್ ಸಂಸತ್ ಒಪ್ಪಿಗೆ ಬೇಕಿದೆ. ಪ್ರಧಾನಿ ಥೆರೇಸಾ ಮೇ ಪ್ರಸ್ತಾವಿತ ನಿಯಮಾವಳಿಯನ್ನು ಒಪ್ಪಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಈ ತಿಂಗಳಲ್ಲಿ (ಸಂಭವನೀಯ ದಿನಾಂಕ ಡಿ. 12) ಬ್ರಿಟನ್ ಸಂಸತ್ ನಿರ್ಧಾರ ಕೈಗೊಳ್ಳಲಿದೆ. ಆದರೆ, ಸಂಸತ್​ನಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ. ಹೌಸ್ ಆಫ್ ಕಾಮನ್ಸ್ (ಸಂಸತ್​ನ ಕೆಳಮನೆ) 650 ಸದಸ್ಯ ಬಲ ಹೊಂದಿದೆ. ಸ್ಪೀಕರ್ ಮತ್ತು ಮತದಾನದ ಹಕ್ಕು ಹೊಂದಿಲ್ಲದ ಸದಸ್ಯರನ್ನು ಹೊರತು ಪಡಿಸಿದರೆ 318 ಸದಸ್ಯರ ಬೆಂಬಲ ಬ್ರೆಕ್ಸಿಟ್ ಒಪ್ಪಂದ ಜಾರಿಗೆ ಅಗತ್ಯ. ಥೆರೇಸಾ ಮೇ ಅವರ ಕನ್ಸರ್ವೆಟೀವ್ ಪಕ್ಷ 315 ಸದಸ್ಯರನ್ನು ಹೊಂದಿದೆ. ಆದರೆ, ಈ ಪಕ್ಷದ ಸುಮಾರು 12 ಸಂಸದರು ಪ್ರಧಾನಿ ಪ್ರಸ್ತಾಪಿತ ನಿಯಮಾವಳಿ ವಿರೋಧಿಸಿದ್ದಾರೆ. ಹೀಗಾಗಿ ಥೆರೇಸಾ ಮೇಗೆ ನಿಜಕ್ಕೂ ಅಗ್ನಿಪರೀಕ್ಷೆ ಎದುರಾಗಿದೆ. ಹಾಗಾಗಿ ತಾವು ರೂಪಿಸಿರುವ ನಿಯಮಾವಳಿಗೆ ಬೆಂಬಲ ಪಡೆಯಲು ಥೆರೇಸಾ ಸಂಸದರ ಮನವೊಲಿಸುವ ಕಾರ್ಯ ಅವಿರತವಾಗಿ ಮಾಡುತ್ತಿದ್ದಾರೆ. ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರ ಬಂದರೂ 2020ರವರೆಗೆ ಐರೋಪ್ಯದ ಸದಸ್ಯತ್ವ ಹೊಂದಿರಲಿದೆ. ಅಷ್ಟರಲ್ಲಿ ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್ ವ್ಯಾವಹಾರಿಕ ಬಾಂಧವ್ಯಕ್ಕೆ ಹೊಸ ಸ್ವರೂಪ ನೀಡಬೇಕಿದೆ.

ನಾಲ್ವರು ಸಚಿವರ ರಾಜೀನಾಮೆ

ಪ್ರಧಾನಿ ಥೆರೇಸಾ ಮೇಗೆ ಅವರ ಸಂಪುಟದಲ್ಲೇ ವಿರೋಧ ವ್ಯಕ್ತವಾಗಿದೆ. ಭಾರತ ಮೂಲದ ಇಬ್ಬರು ಸಚಿವರು ಸೇರಿ ನಾಲ್ವರು ನ.15ರಂದು ರಾಜೀನಾಮೆ ನೀಡಿದ್ದಾರೆ. ಬ್ರೆಕ್ಸಿಟ್​ನ ಕಾರ್ಯದರ್ಶಿಯೂ ಆಗಿದ್ದ ಸ್ಟೇಟ್ ವರ್ಕ್ ಮತ್ತು ಪಿಂಚಣಿ ಖಾತೆ ಸಚಿವರಾದ ಡೊಮಿನಿಕ್ ರಾಬ್, ಎಸ್ತರ್ ಮ್ಯಾಕ್ವೀ ಹಾಗೂ ಕಿರಿಯ ಸಚಿವರಾದ ಭಾರತ ಮೂಲದ ಸುಯಲ್ಲಾ ಬ್ರೇವರ್ಮನ್ ಮತ್ತು ಶೈಲೇಶ್ ವಾರಾ ರಾಜೀನಾಮೆ ಕೊಟ್ಟಿದ್ದಾರೆ. ಪ್ರಧಾನಿಯವರು ಪ್ರಸ್ತಾಪಿಸಿರುವ ಒಪ್ಪಂದವು ವ್ಯಾಪಾರ ಸ್ನೇಹಿಯಾಗಿದೆ ಎಂದು ಈ ನಾಲ್ವರು ಆರೋಪಿಸಿದ್ದಾರೆ.

ಬ್ರೆಕ್ಸಿಟ್ ಒಪ್ಪಂದಕ್ಕೆ ರೂಪಿಸಿರುವ ನಿಯಮಾವಳಿಯನ್ನು ತಿರಸ್ಕರಿಸಿದರೆ ಬಹಳ ಅಪಾಯ ಕಾದಿದೆ. ಇದರಿಂದ ದೇಶದಲ್ಲಿ ಒಡಕು ಮೂಡುತ್ತದೆ ಮತ್ತು ಅಸ್ಥಿರತೆ ಉಂಟಾಗಲಿದೆ.

| ಥೆರೇಸಾ ಮೇ ಬ್ರಿಟನ್ ಪ್ರಧಾನಿ

ಥೆರೇಸಾ ಪತ್ರ

‘ಆತ್ಮಸಾಕ್ಷಿಯಾಗಿ ಮತ್ತು ಹೃದಯಪೂರ್ವಕವಾಗಿ ಈ ಒಪ್ಪಂದದ ಯಶಸ್ಸಿಗೆ ಶ್ರಮಿಸುತ್ತಿದ್ದೇನೆ. ದೇಶದ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಒಪ್ಪಂದದ ಪರ ಅಥವಾ ವಿರುದ್ಧ ಮತ ಚಲಾಯಿಸಿದ್ದರೂ ಪರವಾಗಿಲ್ಲ. ದೇಶವಾಸಿಗಳ ಘನತೆ ರಕ್ಷಿಸಲಾಗುವುದು’.

ನಿಯಮಾವಳಿ ಏನು?

ಬ್ರೆಕ್ಸಿಟ್ ನಿಯಮ ಕುರಿತಂತೆ 600 ಪುಟಗಳ ಒಪ್ಪಂದ ಹಾಗೂ ಭವಿಷ್ಯದ ಮುಕ್ತ ವ್ಯಾಪಾರ ಕುರಿತಾದ 26 ಪುಟಗಳ ಘೋಷಣೆಯನ್ನು ಥೆರೇಸಾ ಮೇ ರೂಪಿಸಿರುವ ನಿಯಮಾವಳಿ ಒಳಗೊಂಡಿದೆ. ಬೆಲ್ಜಿಯಂ ರಾಜಧಾನಿ ಬ್ರುಸ್ಸೆಲ್ಸ್ ಭಾನುವಾರ ನಡೆದ ಸಭೆಯಲ್ಲಿ ಐರೋಪ್ಯ ಒಕ್ಕೂಟದ 27 ನಾಯಕರು ಬ್ರೆಕ್ಸಿಟ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ನಿಯಮಾವಳಿಯ ಪ್ರಮುಖ ಅಂಶ

# ಐರೋಪ್ಯ ಒಕ್ಕೂಟದಿಂದ ಹೊರಬಂದ ನಂತರ ಇಯು ಏಕಸ್ವಾಮ್ಯದ ಮಾರುಕಟ್ಟೆ (ಇಯು ಕಸ್ಟಮ್್ಸ ಯೂನಿಯನ್) ಕಾಯಂ ಸದಸ್ಯತ್ವ ಕೋರದಿರುವುದು.
# 1972ರ ಯುರೋಪಿಯನ್ ಕಮ್ಯೂನಿಟೀಸ್ ಕಾಯ್ದೆ ಉಳಿಸಿಕೊಳ್ಳುವ ಭರವಸೆ.
# ಚಾಲ್ತಿಯಲ್ಲಿರುವ ಐರೋಪ್ಯ ಒಕ್ಕೂಟದ ಕಾನೂನುಗಳನ್ನು ಬ್ರಿಟನ್ ಆಂತರಿಕ ಕಾನೂನಿನಲ್ಲಿ ಅಂತರ್ಗತ ಮಾಡುವುದು.

ತಲಾದಾಯ ಇಳಿಕೆ ಸಾಧ್ಯತೆ

ಬ್ರೆಕ್ಸಿಟ್​ನಿಂದಾಗಿ ಬ್ರಿಟನ್ ಪ್ರಜೆಗಳ ತಲಾದಾಯ ಗಣನೀಯವಾಗಿ ಇಳಿಮುಖವಾಗುವ ಸಾಧ್ಯತೆ ಇದೆ ಮತ್ತು ಐರೋಪ್ಯ ಒಕ್ಕೂಟದಿಂದ ಹೊರಬರುವುದರಿಂದ ದೇಶದ ಆರ್ಥಿಕತೆ ಮೇಲೆ ಕನಿಷ್ಠ ಎರಡು ವರ್ಷ ದುಷ್ಪರಿಣಾಮ ಉಂಟಾಗಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಬ್ರೆಕ್ಸಿಟ್​ಗೆ ನಡೆದ ಜನಮತ ಗಣನೆಯಿಂದ ದೇಶದ ಆರ್ಥಿಕತೆ ಮೇಲೆ ಉಂಟಾದ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಸತ್ ಸಮ್ಮತಿಸದಿದ್ದರೆ ಮುಂದೇನು?

ಬ್ರಿಟನ್ ಸಂಸತ್ ಬ್ರೆಕ್ಸಿಟ್ ಒಪ್ಪಂದಕ್ಕೆ ಸಮ್ಮತಿಸದಿದ್ದರೆ ಸರ್ಕಾರ, ಮಾರುಕಟ್ಟೆ ಮತ್ತು ವ್ಯಾಪಾರೋದ್ಯಮದ ಹಿತಾಸಕ್ತಿಯಿಂದ ಇನ್ನೊಮ್ಮೆ ಸಂಸತ್​ನಲ್ಲಿ ಮತದಾನ ಕೋರಬಹುದು. ಇದೂ ವಿಫಲವಾದರೆ, ವಿಷಯ ಕಗ್ಗಂಟಾದರೆ, ಸರ್ಕಾರ ತನ್ನ ಮುಂದಿನ ಆಲೋಚನೆ ಏನು ಎಂಬುದನ್ನು 21 ದಿನದ ಒಳಗೆ ಸಂಸತ್​ಗೆ ತಿಳಿಸಬೇಕು. ಇದು ಸಾಧ್ಯವಾಗದಿದ್ದರೆ ಪ್ರಧಾನಿ ಥೆರೇಸಾ ಮೇ ರಾಜೀನಾಮೆ ಅನಿವಾರ್ಯವಾಗಲಿದೆ.

ಏನಿದು ಬ್ರೆಕ್ಸಿಟ್?

28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು. ಈ ಸೇರ್ಪಡೆಗೆ 1975ರಲ್ಲಿ ನಡೆದ ಜನಮತ ಗಣನೆ ಅಂಗೀಕಾರ ನೀಡಿತು. 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಎಡ ಚಿಂತನೆಯ ಪಕ್ಷಗಳಿಂದ ಕೇಳಿಬರತೊಡಗಿದವು. ಬ್ರೆಕ್ಸಿಟ್ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದು) ಹೆಸರಿನ ಆಂದೋಲನಗಳು ನಡೆದವು. 2015ರ ಚುನಾವಣೆಯಲ್ಲಿ ಈ ಆಗ್ರಹವನ್ನು ಡೇವಿಡ್ ಕ್ಯಾಮರಾನ್ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಿದರು. ಆಶ್ವಾಸನೆಯಂತೆ 2016ರ ನವೆಂಬರ್ 23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಬ್ರೆಕ್ಸಿಟ್​ಗೆ ವಿರುದ್ಧ ನಿಲುವು ಹೊಂದಿದ್ದ ಪ್ರಧಾನಿ ಡೇವಿಡ್ ಕ್ಯಾಮರಾನ್​ಗೆ ಮುಖಭಂಗವಾಗಿ ಅವರು ರಾಜೀನಾಮೆ ನೀಡುವಂತಾಯಿತು. ನಂತರ ಥೆರೇಸಾ ಮೇ ಪ್ರಧಾನಿಯಾದರು. ಒಂದು ವರ್ಷದ ಬಳಿಕ ಮಧ್ಯಂತರ ಚುನಾವಣೆ ಘೋಷಿಸಿದರು. ಆದರೆ, ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಸರಳ ಬಹುಮತ ದೊರೆಯಲಿಲ್ಲ. ಹೀಗಾಗಿ ಕನ್ಸರ್ವೆಟೀವ್ ಪಕ್ಷಕ್ಕೆ ಡೆಮಾಕ್ರಟಿಕ್ ಯುನಿಯನಿಸ್ಟ್ ಪಕ್ಷದ ಬೆಂಬಲ ನೀಡಿದೆ. 2017ರ ಮಾರ್ಚ್ 29ರಂದು ಬ್ರಿಟನ್ ಸರ್ಕಾರ ಸಂವಿಧಾನದ 50ನೇ ವಿಧಿಯನ್ನು (ಐರೋಪ್ಯ ಒಕ್ಕೂಟದ ಒಪ್ಪಂದ) ಕೈಬಿಡುವ ಪ್ರಸ್ತಾವನೆ ಮಾಡಿದೆ. ಇದರ ಅನ್ವಯ 2019ರ ಮಾರ್ಚ್ 29ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಲಿದೆ. ಈ ಗಡುವಿನೊಳಗೆ ಬ್ರೆಕ್ಸಿಟ್​ಗೆ ಥೆರೇಸಾ ಮೇ ರೂಪಿಸಿರುವ ನಿಯಮಾವಳಿಗೆ ಒಪ್ಪಿಗೆ ಪಡೆಯುವುದು ಅಗತ್ಯವಾಗಿದೆ.