ಭಗವಂತನ ಭಾಷೆ ಅರಿತರೆ ಬದುಕು ಸಾರ್ಥಕ

ಔರಾದ್ : ಭಗವಂತನ ಭಾಷೆ ಅಂತರ್ನೀಹಿತ ಅರ್ಥವನ್ನು ಹೊಂದಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವ ಕಲೆ ಕರಗತು ಮಾಡಿಕೊಂಡರೆ ಜೀವನದ ಪ್ರತಿ ಕ್ಷಣವೂ ಆನಂದಮಯವಾಗುತ್ತದೆ. ಬದುಕಿನಲ್ಲಿ ಸಾರ್ಥಕ ಭಾವ ಮೂಡುತ್ತದೆ. ಸಮಾಜದಲ್ಲಿನ ಅಹಿತಕರ ಘಟನೆಗಳಿಗೆ ಅವಕಾಶವೇ ಇಲ್ಲದಂತಾಗುತ್ತದೆ ಎಂದು ಮುಂಬೈ ಮೂಲದ ಕ್ಲಿನಿಕಲ್ ರೀಸರ್ಚ್​ ತಜ್ಞ ಡಾ. ಸಚಿನ್ ಪರಬ್ ವ್ಯಾಖ್ಯಾನ ಮಾಡಿದ್ದಾರೆ.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಇಲ್ಲಿಯ ತಾಲೂಕು ಪಂಚಾಯಿತಿ ಪಕ್ಕದ ವಿಶಾಲ ಮೈದಾನದಲ್ಲಿ ಸಹಸ್ರಾರು ಜಿಜ್ಞಾಸುಗಳ ಉಪಸ್ಥಿತಿಯಲ್ಲಿ ನಡೆದ ಅಧ್ಯಾತ್ಮಿಕ ಹಬ್ಬದ ಮೂರನೇ ದಿನವಾದ ಶುಕ್ರವಾರ ಸಂಜೆ ಪರಮಾತ್ಮನ ಸತ್ಯ ಪರಿಚಯ ಎಂಬ ವಿಷಯದ ಮೇಲೆ ಚಿಂತನೆ ಮಂಡಿಸಿದ ಅವರು, ಸೋಲು, ದುಃಖ, ಕಷ್ಟ, ನಷ್ಟ, ನೋವು, ಅವಮಾನದಲ್ಲೂ ಒಳಿತನ್ನು ಕಾಣುವುದೇ ಭಗವಂತನ ಭಾಷೆಯ ಒಳಾರ್ಥವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈಚೇಗೆ ಸಂಭವಿಸಿದ ಇಥಿಯೋಪಿಯಾ ವಿಮಾನ ದುರಂತವನ್ನು ಉದಾಹರಿಸಿದ ಡಾ. ಪರಬ್ ಅವರು, 150ನೇ ಸೀಟ್ ನಂಬರ್ನ ಪ್ರಯಾಣಿಕನಿಗೆ 5 ನಿಮಿಷ ತಡವಾದ ಹಿನ್ನೆಲೆಯಲ್ಲಿ ವಿಮಾನಯಾನ ಅವಕಾಶ ತಪ್ಪಿಹೋಗಿತ್ತು. ಈ ಪ್ರಯಾಣಿಕ 5 ನಿಮಿಷ ತಡಮಾಡಿದ್ದಕ್ಕಾಗಿ ಪರಿತಪಿಸತೊಡಗಿದ್ದ. ಆದರೆ ಭಗವಂತನ ಭಾಷೆಯ ಅರ್ಥವೇ ಬೇರೆ. 5 ನಿಮಿಷ ತಡವಾಗಿದ್ದರಿಂದ ಈತ ಬದುಕುಳಿದ ಎಂಬಿತ್ಯಾದಿ ಪ್ರಸಂಗಗಳನ್ನು ವಿವರಿಸಿದರು.

ಬಡವ ಯಾರು : ಭಗವಂತನ ಭಾಷೆಯಲ್ಲಿ ಸಂಪತ್ತು ಇಲ್ಲದವರು ಬಡವರಲ್ಲ. ಪರರಿಗೆ ಸಂತೋಷ ಕೊಡುವುದನ್ನು ಗೊತ್ತಿಲ್ಲದವರು ಮತ್ತು ಗೊತ್ತಿದ್ದರೂ ಕೊಡಲಾರದವರು ಬಡವರು. ಪರರಿಗೆ ಸಂತೋಷ ಕೊಡುವುದೇ ಜೀವನದ ಸಿರಿವಂತಿಕೆ. ಒಳ್ಳೆಯ ಮಾತು, ಒಳ್ಳೆಯ ನಡತೆ, ಕಷ್ಟದಲ್ಲಿದ್ದವರಿಗೆ ಸ್ಪಂದನೆ ಇತ್ಯಾದಿ ಕ್ರಿಯೆಗಳೆಲ್ಲವೂ ಸಂತೋಷದ ಮೂಲಗಳಾಗಿವೆ ಎಂದು ಡಾ. ಪರಬ್ ಪ್ರತಿಪಾದಿಸಿದ್ದಾರೆ.

ಜಾಗತಿಕ ಸಮೃದ್ಧಿಯ ಸಂಕಲ್ಪದೊಂದಿಗೆ ಸಹಸ್ರಾರು ಜನರು ಕೈಯಲ್ಲೊಂದು ಮೇಣದ ಬತ್ತಿ ಹಿಡಿದು ರಾತ್ರಿಯ ಕತ್ತಲಲ್ಲಿ ಸಾಮೂಹಿಕ ಜ್ಯೋತಿ ಬೆಳಗುವ ಕಾರ್ಯಕ್ರಮ ಗಮನ ಸೆಳೆಯಿತು. ರಾಜಯೋಗದ ಪ್ರಾತ್ಯಕ್ಷಿಕೆ ನಡೆಯಿತು.

ಔರಾದ್ನ ರಾಜಯೋಗಿನಿ ಸುಭಾಷಾ ಬಹೆನಜಿ, ಶಾಂತಾ ಬಹೆನಜಿ, ಛಾಯಾ ಬಹೆನಜಿ ಮತ್ತಿತರರು ಉಪಸ್ಥಿತರಿದ್ದರು.