ಕದ್ರಿ ಮಂಜುನಾಥನಿಗೆ ಬ್ರಹ್ಮಕಲಶಾಭಿಷೇಕ

>>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಂಜುನಾಥ ಹಾಗೂ ಪ್ರಾಚೀನ ಮೂರ್ತಿಗಳಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಗುರುವಾರ ಬೆಳಗ್ಗೆ ನೆರವೇರಿತು.

ಬೆಳಗ್ಗೆ 6 ಗಂಟೆಗೆ ಪ್ರಾರ್ಥನೆಯಿಂದ ಮೊದಲ್ಗೊಂಡು, ಕಲಶ ಮಂಡಲದಲ್ಲಿ ಕಲಶಪೂಜೆ ನೆರವೇರಿಸಿ 1008 ಕಲಶಗಳ ಅಭಿಷೇಕ ಆರಂಭಿಸಲಾಯಿತು. 9.15ಕ್ಕೆ ಕಲಶ ಮಂಟಪದಿಂದ ಪ್ರಧಾನ ಚಿನ್ನದ ಕಲಶವನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ದೇವಳಕ್ಕೆ ಪ್ರದಕ್ಷಿಣೆ ಹಾಕಿ ಗರ್ಭಗುಡಿಗೆ ತರಲಾಯಿತು. 9.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ದೇರೆಬೈಲು ವಿಠಲದಾಸ್ ತಂತ್ರಿ ಬ್ರಹ್ಮಕಲಶಾಭಿಷೇಕ ನೆರವೇರಿಸಿದರು. ದೇವಳದ ಬಲಿಕಲ್ಲುಗಳಿಗೆ, ರಥಕ್ಕೆ ಅಭಿಷೇಕ ಪ್ರೋಕ್ಷಣೆ ಮಾಡಲಾಯಿತು. ಇದರೊಂದಿಗೆ ಕ್ಷೇತ್ರದಲ್ಲಿ ದೇವರ ಸಾನ್ನಿಧ್ಯ ವರ್ಧನೆಯಾಯಿತು.

ಪ್ರಧಾನ ಸ್ವರ್ಣಕಲಶ, ದೊಡ್ಡ ಬೆಳ್ಳಿಕಲಶ, ಚಿಕ್ಕ ಬೆಳ್ಳಿ ಕಲಶ ಮತ್ತು ತಾಮ್ರದ ಕಲಶದಲ್ಲಿ ಕದ್ರಿ ಮಠಾಧೀಶ ಶ್ರೀ ರಾಜಾ ನಿರ್ಮಲನಾಥಜಿ ಉಪಸ್ಥಿತಿಯಲ್ಲಿ ದೇವರಿಗೆ ಅಭಿಷೇಕ ನಡೆಸಲಾಯಿತು. ಸ್ವರ್ಣ ಕಲಶ ಕೊಡುಗೆ ನೀಡಿದ ಭಕ್ತ ಕೃಷ್ಣಪ್ಪ ಉಚ್ಚಿಲ, ಬೆಳ್ಳಿ ಕಲಶ ಸಮರ್ಪಿಸಿದ ಕರಾವಳಿ ಕಾಲೇಜು ಅಧ್ಯಕ್ಷ ಗಣೇಶ್ ರಾವ್, ದೇವಳ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಎ.ಜನಾರ್ದನ ಶೆಟ್ಟಿ, ಗೌರವಾಧ್ಯಕ್ಷ ವೇದವ್ಯಾಸ ಕಾಮತ್, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ವ್ಯವಸ್ಥಾಪನಾ ಸಮಿತಿ ಸದಸ್ಯ ರಾಘವೇಂದ್ರ ಭಟ್, ರಂಜನ್ ಕುಮಾರ್ ಬಿ.ಎಸ್, ಚಂದ್ರಕಲಾ ದೀಪಕ್, ಪುಷ್ಪಲತಾ ಶೆಟ್ಟಿ, ಹರಿನಾಥ ಜೋಗಿ, ದಿನೇಶ್ ದೇವಾಡಿಗ, ಸುರೇಶ್ ಕುಮಾರ್ ಕದ್ರಿ, ಮಾಜಿ ಮೇಯರ್ ಭಾಸ್ಕರ ಕೆ, ಶಶಿಧರ ಹೆಗ್ಡೆ ಮೊದಲಾದವರಿದ್ದರು.

ಸಹಸ್ರಾರು ಭಕ್ತರು ಭಾಗಿ: ಬ್ರಹ್ಮಕಲಶಾಭಿಷೇಕ ಬಳಿಕ ಮಹಾಪೂಜೆ ನಡೆಯಿತು. ಮಧ್ಯಾಹ್ನ ಪಲ್ಲಪೂಜೆ ನೆರವೇರಿಸಿ, ಭಕ್ತರಿಗೆ ದೇವರ ಅನ್ನಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ 2 ಗಂಟೆಗೆ ರಥಾರೋಹಣ, ರಾತ್ರಿ ಮಹಾರಥೋತ್ಸವ, ಮಹಾದಂಡ ಜೋಡಣೆ, ಹೋಮಗಳು, ಉತ್ಸವ ಬಲಿ, ಭೂತ ಬಲಿ ನೆರವೇರಿತು. ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬ್ರಹ್ಮಕಲಶೋತ್ಸವದಲ್ಲಿ ಭಕ್ತಿಭಾವದಿಂದ ಪಾಲ್ಗೊಂಡು ದೇವರ ಕೃಪಾಶೀರ್ವಾದಕ್ಕೆ ಪಾತ್ರರಾದರು.

ಇಂದು ಮಹಾದಂಡ ರುದ್ರಾಭಿಷೇಕ: ಕ್ಷೇತ್ರದಲ್ಲಿ ಶುಕ್ರವಾರ ಮುಂಜಾನೆ 5.30ಕ್ಕೆ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಪುಣ್ಯಾಹ, ಕವಾಟೋದ್ಘಾಟನೆ, ಗಣಯಾಗ, ಅಮೃತೇಶ್ವರಿಗೆ ಪೂಜೆ, ಮಹಾದಂಡ ರುದ್ರಾಭಿಷೇಕ, ಮಹಾರುದ್ರಯಾಗ, ಪೂರ್ಣಾಹುತಿ, ಮಹಾಪೂಜೆ, ರಾತ್ರಿ 7 ಗಂಟೆಗೆ ಅವಭೃತ, ಧ್ವಜಾವರೋಹಣ ನಡೆಯಲಿದೆ.