ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಮರುಜೀವ?

ವಿಜಯವಾಣಿ ಸುದ್ದಿಜಾಲ ಉಡುಪಿ
ಬ್ರಹ್ಮಾವರದಲ್ಲಿರುವ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ನಿಟ್ಟಿನಲ್ಲಿ ಉಭಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ಏರ್ಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಂಡು ಮತ್ತೆ ಹಿಂದಿನಂತೆ ವ್ಯವಹಾರ ನಡೆಸಬೇಕು. ಸಿ.ಎಂ. ಕುಮಾರಸ್ವಾಮಿ ಇತ್ತೀಚೆಗೆ ಜಿಲ್ಲೆಗೆ ಭೇಟಿ ಸಂದರ್ಭ ರೈತರು ಮುಂದೆ ಬಂದರೆ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವ ಭರವಸೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಸಾಕಷ್ಟು ಮಾಹಿತಿ ದೊರಕಿದ್ದು, ಶೀಘ್ರವೇ ಈ ಬಗ್ಗೆ ಸಕ್ಕರೆ ಸಚಿವರು ಹಾಗೂ ಸಕ್ಕರೆ ಇಲಾಖೆ ಆಯುಕ್ತರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಉಭಯ ಜಿಲ್ಲೆಗಳ ಶಾಸಕರು, ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯನ್ನು ನಡೆಸಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.
ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಡಿಪಿಆರ್ ತಯಾರಿಸಲಾಗಿದ್ದು, 30 ಕೋಟಿ ರೂ. ಅಗತ್ಯವಿದೆ. ಕಾರ್ಖಾನೆ ಪುನಶ್ಚೇತನ, ನಂತರ ಕಬ್ಬು ಪೂರೈಕೆಯ ಸಾಧ್ಯತೆಗಳ ಬಗ್ಗೆ ಸಾಧ್ಯತಾ ಅಧ್ಯಯನ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದರು.
ಶಾಸಕರಾದ ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ ಲಾಲಾಜಿ ಮೆಂಡನ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಯಶೀಲ ಶೆಟ್ಟಿ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್, ರೈತ ಸಂಘಟನೆ ಮುಖಂಡರು, ಕಬ್ಬು ಬೆಳೆಗಾರರ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಕ್ಕರೆ ಕಾರ್ಖಾನೆ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಕಾರ್ಖಾನೆ ಪುನಶ್ಚೇತನಕ್ಕೆ ಬೆಂಬಲ ಹಾಗೂ ತಂತ್ರಜ್ಞಾನದ ನೆರವು ನೀಡಲು ಸರ್ಕಾರ ಸಿದ್ಧ. ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತ ನಡುವೆ ಸಮನ್ವಯತೆ ಮುಖ್ಯ. ವಾರಾಹಿ ನೀರಾವರಿ ಯೋಜನೆ ಬಂದಿರುವುದರಿಂದ ಈ ಭಾಗದಲ್ಲಿ ಇನ್ನಷ್ಟು ಕಬ್ಬು ಬೆಳೆಯಲು ಅವಕಾಶವಿದೆ.
– ಡಾ. ಜಯಮಾಲ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ