ಪಾಲಕರ ಮಡಿಲು ಸೇರಿದ ಬಾಲಕ

ಸವಣೂರ: ತಾಯಿಯ ಬುದ್ಧಿಮಾತಿಗೆ ಕೋಪಗೊಂಡು ಮನೆಬಿಟ್ಟು ಬಂದಿದ್ದ ಬಾಲಕನನ್ನು ಸಾಮಾಜಿಕ ಕಾರ್ಯಕರ್ತ ಈರಯ್ಯ ಹಿರೇಮಠ ಆರ್​ಎಸ್​ಎಸ್ ಕಾರ್ಯಕರ್ತರ ಸಹಕಾರದಿಂದ ಪಾಲಕರಿಗೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ಬುಧವಾರ ಜರುಗಿದೆ.

ಗೋಕಾಕ ಮೂಲದ ನಮೀತ ಮಲ್ಲಿಕಾರ್ಜುನ ಕಾಮಗೌಡ್ರ (14) ನ. 23ರಂದು ಮನೆಯಿಂದ ಹೊರಟು ಬೆಂಗಳೂರು ಸೇರಿದ್ದ. ಈ ಕುರಿತು ಪಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಮಗ ಕಂಡುಬಂದಲ್ಲಿ ಸಂರ್ಪಸಲು ಕೋರಿದ್ದರು. ಬೆಂಗಳೂರಿನಿಂದ ನ. 27ರ ಬೆಳಗ್ಗೆ ಹೊರಟು ಸವಣೂರಿಗೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಈರಯ್ಯ ಹಿರೇಮಠ ಬಾಲಕನನ್ನು ಮಾತನಾಡಿಸಿದಾಗ ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾನೆ. ಬಾಲಕನ ಮನೆ ವಿಳಾಸ ಪಡೆದು ಗೋಕಾಕ ಆರ್​ಎಸ್​ಎಸ್ ಕಾರ್ಯಕರ್ತರನ್ನು ಸಂರ್ಪಸಿ, ಕಾಮಗೌಡ್ರ ಕುಟುಂಬಸ್ಥರೊಂದಿಗೆ ಮಾತನಾಡಿ ವಿಷಯ ತಿಳಿಸಿದ್ದಾರೆ. ಬಾಲಕನ ತಾಯಿ ಭಾರತಿ ಹಾಗೂ ಕುಟುಂಬಸ್ಥರು ಆಗಮಿಸಿ ಮಗನನ್ನು ಕರೆದುಕೊಂಡು ಹೋದರು.

ಬಾಲಕ ತನ್ನ ಕುಟುಂಬವನ್ನು ಸೇರಲು ಸಹಕಾರ ನೀಡಿದ ಪಟ್ಟಣದ ರಾಶಿನಕರ, ಹಿರೇಮಠ ಕುಟುಂಬಸ್ಥರನ್ನು ಹಾಗೂ ಆರ್​ಎಸ್​ಎಸ್ ಕಾರ್ಯಕರ್ತರನ್ನು ಗೋಕಾಕ ಪಟ್ಟಣದ ನಿವಾಸಿಗಳು ಅಭಿನಂದಿಸಿದರು.