ತೆರಿಗೆ ಹೊರೆಗೆ ಬ್ರೇಕ್?

ಬೆಂಗಳೂರು: ಜನಸಾಮಾನ್ಯರ ವಿರೋಧದ ಜತೆಗೆ ಮಿತ್ರಪಕ್ಷ ಕಾಂಗ್ರೆಸ್​ನ ರಾಷ್ಟ್ರೀಯ ಮುಖಂಡರಿಗೂ ಇರಿಸುಮುರುಸು ತಂದಿಟ್ಟಿರುವ ತೈಲಬೆಲೆ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಸೈಕಲ್ ಸವಾರಿ ಮಾಡಿ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆಯನ್ನು ಅಣಕ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಚ್ಡಿಕೆ ಬಜೆಟ್​ನಲ್ಲಿ ತೈಲದ ಮೇಲಿನ ಸೆಸ್ ಏರಿಕೆ ಮಾಡಿದ ಬಳಿಕ ಮುಜುಗರಕ್ಕೀಡಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಟೀಕೆ ಮಾಡಿ, ಫೋಟೋ, ವಿಡಿಯೋಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಒತ್ತಡ ಹೆಚ್ಚಾಗಿದೆ. ಪರಿಣಾಮ ತೆರಿಗೆ ಇಳಿಕೆ ನಿರ್ಧಾರ ಮರುಪರಿಶೀಲಿಸಲು ಸಿಎಂ ಮುಂದಾಗಿದ್ದಾರೆನ್ನಲಾಗಿದೆ. ಮತ್ತೊಂದೆಡೆ ತೈಲ ಬೆಲೆ ಏರಿಕೆಯನ್ನೇ ತರಹೇವಾರಿಯಾಗಿ ಬಿಂಬಿಸಿ ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವನೆ ಮೂಡಿ ಸುವ ಜತೆಗೆ ಸರ್ಕಾರದ ವರ್ಚಸ್ಸಿಗೂ ಧಕ್ಕೆ ತರಲು ಬಿಜೆಪಿ ಹೋರಾಟದ ರೂಪುರೇಷೆ ಸಿದ್ಧಪಡಿಸಿದೆ.

ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮೇಲೆ ನಡೆಯುವ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಸೆಸ್ ಏರಿಕೆ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ರೈತರ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೋಡೀಕರಣದ ಕಾರಣ ಸೆಸ್ ಹಿಂಪಡೆಯುವುದು ಅಷ್ಟು ಸುಲಭವಲ್ಲ ಎಂಬ ಮಾತೂ ಕೇಳಿ ಬರುತ್ತಿವೆ. ರೈತರ 34 ಸಾವಿರ ಕೋಟಿ ರೂ. ಬೆಳೆ ಸಾಲದ ಮನ್ನಾಕ್ಕಾಗಿ ಹಣ ಹೊಂದಾಣಿಕೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್​ನಲ್ಲಿ ಇಂಧನದ ಮೇಲೆ ಸೆಸ್ ಹಾಕಿದ್ದರು. ಮದ್ಯದ ಮೇಲೆ ಶೇ. 4ರಷ್ಟು ತೆರಿಗೆ ಹೆಚ್ಚಳ ಮಾಡಿದ್ದರು. ವಿದ್ಯುತ್ ದರ ಕೂಡ ಏರಿಕೆ ಮಾಡಿದ್ದರು.

ಆತಂಕವೇನು?

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಷ್ಟ್ರಮಟ್ಟದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿರುವಾಗ ಕಾಂಗ್ರೆಸ್ ಸರ್ಕಾರವಿರುವ ರಾಜ್ಯದಲ್ಲಿಯೇ ಬೆಲೆ ಏರಿಸಿದರೆ ಪಕ್ಷಕ್ಕೆ ಘಾಸಿಯಾಗುತ್ತದೆ ಎಂಬುದು ಪಕ್ಷದ ನಾಯಕರ ಆತಂಕ.