More

    ವಿಜೃಂಭಣೆಯ ಚುಂಚನಕಟ್ಟೆ ಬ್ರಹ್ಮರಥೋತ್ಸವ

    ಕೆ.ಆರ್.ನಗರ: ತಾಲೂಕಿನ ಪ್ರಸಿದ್ಧ ಚುಂಚನಕಟ್ಟೆಯ ಶ್ರೀರಾಮ ದೇವರ ಬ್ರಹ್ಮರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

    ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಆರಾಧನೆ, ಬಲಿಪ್ರಧಾನ, ರಥಸ್ಥಾಪನೆ, ಯಾತ್ರಾಧಾನ ನಂತರ ವಿಶೇಷ ಪೂಜೆ, ಅಭಿಷೇಕ, ಅರ್ಚನೆಯೊಂದಿಗೆ ಪ್ರಾರಂಭವಾಯಿತು. ಬಳಿಕ ಶಾಸಕ ಸಾ.ರಾ.ಮಹೇಶ್ ಮತ್ತು ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಡಿ.ರವಿಶಂಕರ್ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

    ವಿಶೇಷವಾಗಿ ಅಲಂಕಾರಗೊಂಡಿದ್ದ ರಥದಲ್ಲಿ ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನು ಕೂರಿಸಲಾಯಿತು. ಭಕ್ತರು ಜಯ ಘೋಷದೊಂದಿಗೆ ದೇವಾಲಯ ಸುತ್ತ ತೇರು ಎಳೆದು ಹಣ್ಣು ದವನ ಎಸೆದು ಭಕ್ತಿ ಸಮರ್ಪಸಿದರು. ಇದೇ ವೇಳೆ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನ ಒಳ ಪ್ರವೇಶಿಸಲು ನೂಕುನುಗ್ಗಲು ಉಂಟಾಗದಂತೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
    ಹರಿದುಬಂದ ಜನಸಾಗರ: ಜಾತ್ರಾ ಮಹೋತ್ಸವಕ್ಕೆ ಜನಸಾಗರವೇ ಹರಿದುಬಂದಿತ್ತು. ಭಕ್ತರಿಗೆ ಶಾಸಕ ಸಾ.ರಾ.ಮಹೇಶ್ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ ಮಾಡಿದ್ದರು.

    ಗಾವಡಗೆರೆಯ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜಸ್ವಾಮೀಜಿ, ಆದಿಚುಂಚನಗಿರಿಯ ಚುಂಚನಕಟ್ಟೆ ಶಾಖಾ ಮಠದ ಶ್ರೀ ಶಿವಾನಂದನಾಥ ಸ್ವಾಮೀಜಿ, ಬೆಟ್ಟದಪುರ ಮಠದ ಶ್ರಿ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಕರ್ಪೂರವಳ್ಳಿ ಜಂಗಮ ಮಠದ ಶ್ರಿ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್, ತಹಸೀಲ್ದಾರ್ ಎಂ.ಮಂಜುಳಾ, ಉಪತಹಸೀಲ್ದಾರ್ ಶಣ್ಮುಖ, ಸಿಪಿಐ ಪಿ.ಕೆ.ರಾಜು, ಪಿಎಸ್‌ಐ ವಿ.ಚೇತನ್, ಎಪಿಎಂಸಿ ಅಧ್ಯಕ್ಷ ಕುಪ್ಪಳ್ಳಿ ಸೋಮು ಇನ್ನಿತರರು ಹಾಜರಿದ್ದರು.

    ಉತ್ತಮ ರಾಸುಗಳಿಗೆ ಬಹುಮಾನ: ಚುಂಚನಕಟ್ಟೆಯ ದನಗಳ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿಯಾಗಿದ್ದು, ರಥೋತ್ಸವಕ್ಕೂ 15 ದಿನ ಮುನ್ನ ಇಲ್ಲಿ ಭಾರಿ ದನಗಳ ಜಾತ್ರೆ ನಡೆಯುತ್ತದೆ. ಜಾತ್ರೆಗೆ ರೈತರು ದಷ್ಟಪುಷ್ಟವಾದ ಎತ್ತುಗಳನ್ನು ತಂದು ಪ್ರದರ್ಶನ ಮತ್ತು ಮಾರಾಟ ಮಾಡುತ್ತಾರೆ. ಈ ವೇಳೆ ಉತ್ತಮ ರಾಸುಗಳಿಗೆ ತಾಲೂಕು ಆಡಳಿತ ಮತ್ತು ಎಪಿಎಂಸಿ ವತಿಯಿಂದ ಬಹುಮಾನ ನೀಡಲಾಗುತ್ತದೆ. ಅದರಂತೆ ಈ ಬಾರಿಯೂ ಉತ್ತಮ ರಾಸುಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.

    ಎತ್ತುಗಳ ವಿಭಾಗ: ಹಾಲು ಹಲ್ಲು ವಿಭಾಗದಲ್ಲಿ ಹಾಸನದ ಚಿಕ್ಕೇಗೌಡ ಪ್ರಥಮ, ಅರಕಲಗೂಡಿನ ನಾರಾಯಣಗೌಡ ದ್ವಿತೀಯ ಹಾಗೂ ದಿಡ್ಡಹಳ್ಳಿಯ ಸಣ್ಣಶೆಟ್ಟಿ ತೃತೀಯ ಹಾಗೂ 2 ಹಲ್ಲು ವಿಭಾಗದಲ್ಲಿ ಸಾಲಿಗ್ರಾಮದ ಚಂದ್ರೇಗೌಡ (ಪ್ರ), ಬಿಳಿಕೆರೆಯ ಬಿ.ಎಸ್.ನಾಗರಾಜ್(ದ್ವೀ), ಹಾಸನದ ಚಿಕ್ಕೇಗೌಡ(ತೃ). 4 ಹಲ್ಲು ವಿಭಾಗದಲ್ಲಿ ಸಾಲಿಗ್ರಾಮದ ಆದರ್ಶ(ಪ್ರ), ದಿಲೀಪ್(ದ್ವೀ), ಮೈಸೂರು ರಮ್ಮಹಳ್ಳಿಯ ಬೋರ(ತೃ). 6 ಹಲ್ಲು ವಿಭಾಗದಲ್ಲಿ ಚಿಕ್ಕಹನಸೋಗೆಯ ಅಭಿಲಾಷ್(ಪ್ರ), ಸಾಲಿಗ್ರಾಮದ ಗೋವಿಂದೇಗೌಡ(ದ್ವೀ), ಹಾಸನದ ಚಿಕ್ಕೇಗೌಡ(ತೃ). 8 ಹಲ್ಲು ವಿಭಾಗದಲ್ಲಿ ಮಿರ್ಲೆಯ ಬಲರಾಮ (ಪ್ರ), ಹಳಿಯೂರಿನ ಪುನಿತ್(ದ್ವೀ), ಹಾಸನದ ಚಿಕ್ಕೇಗೌಡ (ತೃ) ಬಹುಮಾನ ಪಡೆದರು.

    ಹಸು ವಿಭಾಗ: ಹಾಲು ಹಲ್ಲು ವಿಭಾಗದಲ್ಲಿ ಮಿಲೆಯ ಶಿವಣ್ಣೇಗೌಡ(ಪ್ರ), ಗಂಧನಹಳ್ಳಿಯ ಮಂಜುನಾಥ್(ದ್ವೀ) ಮಿರ್ಲೆಯ ಚಿನ್ಮಯ್(ತೃ). 2 ಹಲ್ಲು ವಿಭಾಗದಲ್ಲಿ ಮಿರ್ಲೆಯ ಅನಿಲ್‌ಕುಮಾರ್(ಪ್ರ), ಜವರೇಗೌಡನಕೊಪ್ಪಲಿನ ರಾಕೇಗೌಡ(ದ್ವೀ). 4 ಹಲ್ಲು ವಿಭಾಗದಲ್ಲಿ ಕೆ.ಆರ್.ಪೇಟೆಯ ಬಣ್ಣದ ಕೆರೆ ಸ್ವಾಮೀಗೌಡ(ಪ್ರ), ಸಾಲಿಗ್ರಾಮದ ವಿಜಿ(ದ್ವೀ). 6 ಹಲ್ಲು ವಿಭಾಗದಲ್ಲಿ ಸಾಲಿಗ್ರಾಮದ ದಿನೇಶ್(ಪ್ರ). 8 ಹಲ್ಲು ವಿಭಾಗದಲ್ಲಿ ತಂದ್ರೆಯ ಅಂಕನಹಳ್ಳಿ ರಾಜು(ಪ್ರ), ಮಿರ್ಲೆಯ ಚಂದ್ರಶೇಖರ್(ದ್ವೀ), ಮಲ್ಲೇಶ್(ತೃ) ಬಹುಮಾನ ಪಡೆದರು.

    ಬೀಜದ ಹೋರಿ ವಿಭಾಗ: ಹಾಲು ಹಲ್ಲಿನ ವಿಭಾಗದಲ್ಲಿ ಕೆ.ಆರ್.ಪೇಟೆಯ ಕುರುಬಳ್ಳಿ ರವೀಶ್(ಪ್ರ), ದೊಡ್ಡಕಾಡನೂರಿನ ಯೋಗರಾಜ(ದ್ವೀ), ಹೊಳೆನರಸೀಪುರದ ಕೃಷ್ಣರಾಜ ಅರಸು (ತೃ). 2 ಹಲ್ಲು ವಿಭಾಗದಲ್ಲಿ ಕೆ.ಆರ್.ಪೇಟೆಯ ಹೊಸಮನೆಕೆರೆ ಕುಮಾರ(ಪ್ರ), ಕೆಸ್ತೂರು ಗೇಟ್‌ನ ರುದ್ರೇಗೌಡ(ದ್ವೀ), ಮಂಚಿಬೀಡಿನ ಚಂದ್ರಪ್ಪ(ತೃ). 4 ಹಲ್ಲು ವಿಭಾಗದಲ್ಲಿ ಮಂಚಿಬೀಡು ಚಂದ್ರಪ್ಪ (ಪ್ರ), ಬ್ಯಾಡರಾಯನಕೊಪ್ಪಲಿನ ದೇವರಾಜು(ದ್ವೀ), ಗುಮ್ಮನಹಳ್ಳಿಯ ರೇವಣ್ಣ(ತೃ). 6 ಹಲ್ಲು ವಿಭಾಗದಲ್ಲಿ ಕೆ.ಆರ್.ಪೇಟೆಯ ಹಳೆಮಾವನಕೆರೆ ಗೋಪಾಲೇಗೌಡ (ಪ್ರ), ಮರಿಗೌಡನಕೊಪ್ಪಲಿನ ಸಣ್ಣಮಾದೇಗೌಡ(ದ್ವೀ), ಕೆ.ಆರ್.ಪೇಟೆಯ ಕುರುಬಳ್ಳಿ ಹೋರಿ ಮುದ್ದೇಗೌಡ (ತೃ) ಬಹುಮಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts