ಮಟಪಾಡಿಗಿಲ್ಲ ಬಸ್ ವ್ಯವಸ್ಥೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

ಕೆಲವು ಕಡೆ ರಸ್ತೆ ಸರಿ ಇಲ್ಲದೆ ಬಸ್ ಸಂಚಾರ ಸಮಸ್ಯೆ. ಇನ್ನು ಕೆಲವು ಕಡೆ ನಿಮಿಷಕ್ಕೊಂದರಂತೆ ಬಸ್ ಸಂಚಾರ ಇದ್ದು ಮೇಲಾಟ ನಡೆಸುವ ವಿದ್ಯಮಾನ. ಉತ್ತಮ ರಸ್ತೆ ಇದ್ದೂ ಬಸ್ ಸಂಚಾರವಿಲ್ಲದ ಒಂದು ಊರು ಬ್ರಹ್ಮಾವರ ಭಾಗದಲ್ಲಿದೆ.

ಇತ್ತೀಚೆಗೆ ತಾಲೂಕು ಆಗಿ ಘೋಷಣೆ ಆದ ಬ್ರಹ್ಮಾವರ ಎಂಬುವುದು ಒಂದು ಹೆಗ್ಗಳಿಕೆ ಆದರೆ, ಯಕ್ಷಗಾನ ಕಲೆಗೆ ಮೊದಲ ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಯಕ್ಷಗಾನ ಗುರು ವೀರಭದ್ರ ನಾಯಕ್ ಅವರ ಹುಟ್ಟೂರು ಮಟಪಾಡಿ ಎಂಬ ಊರಿನ ಜನರ ಸಂಚಾರಕ್ಕೆ ಬಸ್ ಇಲ್ಲದೆ ಸಂಕಷ್ಟದ ಪರಿಸ್ಥಿತಿ ಇದೆ.

ಬ್ರಹ್ಮಾವರ ನಗರಕ್ಕೆ ಹೊಂದಿಕೊಂಡಿರುವ ಮಟಪಾಡಿ ಎಂಬ ಊರು ಗ್ರಾಮೀಣ ಜೀವನ ಬಯಸುವ ಜನರಿಗೆ ಅತಿ ಸುಂದರ ಊರು. ಆದೇ ರೀತಿ ಬಸ್ ಸಂಚಾರ ಇರದ ಏಕೈಕ ಊರು ಎಂಬ ಕುಖ್ಯಾತಿಯೂ ಈ ಊರಿಗಿದೆ. ಇತಿಹಾಸ ಪ್ರಸಿದ್ಧ ನೀಲಾವರ ಶ್ರೀ ಮಹಿಷಮರ್ಧಿನಿ ದೇವಸ್ಥಾನಕ್ಕೆ ಹತ್ತಿರದ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇಲ್ಲಿ ಈ ಹಿಂದೆ ಕೆಲವು ಸಮಯ ಮಾತ್ರ ಒಂದು ಬಸ್ ಓಡಾಟ ನಡೆಸುತ್ತಿತ್ತು. ಬಳಿಕ ಪ್ರಯಾಣಿಕರಿಲ್ಲ, ರಸ್ತೆ ಸರಿಯಿಲ್ಲ ಎಂಬ ಕಾರಣ ನೀಡಿ ಸಂಚಾರ ಸ್ಥಗಿತಗೊಳಿಸಿತು.

ಆದರೆ ಈಗ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ 4 ಕಿ.ಮೀ ಉದ್ದದ 2 ಕಿರು ಸೇತುವೆಯ 9 ಮೋರಿ ಹೊಂದಿದ ಕಾಂಕ್ರೀಟ್ ದ್ವಿಪಥ(ಡಬ್ಬಲ್) ರಸ್ತೆ ನಿರ್ಮಾಣವಾದರೂ ಬಸ್ ಸಂಚಾರ ಮಾತ್ರ ಇನ್ನೂ ಆರಂಭವಾಗಿಲ್ಲ ಎಂಬ ಕೊರಗು ಇಲ್ಲಿನ ಜನರದ್ದು.

ಮಟಪಾಡಿ, ಕೆಮ್ಮಣ್ಣು ಕಡು, ಗೋಳಿ ಬೈಲ್, ಪಡು ನೀಲಾವರ, ನಂದಿಗುಡ್ಡೆ, ಶೆಟ್ಟಿ ಕುದ್ರು, ರಾಮಣ್ಣನ ಕುದ್ರು, ನೀಲಾವರ, ಬಲ್ಜಿಗೆ ಜನರು, ವಿದ್ಯಾರ್ಥಿಗಳು ನಗರಕ್ಕೆ ಹಾಗೂ ಬ್ರಹ್ಮಾವರದ ವಾರದ ಸಂತೆ ಇನ್ನಿತರ ಕೆಲಸಗಳಿಗೆ ಆಟೋರಿಕ್ಷಾ ಇತ್ಯಾದಿ ಖಾಸಗಿ ವಾಹನದ ಮೊರೆ ಹೋಗಬೇಕು. ಇಲ್ಲವೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಬಸ್ ಇಲ್ಲದೆ ಸಮಸ್ಯೆ ಹಲವು: ಬಸ್ ಸಂಚಾರ ಇಲ್ಲದ ಈ ಊರಿನ ಗಂಡು -ಹೆಣ್ಣಿಗೆ ಮದುವೆ ಸಂಬಂಧ ಆಗದ ಅದೆಷ್ಟೋ ಘಟನೆಗಳು ನಡೆದಿದೆ. ಬ್ರಹ್ಮಾವರ, ಉಡುಪಿಗೆ ಖಾಸಗಿ ಉದ್ಯೋಗಕ್ಕೆ ಹೋಗುವ ಯುವತಿಯರು ಹಾಗೂ ಮಹಿಳೆಯರು ಬಸ್ ವ್ಯವಸ್ಥೆ ಇಲ್ಲದೆ ನಿರುದ್ಯೋಗಿಗಳಾಗುವ ಸ್ಥಿತಿಯೂ ಬಂದೊದಗಿದೆ. ಕೆಲವು ಭಾಗದಲ್ಲಿ ಕೃಷಿಕರು ತಮಗೆ ಬೇಕಾದ ಸಾಮಾನು ಸರಂಜಾಮುಗಳನ್ನು ದುಬಾರಿ ಬಾಡಿಗೆ ತೆತ್ತು ತರಬೇಕಾದ ಸ್ಥಿತಿಯೂ ಇದೆ.

ಒಳ್ಳೆಯ ರಸ್ತೆ ಇದ್ದು ಕೂಡ ಬಸ್ ಸಂಚಾರ ಇಲ್ಲದ ಊರು ನಮ್ಮದು. ಪ್ರತಿದಿನ ನಮ್ಮ ಊರಿಂದ ಬ್ರಹ್ಮಾವರಕ್ಕೆ ಬರಲು ರಿಕ್ಷಾ ಅಥವಾ ಇನ್ನಿತರ ವಾಹನಗಳಿಗೆ ಅಂಗಲಾಚುವ ಸ್ಥಿತಿ ಇನ್ನೂ ಎಷ್ಟು ಕಾಲ ಇದೆಯೋ ಏನೋ?
|ಕವಿತಾ ನಾಯಕ್, ಕೆಮ್ಮಣ್ಣು ಕಡು ಮಟಪಾಡಿ