ಇಂಡೋ-ಪಾಕ್​ ಕ್ರಿಕೆಟ್​ ಪಂದ್ಯ ರದ್ದು ಮದ್ದಲ್ಲ: ಜನ ಗಣ ಮನ ಹಾಡಿದ್ದ ಪಾಕ್​ ಕ್ರಿಕೆಟ್​ ಅಭಿಮಾನಿಯ ಅಭಿಮತ

ದುಬೈ: ಏಷ್ಯಾಕಪ್​ ಕ್ರಿಕೆಟ್​ ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದ ಪಂದ್ಯದಲ್ಲಿ ಭಾರತೀಯ ರಾಷ್ಟ್ರಗೀತೆ “ಜನ ಗಣ ಮನ” ಹಾಡಿ ಭಾರತೀಯರ ಪ್ರೀತಿಗೆ ಪಾತ್ರರಾಗಿದ್ದ ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿ ಆದಿಲ್​ ತಾಜ್​, ಸದ್ಯ ಉಭಯ ದೇಶಗಳ ನಡುವೆ ಉಂಟಾಗಿರುವ ಧ್ವೇಷಮಯ ವಾತಾವರಣದ ಬಗ್ಗೆ ಮಾತನಾಡಿದ್ದು, “ಪುಲ್ವಾಮ ಘಟನೆ ಅತ್ಯಂತ ಬೇಸರದ್ದು. ಆದರೆ, ಎರಡು ದೇಶಗಳ ನಡುವಿನ ಪಂದ್ಯವನ್ನೇ ರದ್ದು ಮಾಡುವುದು ಸಮಸ್ಯೆಗೆ ಪರಿಹಾರವಲ್ಲ,” ಎಂದು ಹೇಳಿದ್ದಾರೆ.

ಕಳೆದ ವರ್ಷ ದುಬೈನಲ್ಲಿ ಏಷ್ಯಾಕಪ್​ ಕ್ರಿಕೆಟ್​ ಸರಣಿ ಆಯೋಜನೆಗೊಂಡಿತ್ತು. ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಈ ಪಂದ್ಯದ ಆರಂಭಕ್ಕೂ ಮುನ್ನ ಭಾರತದ ರಾಷ್ಟ್ರಗೀತೆ ಮೊಳಗಿತ್ತು. ಈ ವೇಳೆ ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿ ಆದಿಲ್​ ತಾಜ್​ ಜನ ಗಣ ಮನ ಹಾಡಿದ್ದರು. ಈ ವಿಡಿಯೋ ವೈರಲ್​ ಆಗಿ, ಆದಿಲ್​ ತಾಜ್​ ಎರಡೂ ದೇಶಗಳಲ್ಲೂ ಪ್ರಶಂಸೆಗೆ ಪಾತ್ರರಾಗಿದ್ದರು.

ಸದ್ಯ ಪುಲ್ವಾಮ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ವಿಶ್ವಕಪ್​ ಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ರದ್ದಾಗುವ ಸಾಧ್ಯತೆಗಳು ಎದುರಾಗಿವೆ. ಇದೇ ಹಿನ್ನೆಲೆಯಲ್ಲಿ ಮಾತನಾಡಿರುವ ಆದಿಲ್​ ತಾಜ್​, ” ಭಾರತದಲ್ಲಿ ನಡೆದಿರುವ ಘಟನೆಯ ನಂತರವೂ ದುಬೈನಲ್ಲಿರುವ ಭಾರತೀಯರು ಮತ್ತು ಪಾಕಿಸ್ತಾನೀಯರು ಅದೇ ಹಿಂದಿನ ಬಾಂಧವ್ಯವನ್ನು ಹಂಚಿಕೊಳ್ಳುತ್ತಿದ್ದಾರೆ. ಅದರ ಹಿಂದೆ ಕ್ರಿಕೆಟ್​ ಇದೆ. 2004 ಮತ್ತು 2006ರಲ್ಲಿ ಭಾರತ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆಗ ಭಾರತದ ಆಟಗಾರರಿಗೆ ಪಾಕಿಸ್ತಾನದ ನೆಲದಲ್ಲಿ ಎಷ್ಟು ಪ್ರೀತಿ ಸಿಕ್ಕಿದೆ ಎಂಬುದನ್ನು ಅಂದಿನ ಆಟಗಾರರನ್ನು ಕೇಳಿದರೆ ತಿಳಿಯುತ್ತದೆ,” ಎಂದು ಹೇಳಿದ್ದಾರೆ.

“ಪಾಕಿಸ್ತಾನಕ್ಕಿಂತಲೂ ಭಾರತದಲ್ಲಿ ಸಿಕ್ಕ ಹೆಚ್ಚಿನ ಪ್ರೀತಿ ಮತ್ತು ಅಭಿಮಾನವನ್ನು ಶಾಹಿದ್​ ಅಫ್ರಿದಿ, ಶೋಯೆಬ್​ ಅಕ್ತರ್​ ಎಂದೂ ಅಲ್ಲಗಳೆಯುವುದಿಲ್ಲ. ಸಚಿನ್​ ತೆಂಡೂಲ್ಕರ್​ ಅವರ ಸಹಿಯುಳ್ಳ ಜೆರ್ಸಿ ಈಗಲೂ ಶಾಹಿದ್​ ಅಫ್ರೀದಿ ಅವರ ಮನೆಯಲ್ಲಿದೆ. ಅಫ್ರಿದಿ ನಿವೃತ್ತರಾದ ನಂತರ ಅವರಿಗೆ ವಿರಾಟ್​ ಕೊಹ್ಲಿ ನೀಡಿದ್ದ ಜರ್ಸಿಯೂ ಅವರ ಮನೆಯಲ್ಲಿದೆ. ‘ನಿಮ್ಮೊಂದಿಗೆ ಆಟವಾಡುವುದು ನಮಗೆ ಎಂದಿಗೂ ಸಂತೋಷದ ವಿಚಾರ ಶಾಹಿದ್​ ಬಾಯ್​,’ ಎಂದು ಅದರಲ್ಲಿ ವಿರಾಟ್​ ಕೊಹ್ಲಿ ಮತ್ತು ಭಾರತೀಯ ಆಟಗಾರರು ಬರೆದಿದ್ದಾರೆ. ಕೊಹ್ಲಿ ಅವರು ಶಾಹಿದ್​ ಅಫ್ರೀದಿ ಅವರ ಫೌಂಡೇಷನ್​ಗೆ ದೇಣಿಗೆಯನ್ನೂ ನೀಡಿದ್ದಾರೆ. ಇಂಥ ಹಲವು ಉದಾಹರಣೆಗಳು ಎರಡೂ ದೇಶಗಳ ನಡುವೆ ಸಿಗುತ್ತದೆ. ಕಾರಣ ಕ್ರಿಕೆಟ್​ ಮಾತ್ರ. ಕ್ರಿಕೆಟ್, ​ ಅಭಿಮಾನಿಗಳು ಹಿಂದಿನಿಂದಲೂ ಪ್ರೀತಿ ಹಂಚಿಕೊಂಡೇ ಬರುತ್ತಿದ್ದಾರೆ,” ಎಂದು ತಾಜ್​ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್​ ಮಂಡಳಿ ಮತ್ತು ಭಾರತೀಯ ರಾಜಕಾರಣಿಗಳನ್ನು ಮನವಿ ಮಾಡಿರುವ ಆದಿಲ್​ ತಾಜ್​, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವಿಶ್ವಕಪ್​ ಕ್ರಿಕೆಟ್​ ಪಂದ್ಯವನ್ನು ರದ್ದು ಮಾಡಬಾರದು ಎಂದು ಕೋರಿದ್ದಾರೆ. ಅಲ್ಲದೆ ಎರಡೂ ದೇಶಗಳ ನಡುವಿನ ಈ ಪರಿಸ್ಥಿತಿ ಆದಷ್ಟು ಬೇಗ ನಿವಾರಣೆಯಾಗಲಿ ಎಂದೂ ಅವರು ಆಶಿಸಿದ್ದಾರೆ.