More

    ತುಮಕೂರು ಪಾಲಿಕೆ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಯೋಜನೆ ಮರು ಜಾರಿಗೆ ನಿರ್ಧಾರ

    ತುಮಕೂರು: ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ವಿತರಿಸುವ ಯೋಜನೆಯ ಮರು ಜಾರಿಗೆ ಶೀಘ್ರ ಟೆಂಡರ್ ಕರೆಯಲು ಆರೋಗ್ಯ, ಶಿಕ್ಷಣ ಸ್ಥಾಯಿಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

    ಪಾಲಿಕೆ ಸಭಾಂಗಣದಲ್ಲಿ ಶನಿವಾರ ಸಾರ್ವಜನಿಕ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿಸಮಿತಿ ಸಭೆಯಲ್ಲಿ ಅಧ್ಯಕ್ಷ ಸೈಯದ್‌ನಯಾಜ್ ಅವರು, ಪೌರಕಾರ್ಮಿಕರಿಗೆ ಮತ್ತೆ ಬೆಳಗಿನ ಉಪಹಾರ ಯೋಜನೆ ಮರು ಜಾರಿ ಮಾಡುವುದು ಸೂಕ್ತ. ಈ ಹಿನ್ನೆಲೆಯಲ್ಲಿ ಇನ್ನೊಂದು ವಾರದೊಳಗೆ ಟೆಂಡರ್ ಕರೆಯುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಮೇಯರ್ ಲಲಿತಾ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

    ಬೆಳಗಿನ ಉಪಹಾರ ವಿತರಿಸಲು 2019-20ನೇ ಸಾಲಿನ ಎಸ್‌ಎಫ್‌ಸಿ ಮುಕ್ತನಿಧಿ ಅನುದಾನದಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಗಿದ್ದು, ಹೆಚ್ಚುವರಿ 15 ಲಕ್ಷ ರೂಪಾಯಿ ಪಾಲಿಕೆಯ ಸಾಮಾನ್ಯ ನಿಧಿಯಡಿ ಭರಿಸಬೇಕಾಗಿದೆ. ಹೊಸ ಯೋಜನೆಗೆ ಟೆಂಡರ್ ಕರೆಯಲು ಸಭೆಯ ತೀರ್ಮಾನದ ಅವಶ್ಯಕತೆ ಇದೆ ಎಂದು ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿದರು.

    ಸಭೆಯಲ್ಲಿದ್ದ ಸಮಿತಿ ಸದಸ್ಯರೆಲ್ಲರೂ ಯೋಜನೆ ಮರು ಜಾರಿಗೆ ಸಮ್ಮತಿಸಿದರು. ನಮ್ಮ ವಾರ್ಡ್‌ನಲ್ಲಿ ಪೌರಕಾರ್ಮಿಕರು ಗೈರಾಗುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಕೇವಲ ಡಿಸಿ ಬಂಗಲೆಯಷ್ಟೇ ನಮ್ಮ ವಾರ್ಡ್ ಪರಿಧಿ ಇಲ್ಲ. ಪೌರಕಾರ್ಮಿಕರು ಇದರ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ಕೊಡುತ್ತಿದ್ದು, ಉಳಿದ ಬಡಾವಣೆಗಳಲ್ನಿ ಸ್ವಚ್ಛತೆ ಮರೀಚಿಕೆ ಎನಿಸಿದೆ. ಈ ಬಗ್ಗೆ ಹೆಲ್ತ್ ಇನ್‌ಸ್ಪೆಕ್ಟರ್‌ಗಳು ಗಮನಹರಿಸುವಂತೆ 1ನೇ ವಾರ್ಡ್ ಸದಸ್ಯೆ ನಳಿನಾ ತಾಕೀತು ಮಾಡಿದರು.

    ನಮ್ಮ ವಾರ್ಡ್‌ನಲ್ಲೂ ಇದೇ ಸಮಸ್ಯೆ ಇದ್ದು, ಒಮ್ಮೆ ವಾರ್ಡ್‌ನಲ್ಲಿ ಕಾಣಿಸಿಕೊಳ್ಳುವರು ಮತ್ತೆ ಕಾಣೋದೆ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಫರೀದಾಬೇಗಂ ಒತ್ತಾಯಿಸಿದರು. ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮವಹಿಸುವಂತೆ ಸೂಚನೆ ನೀಡಿದರು.

    ಮೇಯರ್ ಲಲಿತಾ, ಉಪಮೇಯರ್ ಬಿ.ಎಸ್.ರೂಪಶ್ರೀ, ಸ್ಥಾಯಿ ಸಮಿತಿ ಸದಸ್ಯರುಗಳಾದ ಮುಜೀದಾಖಾನಂ, ನೂರುನ್ನೀಸಾ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಟಿ.ನಾಗೇಶ್‌ಕುಮಾರ್ ಮತ್ತಿತರರು ಇದ್ದರು.

    ಕೋಲಾಹಲ ಸೃಷ್ಟಿಸಿದ ಯುಜಿಡಿ !: ನಗರದ ಬಿ.ಎಚ್.ರಸ್ತೆಯ ಸೋಮೇಶ್ವರ ದೇವಸ್ಥಾನ ಪಕ್ಕ ಹಾಗೂ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದ ರಸ್ತೆಯಲ್ಲಿ ಒಳಚರಂಡಿ ತ್ಯಾಜ್ಯ ನೀರನ್ನು ಯುಜಿಡಿ ಸಂಪರ್ಕಕ್ಕೆ ಒಳಪಡಿಸದೆ, ಮಳೆ ನೀರಿನ ಚರಂಡಿಗೆ ಹರಿಯಬಿಟ್ಟಿದ್ದು ಇದರಿಂದ ಪರಿಸರ ಮಾಲಿನ್ಯವನ್ನು ಉಂಟಾಗುತ್ತಿರುವ ವಿಷಯ ಆರೋಗ್ಯಸ್ಥಾಯಿ ಸಮಿತಿ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು. ಯುಜಿಡಿ ಸಮಸ್ಯೆ ಬಗ್ಗೆ ಸಭೆಗೆ ಉತ್ತರಿಸುವಂತೆ ಅಧ್ಯಕ್ಷ ಸೈಯದ್ ನಯಾಜ್ ತಾಕೀತು ಮಾಡಿದಾಗ, ಸಂಬಂಧಪಟ್ಟ ಇಂಜಿನಿಯರ್‌ಗಳ್ಯಾರೂ ಹಾಜರಿರಲಿಲ್ಲ. ಇದರಿಂದ ಕೆರಳಿದ ನಯಾಜ್, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಮೇಯರ್ ಲಲಿತಾ ಕೂಡ ಆಕ್ರೋಶವ್ಯಕ್ತಪಡಿಸಿದರು. ಸದಸ್ಯರ ಆರ್ಭಟಕ್ಕೆ ಬೆಚ್ಚಿದ ಅಧಿಕಾರಿಗಳು ಮೌನಕ್ಕೆ ಶರಣಾದರು.

    ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನವಾಗಿ 360 ಮಂದಿಗೆ ತಲಾ 8300 ರೂ.,ಗಳನ್ನು ಅವರ ಖಾತೆಗೆ ನೇರ ಜಮಾ ಮಾಡಲಾಗಿದೆ. ಜತೆಗೆ 600 ಪೌರಕಾರ್ಮಿಕರಿಗೆ ಜೀವವಿಮೆ ಕೂಡ ಪಾಲಿಕೆ ವತಿಯಿಂದಲೇ ಮಾಡಿಸಲಾಗಿದೆ.
    ಸೈಯದ್ ನಯಾಜ್
    ಅಧ್ಯಕ್ಷ, ಆರೋಗ್ಯ, ಶಿಕ್ಷಣ ಸ್ಥಾಯಿಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts