ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿಯ 94ನೇ ಜಾತ್ರೆಯಲ್ಲಿ ಸೋಮವಾರ ಉತ್ತಮ ಎತ್ತುಗಳ ಆಯ್ಕೆ ಸ್ಪರ್ಧೆ ನಡೆಯಿತು.
ಜಾತ್ರೆಗೆ ಆಗಮಿಸಿದ್ದ ರಾಸುಗಳಲ್ಲಿ ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಎಂಟು ಅಥವಾ ಬಾಯಿ ಕೂಡುವಿಕೆ, ಹೋರಿ, ಮಲೆನಾಡು ಗಿಡ್ಡ ಹಾಗೂ ಕೋಣಗಳ ವಿಭಾಗ ಸೇರಿದಂತೆ ಒಟ್ಟು ಎಂಟು ವಿಭಾಗ ಮಾಡಲಾಗಿತ್ತು.
ರೈತರು ಎತ್ತುಗಳನ್ನು ಉತ್ತಮವಾಗಿ ಸಾಕಿ, ಜಾತ್ರೆಯಲ್ಲಿ ಪ್ರದರ್ಶನ ಮಾಡಿದರು. ಪ್ರತಿ ವಿಭಾಗದಲ್ಲಿಯೂ ತಳಿಯ ಗುಣಲಕ್ಷಣಗಳು, ರಾಸುವಿನ ನಡಿಗೆ, ಮೈಕಟ್ಟು, ಸಾಕಣೆ ಮತ್ತು ಆರೋಗ್ಯವನ್ನು ತಜ್ಞ ಪಶು ವೈದ್ಯರ ತಂಡಗಳು ಪರಿಶೀಲನೆ ನಡೆಸುವ ಮೂಲಕ ಉತ್ತಮ ಎತ್ತುಗಳನ್ನು ಆಯ್ಕೆ ಮಾಡಿದರು.
ಹಾಲು ಹಲ್ಲು ವಿಭಾಗದಲ್ಲಿ 12 ಜತೆ, ಎರಡು ಹಲ್ಲು ವಿಭಾಗದಲ್ಲಿ 7 ಜತೆ, ನಾಲ್ಕು ಹಲ್ಲು ವಿಭಾಗದಲ್ಲಿ 5 ಜತೆ, ಆರು ಹಲ್ಲು ವಿಭಾಗದಲ್ಲಿ 7 ಜತೆ, ಬಾಯಿ ಕೂಡುವಿಕೆ ವಿಭಾಗದಲ್ಲಿ 5 ಜತೆ, ಹೋರಿ ವಿಭಾಗದಲ್ಲಿ 4 ಹೋರಿಗಳು, ಮಲೆನಾಡು ಗಿಡ್ಡ 3 ರಾಸುಗಳು ಹಾಗೂ ಕೋಣ ವಿಭಾಗದಲ್ಲಿ ಒಂದು ಜತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಎಂದು ಪಶು ವೈದ್ಯ ಡಾ.ಸುಬ್ರಹ್ಮಣ್ಯ ಹೇಳಿದರು.
ಸ್ವರ್ಧೆಯಲ್ಲಿ ಆಯ್ಕೆಯಾದ ರಾಸುಗಳಿಗೆ ಜ.19ರಂದು ರಥೋತ್ಸವದ ಬಳಿಕ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಯಶವಂತ್, ಪಶು ವೈದ್ಯರಾದ ಡಾ.ಆನಂದ್, ಡಾ.ಪ್ರವೀಣ್, ಡಾ.ಪ್ರಮೋದ್, ಡಾ.ರವೀಂದ್ರ ಇತರರು ಇದ್ದರು.