ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಹಬ್ಬ, ಹರಿದಿನ ಜಾತ್ರಾಮಹೋತ್ಸವಗಳು ನಮ್ಮ ನಾಡಿನ ಸಂಸ್ಕೃತಿ ಪರಂಪರೆಯ ಪ್ರತೀಕವಾಗಿವೆ ನಾವೆಲ್ಲ ಇವುಗಳನ್ನು ಉಳಿಸಿ ಮುನ್ನಡೆಸಿಕೊಂಡು ಹೋಗಬೇಕು ಎಂದು ಮಾಜಿ ಸಚಿವ ಹಾಗೂ ಎಂಎಲ್‌ಸಿ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ನಗರದಲ್ಲಿ ಸುಪ್ರಸಿದ್ಧ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಪ್ರತಿ ಜಾತ್ರೆ ಮಹೋತ್ಸವಗಳಿಗೂ ತನ್ನದೆ ಆದ ಇತಿಹಾಸ ಮಹತ್ವವಿದೆ, ಅನಾದಿಕಾಲದಿಂದಲೂ ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ನಾವೆಲ್ಲರೂ ಮುನ್ನಡೆಸಿಕೊಂಡು ಹೋಗಬೇಕಿದೆ ಎಂದರು. ನಾಡಿನ ಒಳಿತಿಗಾಗಿ, ಸಮಾಜದ ಶ್ರೇಯೋಭಿವೃದ್ಧಿಗಾಗಿ ಹಿಂದಿನವರು ಇಂಥ ಧಾರ್ಮಿಕ ಕಾರ್ಯಗಳಿಗೆ ಅಡಿಪಾಯ ಹಾಕಿದ್ದಾರೆ, ನೋವು ನಲಿವು ಮರೆತು, ಮೇಳು ಕೀಳು ಎಂಬ ಎಲ್ಲ ಭಾವನೆಗಳನ್ನು ಮೂಟೆಕಟ್ಟಿ ಎಸೆದು ಎಲ್ಲರೂ ಒಗ್ಗೂಡಬೇಕೆಂಬ ಸಂಕಲ್ಪದೊಂದಿಗೆ ಇಂಥ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.ದೇಗುಲಗಳು ನಿರ್ಮಾಣವಾದ ಸ್ಥಳಗಳನ್ನು ಹಿಂದೂಗಳು ಪುಣ್ಯಕ್ಷೇತ್ರಗಳಾಗಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ದೇವಾನುದೇವತೆಗಳ ಅನುಗ್ರಹದಿಂದ ಮನುಷ್ಯರ ಜೀವನ ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ನಮ್ಮ ಹಿರಿಯರು ಇಂಥ ಅನೇಕ ಧಾರ್ಮಿಕ ಆಚರಣೆಗಳನ್ನ ನಡೆಸಿಕೊಂಡು ಬಂದಿದ್ದಾರೆ ಎಂದರು.
ಧಾರ್ಮಿಕ ಕಾರ್ಯಕ್ರಮದಿಂದ ಸಾಮರಸ್ಯ: ನಮ್ಮ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಗೆ ವಿಶಿಷ್ಟವಾದ ಸಂಸ್ಕೃತಿ, ಸಂಪ್ರದಾಯವಿದೆ, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ್ ಹೇಳಿದರು.
ಗ್ರಾಮಗಳಲ್ಲಿ ಬಾಂಧವ್ಯ, ಒಗ್ಗಟ್ಟು ಹಾಗೂ ಪರಸ್ಪರ ಸಾಮರಸ್ಯ ಮೂಡಿಸುವಲ್ಲಿ ಧಾರ್ಮಿಕ ಕಾರ್ಯಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು. ನಾಡಿನ ಸಂಸ್ಕೃತಿ, ಪರಂಪರೆಯಲ್ಲಿ ದೇವಸ್ಥಾನಗಳಿಗೆ ಅಗ್ರಗಣ್ಯ ಸ್ಥಾನಮಾನವಿದೆ, ಪೂರ್ವಿಕರ ಕಾಲದಿಂದಲೂ ಪೂಜೆ ಪುನಸ್ಕಾರ, ಧಾರ್ಮಿಕ ವಿಧಿವಿಧಾನಗಳಿಗೆ ಪ್ರಾಶಸ್ತ್ಯ ನೀಡಿಕೊಂಡು ಬರಲಾಗುತ್ತಿದೆ, ಮುಂದಿನ ಪೀಳಿಗೆಗೂ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
