ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಬ್ರ್ಯಾಂಡ್ ಮಂಗಳೂರು’ ಸಂಕಲ್ಪ

«ಅಧಿಕಾರಿಗಳು, ಪ್ರಮುಖರ ಸಂವಾದ * ಕೋಮು ಸೌಹಾರ್ದಕ್ಕೆ ಆದ್ಯತೆ ನೀಡಲು ಕರೆ»

– ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿ ಕಳಚಿಕೊಂಡು ‘ಬ್ರ್ಯಾಂಡ್ ಮಂಗಳೂರು’ ನಡೆಯಬೇಕಾದರೆ ಘಟನೆಯ ವೈಭವೀಕರಣ ನಿಲ್ಲಬೇಕು. ನೈಜ ಆರೋಪಿಗಳಿಗೆ ಶಿಕ್ಷೆ, ಸಾಮಾಜಿಕ ಜಾಲತಾಣಗಳ ಬಳಕೆಗೆ ಕಡಿವಾಣ ಸಾಧ್ಯವಾಗಬೇಕು, ನೆಲದ ಪಾರಂಪರಿಕ ತಾಣ, ಪ್ರವಾಸೋದ್ಯಮ, ಸಾಂಸ್ಕೃತಿಕ ವಿಷಯಗಳಿಗೆ ಹೆಚ್ಚು ಪ್ರಚಾರ ದೊರೆಯಬೇಕು…
ಇದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳೊಂದಿಗೆ ನಡೆದ ಸಂವಾದದಲ್ಲಿ ಮೂಡಿಬಂದ ಒಟ್ಟಾಭಿಪ್ರಾಯ.
ಎಲ್ಲರ ಅಭಿಪ್ರಾಯ ಆಲಿಸಿದ ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಮಾರ್, ಶಿಕ್ಷಣ, ಆರೋಗ್ಯ, ವಾಣಿಜ್ಯ ಕ್ಷೇತ್ರದಲ್ಲಿ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಮಂಗಳೂರು ಕೋಮು ಸೌಹಾರ್ದತೆಯ ವಿಷಯದಲ್ಲೂ ಬ್ರ್ಯಾಂಡ್ ಆಗಬೇಕು ಎಂದು ಆಶಿಸಿದರು.
ಶಾಂತಿ ಸಭೆಗಳನ್ನು ನಡೆಸುವುದಕ್ಕಿಂತಲೂ ಮುಖ್ಯವಾಗಿ ಪ್ರೀತಿ ವಿಶ್ವಾಸವನ್ನು ಮೂಡಿಸುವ ಮತೀಯ ಸಾಮರಸ್ಯದ ಕ್ಲಬ್‌ಗಳನ್ನು ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ರಚಿಸಬೇಕು. ಸರ್ವಧರ್ಮದ ಪ್ರಮುಖ ಉತ್ಸವಗಳನ್ನು ಸರ್ವಧರ್ಮದ ಜನರು ಹಾಗೂ ಸಂಘಸಂಸ್ಥೆಗಳು ಜತೆಯಾಗಿ ಆಚರಿಸುವ ಸಂಪ್ರದಾಯ ಪುನಾರಂಭವಾಗಬೇಕು ಎಂದರು.
ಮಂಗಳಾದೇವಿ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಫಾ.ವಿಕ್ಟರ್ ಲೋಬೊ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಕರ್ನಲ್ ಶರತ್ ಭಂಡಾರಿ, ಡಾ. ಅಣ್ಣಯ್ಯ ಕುಲಾಲ್, ಪಿ.ಬಿ. ಅಬ್ದುಲ್ ಹಮೀದ್, ಹನುಮಂತ ಕಾಮತ್, ಪುಷ್ಪರಾಜ್ ಜೈನ್, ಪ್ರದೀಪ್ ಕುಮಾರ್ ಕಲ್ಕೂರ, ಎಂ.ಆರ್. ವಾಸುದೇವ, ಎಂ.ಆರ್. ಬಳ್ಳಾಲ್, ಇಬ್ರಾಹಿಂ ಕೋಡಿಜಾಲ್, ಮುಹಮ್ಮದ್ ಇರ್ಫಾನ್, ಡಾ. ಶಿವಶರಣ್, ಸುದೇಶ್, ಕಿರಣ್ ಪ್ರಸಾದ್, ಗೌರವ್ ಹೆಗ್ಡೆ, ಸ್ವರ್ಣ ಸುಂದರ್, ಯತೀಶ್ ಬೈಕಂಪಾಡಿ, ಕಮಾಂಡರ್ ಎಂ.ಎಂ. ನಾಯಕ್ ಮೊದಲಾದವರು ತಮ್ಮ ಅಭಿಪ್ರಾಯ, ಸಲಹೆಗಳನ್ನು ವ್ಯಕ್ತಪಡಿಸಿದರು.
ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್‌ನಝೀರ್ ಉಪಸ್ಥಿತರಿದ್ದರು.
ಪತ್ರಕರ್ತ ಆರ್.ಸಿ. ಭಟ್ ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಸ್ತಾವನೆಗೈದರು. ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಮಾಂಬಾಡಿ ವಂದಿಸಿದರು.

ಹೊರ ಜಿಲ್ಲೆಗಿಂತ ಅಪರಾಧ ಕಡಿಮೆ: ರಾಜ್ಯದ 16 ಜಿಲ್ಲೆಗಳಲ್ಲಿ ತಾನು ಕರ್ತವ್ಯ ನಿರ್ವಹಿಸಿದ ಅನುಭವದ ಪ್ರಕಾರ ಹೇಳುವುದಿದ್ದರೆ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರಲ್ಲಿ ನಡೆಯುವ ಅಪರಾಧಗಳ ಪ್ರಮಾಣ ಕಡಿಮೆ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹೇಳಿದರು. ಕೆಲವೊಂದು ಸಣ್ಣ ಪುಟ್ಟ ಗಲಭೆ, ಘಟನೆಗಳನ್ನು ವಿನಾ ಕಾರಣ ವೈಭವೀಕರಿಸುತ್ತಿರುವುದರಿಂದ ಮಾತ್ರವೇ ದಕ್ಷಿಣ ಕನ್ನಡ ಅಥವಾ ಮಂಗಳೂರಿನ ಬಗ್ಗೆ ಹೊರಗಡೆ ಋಣಾತ್ಮಕವಾಗಿ ಗುರುತಿಸುವಂತಾಗಿದೆ. ಸಾಮಾಜಿಕ ಜಾಲತಾಣ ಸಂಬಂಧಿಸಿದ ದೂರುಗಳ ನಿರ್ವಹಣೆ ದೊಡ್ಡ ಕೆಲಸವಾಗಿ ಪರಿಣಿಸುತ್ತಿದ್ದು, ಈ ನಿಟ್ಟಿನಲ್ಲಿ ಇಲಾಖೆ ಆದ್ಯತೆ ನೀಡುತ್ತಿದೆ ಎಂದರು.

ಬೆರಳೆಣಿಕೆ ಕಿಡಿಗೇಡಿಗಳು ನಡೆಸುವ ಕೃತ್ಯಗಳು ವೈಭವೀಕರಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮಾಧ್ಯಮಗಳು ವಹಿಸಬೇಕು. ಇದಕ್ಕೆ ಬದಲಾಗಿ ನಗರ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಲು ವೇದಿಕೆ ಸೃಷ್ಟಿಯಾಗಬೇಕು.
– ಎಂ.ಆರ್.ವಾಸುದೇವ, ಮಾಜಿ ನಿರ್ದೇಶಕ, ಮಂಗಳೂರು ಅಂ. ವಿಮಾನ ನಿಲ್ದಾಣ

 

ಜಿಲ್ಲೆಯಲ್ಲಿ 1998-99ರ ಬಳಿಕ ಹಿಂದೂ- ಮುಸ್ಲಿಮರ ನಡುವೆ ವಿಶ್ವಾಸ ಕ್ಷೀಣಿಸುತ್ತ ಬಂದಿದೆ. ಕೋಮು ಸಂಘರ್ಷದಂಥ ಸಂದರ್ಭ ಪೊಲೀಸ್ ಇಲಾಖೆ ನೈಜ ಅಪರಾಧಿಗಳನ್ನು ಬಂಧಿಸದೆ ಬೇರಾರನ್ನೋ ಬಂಧಿಸುತ್ತಿರುವುದರಿಂದ ಅಂಥ ಕೃತ್ಯಗಳ ಸಂಖ್ಯೆ ಹೆಚ್ಚುತ್ತಿದೆ.
– ಹನುಮಂತ ಕಾಮತ್, ಅಧ್ಯಕ್ಷ, ನಾಗರಿಕ ಹಿತರಕ್ಷಣಾ ವೇದಿಕೆ