ಸರ್ಕಾರಿ ಶಾಲೆ ಉಳಿವಿಗೆ ಸಂಸ್ಥೆಗಳ ಕೊಡುಗೆ ದೊಡ್ಡದು

ವಿಜಯವಾಣಿ ಸುದ್ದಿಜಾಲ ಹಾಸನ
ಸರ್ಕಾರಿ ಶಾಲೆಗಳ ಉಳಿವಿನಲ್ಲಿ ಸರ್ಕಾರೇತರ ಸಂಸ್ಥೆಗಳ ಕೊಡುಗೆ ದೊಡ್ಡದು ಎಂದು ಬಿಆರ್‌ಸಿ ಅಧಿಕಾರಿ ಭಾನುಮತಿ ಹೇಳಿದರು.
ನಗರದ ಉತ್ತರ ಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರೀನ್ ಹಾಸನ ಫೌಂಡೇಶನ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಧ್ಯಮ ವರ್ಗದ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಸರ್ಕಾರಿ ಶಾಲೆಗಳು ಸಬಲವಾಗಬೇಕು. ಕೇವಲ ಕಾರ್ಯಕ್ರಮ ಆಯೋಜನೆ, ಅನುದಾನ ಬಿಡುಗಡೆಯಿಂದ ಶಾಲೆಗಳು ಉಳಿಯುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಪೈಪೋಟಿ ನೀಡಬೇಕಿರುವ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸುತ್ತಲಿನ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕಾಗುತ್ತದೆ ಎಂದರು.
ಉತ್ತರ ಬಡಾವಣೆ ಶಾಲೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಮಕ್ಕಳ ದಾಖಲಾತಿ ಪ್ರಮಾಣವೂ ಹೆಚ್ಚಿದೆ. ಆದರೆ ಕೆಲ ಕಿಡಿಗೇಡಿಗಳು ಶಾಲೆಯ ಕಟ್ಟಡ ನಾಶಪಡಿಸುತ್ತಾರೆ. ಬಾಗಿಲು ಮುರಿಯುವುದು, ಹೆಂಚುಗಳನ್ನು ಒಡೆಯುವುದು. ಈ ರೀತಿಯಾಗಿ ದಾಂಧಲೆ ಮಾಡಿದ್ದಾರೆ. ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಮುಂದೆಯೂ ಇದೇ ಪರಿಸ್ಥಿತಿ ಮುಂದುವರಿದರೆ ಗಸ್ತು ವ್ಯವಸ್ಥೆ ಹಾಕುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸರ್ಕಾರಿ ಶಾಲೆಗೆ ಮಕ್ಕಳು ಸೇರಬೇಕು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಾಲೆಗಾಗಿ ನಾವು ನೀವು, ಶಾಲೆಗೆ ಬನ್ನಿ ಶನಿವಾರ, ನಲಿ-ಕಲಿ ಸೇರಿದಂತೆ ಅನೇಕ ಯೋಜನೆಗಳು ಯಶಸ್ವಿಯಾಗಿವೆ ಎಂದರು.
ಗ್ರೀನ್ ಹಾಸನ ಫೌಂಡೇಶನ್ ಅಧ್ಯಕ್ಷ ಎಚ್.ಆರ್. ಮಣಿಕಂಠ ಮಾತನಾಡಿ, ಉತ್ತರ ಬಡಾವಣೆ ಶಾಲೆಗೆ ಮೂಲಸೌಕರ್ಯಗಳ ಅವಶ್ಯಕತೆಯಿದ್ದು, ದಾನಿಗಳಿಂದ ಹಣ ಸಂಗ್ರಹಿಸಿ ಕೈಲಾದ ಮಟ್ಟಿಗೆ ಕೆಲಸ ಮಾಡಲಾಗುತ್ತಿದೆ. ಆದರೆ ಶಿಕ್ಷಕರ ವರ್ಗಾವಣೆಯಂತಹ ದೊಡ್ಡ ನಿರ್ಧಾರ ಕೈಗೊಂಡರೆ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಯಾವ ಕಾರಣಕ್ಕೂ ಇಲ್ಲಿನ ಶಿಕ್ಷಕರನ್ನು ಬೇರೆ ಕಡೆಗೆ ಕಳುಹಿಸಿಕೊಡಬಾರದು ಎಂದು ಆಗ್ರಹಿಸಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಎಸ್. ನೀಲಾವತಿ, ಮುಖ್ಯ ಶಿಕ್ಷಕ ನಾಗರಾಜ್, ಮಂಜುನಾಥ್, ವತ್ಸಲಾ, ದಾನಿಗಳಾದ ಬಲರಾಮ, ವಿನೋದ್ ಕುಮಾರ್, ನಳಪತ್ ಸಿಂಗ್ ಇದ್ದರು.

ಶಿಕ್ಷಕಿ ವರ್ಗಾವಣೆಗೆ ವಿರೋಧ
ವಿಜಯವಾಣಿ ಸುದ್ದಿಜಾಲ ಹಾಸನ
ಉತ್ತರ ಬಡಾವಣೆ ಸರ್ಕಾರಿ ಶಾಲೆಯ ಶಿಕ್ಷಕಿ ಕೆ. ಮೋಹನಕುಮಾರಿ ಅವರ ವರ್ಗಾವಣೆಗೆ ತಡೆ ನೀಡಬೇಕೆಂದು ಆಗ್ರಹಿಸಿ ಪಾಲಕರು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ತೆರಳಿ, ಬಿಇಒ ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಈ ಶಾಲೆಗೆ ನೂರು ವರ್ಷಗಳ ಇತಿಹಾಸವಿದ್ದು, 80ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ದಿಢೀರನೆ ಶಿಕ್ಷಕರನ್ನು ಬೇರೆ ಕಡೆಗೆ ನಿಯೋಜಿಸಿದರೆ ಮಕ್ಕಳ ವ್ಯಾಸಂಗ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಪಾಲಕರಾದ ಎಚ್.ವೈ.ಸೋಮಶೇಖರ್, ಎಚ್.ಎಂ. ನವೀನ್, ಲಕ್ಷ್ಮೀ ಉಮಾ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *