ಗೋಕರ್ಣನಾಥಗೆ ಬ್ರಹ್ಮಕಲಶೋತ್ಸವ

<ಕುದ್ರೋಳಿ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ ಶಿವಗಿರಿ ಮಠದ ಮಠಾಧಿಪತಿ ಶ್ರೀ ವಿಷುದಾನಂದ ಸ್ವಾಮೀಜಿ ಉಪಸ್ಥಿತಿ>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಿವಗಿರಿ ಮಠದ ಮಠಾಧಿಪತಿ ಶ್ರೀ ವಿಷುದಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಹಾಗೂ ಶಿವಗಿರಿ ಮಠದ ಸುಗುದಾನಂದ ತಂತ್ರಿ ಮತ್ತು ಕ್ಷೇತ್ರದ ಮುಖ್ಯ ಅರ್ಚಕ ಲಕ್ಷ್ಮಣ ಶಾಂತಿಯವರ ಪೌರೋಹಿತ್ಯದಲ್ಲಿ ಭಾನುವಾರ ಸಂಭ್ರ ಮದ ಬ್ರಹ್ಮಕಲಶೋತ್ಸವ ನೆರವೇರಿತು.

ಬೆಳಗ್ಗೆ ಮಹಾಗಣಪತಿ ಹೋಮ, ಗುರುಪೂಜೆ ನಂತರ ಬೆಳಗ್ಗೆ 7.35ಕ್ಕೆ ರಾಜಗೋಪುರ ಶಿಖರ ಪ್ರತಿಷ್ಠಾಪನೆ, ಕಲಶಾಭಿಷೇಕ, ಅಧಿವಾಸ, ವೀರಕಾಂಡ ಪೀಠ ಪೂಜೆ, 8.05ಕ್ಕೆ ವಾಹನ ಪ್ರತಿಷ್ಠಾಪನೆ, ನೂತನ ಧ್ವಜಸ್ತಂಭಕ್ಕೆ ಕಲಶಾಭಿಷೇಕ ನಡೆಯಿತು. ತದನಂತರ ಧ್ವಜಾರೋಹಣ, ಮಧ್ಯಾಹ್ನ 12.15ಕ್ಕೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ವಿಶೇಷ ಪೂಜೆ, ನೈವೇದ್ಯ ಪೂಜೆ, ಪ್ರಸನ್ನಪೂಜೆ, ಮಹಾಮಂಗಳಾರತಿ ನಡೆಯಿತು.

ಕುದ್ರೋಳಿ ಕ್ಷೇತ್ರ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್, ಟ್ರಸ್ಟಿ ರವಿಶಂಕರ್ ಮಿಜಾರು, ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಸಿ. ಸುವರ್ಣ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಎಂ.ವೇದಕುಮಾರ್, ಚಿತ್ತರಂಜನ್ ಗರೋಡಿ, ಬಿ.ಜಿ.ಸುವರ್ಣ, ದೇವೇಂದ್ರ ಪೂಜಾರಿ, ಡಾ. ಅನುಸೂಯಾ ಬಿ.ಟಿ.ಸಾಲ್ಯಾನ್, ಶೇಖರ್ ಪೂಜಾರಿ, ರಾಧಾಕೃಷಂ, ಉದ್ಯಮಿ ಶೈಲೇಶ್ ವೈ. ಸುವರ್ಣ, ಕಳ್ಳಿಗೆ ತಾರನಾಥ ಶೆಟ್ಟಿ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಮತ್ತಿತರರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಬ್ರಹ್ಮಕಲಶಾಭಿಷೇಕ
ಶ್ರೀ ಗೋಕರ್ಣನಾಥ ದೇವರಿಗೆ 12 ಗಂಟೆ ಶುಭ ಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಆರಂಭವಾಯಿತು. ದೇವಾಲಯದ ಹೊರಾಂಗಣದಲ್ಲಿರಿಸಿದ ಕಲಶ ಮಂಟಪದಿಂದ ಒಂದೊಂದೇ ಕಲಶಗಳನ್ನು ಸಾಲು ನಿಂತ ಅರ್ಚಕರು ಗರ್ಭಗುಡಿಯತ್ತ ತಂದಾಗ, ತಂತ್ರಿಗಳು ಅಭಿಷೇಕ ನೆರವೇರಿಸಿದರು. 1.30ಕ್ಕೆ ಸರಿಯಾಗಿ ತಂತ್ರಿಗಳು ಮಹಾಕಲಶಾಭಿಷೇಕ ನೆರವೇರಿಸುವುದರೊಂದಿಗೆ ಬ್ರಹ್ಮಕಲಶಾಭಿಷೇಕ ಸಮಾಪ್ತಿಗೊಂಡಿತು. ಬಳಿಕ ಮಹಾಪೂಜೆ ನೆರವೇರಿತು. 900 ತಾಮ್ರದ ಕಳಶ, 108 ಬೆಳ್ಳಿಯ ಕಲಶ, 1 ಬೆಳ್ಳಿಯ ಪ್ರಧಾನ ಕಲಶದಲ್ಲಿ ಅಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ 12.15ಕ್ಕೆ ಬ್ರಹ್ಮಕಲಶಾಭಿಷೇಕ ಆರಂಭವಾಯಿತು. ಗೋಕರ್ಣನಾಥ ದೇವರಿಗೆ ಅಭಿಷೇಕ ಆರಂಭದ ಸಮಯದಿಂದ 1.45ರ ಪ್ರಧಾನ ಕಲಶಾಭಿಷೇಕ ಪೂರ್ಣಗೊಳ್ಳುವ ತನಕದ 1.30ರ ತಾಸು ಕ್ಷೇತ್ರದ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿ ನಿಂತುಕೊಂಡು ಕಲಶಾಭಿಷೇಕದ ಕ್ಷಣಗಳಿಗೆ ಸಾಕ್ಷಿಯಾದರು. ನೂತನ ಧ್ವಜಸ್ತಂಭ ವಾಹನ ಪ್ರತಿಷ್ಠಾಪನೆಗೆ ಅವರು 67 ಮೆಟ್ಟಲಿನ ಅಟ್ಟಳಿಗೆ ಏರಿ ಗಮನ ಸೆಳೆದರು. ಮಹಾಪೂಜೆ ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ದೇವರ ಅನ್ನಪ್ರಸಾದ ಸ್ವೀಕರಿಸಿದರು.

ಧ್ವಜಸ್ತಂಭಕ್ಕೆ ಗರುಡ ಪ್ರದಕ್ಷಿಣೆ
ಬೆಳಗ್ಗೆ 8.05ಕ್ಕೆ ಸರಿಯಾಗಿ ನೂತನ ಧ್ವಜಸ್ತಂಭದಲ್ಲಿ ವಾಹನ ಪ್ರತಿಷ್ಠಾಪನೆ, ಕಲಶಾಭಿಷೇಕವಾಗಿ 8.25ಕ್ಕೆ ಧ್ವಜಾರೋಹಣ ನೆರವೇರಿತು. ಗರುಡ ಮೇಲಕ್ಕೇರುತ್ತಿದ್ದಂತೆ ಎಲ್ಲಿಂದಲೋ ಬಂದ ಗರುಡವೊಂದು ನೂತನ ಧ್ವಜಸ್ತಂಭಕ್ಕೆ ಐದು ಪ್ರದಕ್ಷಿಣೆ ಹಾಕಿತು. ಇದನ್ನು ಕಣ್ಣಾರೆ ಕಂಡ ಭಕ್ತರು ಭಕ್ತಿಪರವಶರಾದರು.