ಎಲ್ಲರ ಆದಾಯ ಪತ್ರ ಬೇಕಿಲ್ಲ

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿಗಾಗಿ ಪರದಾಡುತ್ತಿರುವವರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ಆನ್​ಲೈನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಹಾಕಲು ಕುಟುಂಬದ ಸದಸ್ಯರೆಲ್ಲರ ಆದಾಯ ಪ್ರಮಾಣ ಪತ್ರದ ಅಗತ್ಯವಿಲ್ಲ. ಯಜಮಾನನ ಆದಾಯ ಪ್ರಮಾಣ ಪತ್ರ ಇದ್ದರಷ್ಟೇ ಸಾಕು.

ಹೊಸದಾಗಿ ಆನ್​ಲೈನ್​ನಲ್ಲಿ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆಗೆ ರೂಪುಗೊಂಡಿದ್ದ ಸಾಫ್ಟ್​ವೇರ್​ನಲ್ಲಿದ್ದ ಸಣ್ಣ ತೊಡಕು ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿದೆ. ಈ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ. ಕ್ಯಾನ್ಸರ್, ಹೃದ್ರೋಗ ಸೇರಿ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದಕ್ಕೆ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್​ಗಳನ್ನು ನೀಡಿದರೆ ಉಚಿತ ಅಥವಾ ರಿಯಾಯಿತಿ ಸಿಗುತ್ತದೆ. ಇದೇ ಕಾರಣಕ್ಕೆ ಸಾರ್ವಜನಿಕರು ಈ ವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಫ್ಟ್​ವೇರ್ ಅನ್ನೇ ಎರಡು ದಿನಗಳಲ್ಲಿ ಬದಲಾವಣೆ ಮಾಡುವಂತೆ ಆಹಾರ ಸಚಿವ ಜಮೀರ್ ಅಹ್ಮದ್ ಖಾನ್ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

500 ಕೋಟಿ ರೂ. ಉಳಿತಾಯ: ರಾಜ್ಯದಲ್ಲಿ 4.50 ಲಕ್ಷ ನಕಲಿ ಕಾರ್ಡ್​ಗಳನ್ನು ರದ್ದು ಮಾಡಿರುವುದರಿಂದ ಸರ್ಕಾರಕ್ಕೆ 500 ಕೋಟಿ ರೂ. ಉಳಿತಾಯವಾಗಿದೆ. ಇದು ವಾರ್ಷಿಕ ಶೇ. 8 ಆಹಾರಧಾನ್ಯದ ಉಳಿತಾಯ ಮಾಡುತ್ತದೆ.

ಪಡಿತರ ವ್ಯವಸ್ಥೆಗಾಗಿಯೇ ಈ ವರ್ಷ 3,393 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಇದು ಕಳೆದ ವರ್ಷಕ್ಕಿಂತ ಕಡಿಮೆ. ರಾಜ್ಯದಲ್ಲಿ ಒಟ್ಟಾರೆ 1.13 ಕೋಟಿ ಬಿಪಿಎಲ್ ಕಾರ್ಡ್​ಗಳಿವೆ. 7.80 ಲಕ್ಷ ಎಎವೈ ಹಾಗೂ 18.96 ಲಕ್ಷ ಎಪಿಎಲ್ ಕಾರ್ಡ್​ಗಳಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ.