ಮಾಡೆಲ್​ ಆಗಬೇಕೆಂದಿದ್ದವಳನ್ನು ಮನಸಾರೆ ಪ್ರೀತಿಸಿದ: ಶೀಲ ಶಂಕಿಸಿ ಮುಖ ಜಜ್ಜಿ ಕೊಲೆ ಮಾಡಿದ!

ನಾಗ್ಪುರ: ಪ್ರೀತಿಯೇ ಹಾಗೆ. ಯುವಕ ಅಥವಾ ಯುವತಿ ನೋಡಲು ಸ್ವಲ್ಪ ಸುಂದರವಾಗಿದ್ದರೆ ಪರಸ್ಪರರು ಆಕರ್ಷಣೆಗೆ ಒಳಗಾಗಿ ಪ್ರೇಮಪಾಶದಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯ ಸಂಗತಿ. ಈ ಪ್ರಕರಣದಲ್ಲಿ ಕೂಡ ಯುವಕ ಮತ್ತು ಯುವತಿ ಪರಸ್ಪರರ ಸೌಂದರ್ಯಕ್ಕೆ ಮಾರುಹೋಗಿ ಮನಸಾರೆ ಪ್ರೀತಿಸಿದ್ದರು. ಆದರೆ, ಒಂದು ಸಣ್ಣ ಅನುಮಾನ ಒಬ್ಬರನ್ನು ಬಲಿ ತೆಗೆದುಕೊಂಡಿದೆ.

ಮಹಾರಾಷ್ಟ್ರದ ನಾಗ್ಪುರದ ನಿವಾಸಿಗಳಾದ ಖುಷಿ ಪರಿಹಾರ್​ ಮತ್ತು ಅಶ್ರಫ್​ ಶೇಖ್​ ಇಬ್ಬರೂ ಮನಸಾರೆ ಪ್ರೀತಿಸುತ್ತಿದ್ದರು. ಪ್ರಣಯ ಪಕ್ಷಿಗಳಂತೆ ಇವರು ತಿರುಗಾಡದ ಸ್ಥಳವಿರಲಿಲ್ಲ. ಇಬ್ಬರೂ ಮದುವೆಯಾಗಿ ಜೀವನದಲ್ಲಿ ನೆಲೆ ಕಂಡುಕೊಳ್ಳುವ ಕನಸೂ ಕಂಡಿದ್ದರು. ಆದರೆ, ಖುಷಿಯ ಶೀಲದ ಬಗ್ಗೆ ಅಶ್ರಫ್​ಗೆ ಅನುಮಾನ ಮೂಡಲಾರಂಭಿಸಿತ್ತು. ಆಕೆಯ ಪ್ರತಿಯೊಂದು ವರ್ತನೆಯನ್ನು ಆತ ಆಕ್ಷೇಪಿಸಲು ಆರಂಭಿಸಿದ್ದ. ಇದಕ್ಕೆ ಖುಷಿ ವಿರೋಧ ವ್ಯಕ್ತಪಡಿಸಿದಾಗಲೆಲ್ಲ ಇಬ್ಬರ ನಡುವೆ ಜಗಳವಾಗುತ್ತಿತ್ತು.

ಈ ಜಗಳ ಕೆಲವೊಮ್ಮೆ ತಾರಕಕ್ಕೇರುತ್ತಿತ್ತಾದರೂ, ಸ್ವಲ್ಪ ಸಮಯದ ಬಳಿಕ ತಣ್ಣಗಾಗುತ್ತಿತ್ತು. ಶನಿವಾರ ಕೂಡ ಇಬ್ಬರ ನಡುವೆ ಜಗಳವಾಗಿತ್ತಾದರೂ, ಸ್ವಲ್ಪ ಸಮಯದ ಬಳಿಕ ಒಟ್ಟಾಗಿ ಹೊರಹೋಗಲು ನಿರ್ಧರಿಸಿದ್ದರು. ಅದರಂತೆ ತನ್ನ ಕಾರಿನಲ್ಲಿ ಖುಷಿಯನ್ನು ಕೂರಿಸಿಕೊಂಡ ಅಶ್ರಫ್​ ಪಂಡುರ್ನಾ-ನಾಗ್ಪುರ ಹೆದ್ದಾರಿಯಲ್ಲಿ ಸಾಗುತ್ತಿದ್ದ. ಸಾವ್ಲಿ ಫತಾ ಎಂಬಲ್ಲಿ ನಿರ್ಜನವಾದ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿದ್ದ.

ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಖುಷಿ ಮೇಲೆ ಹಲ್ಲೆ ಮಾಡಿದ ಅಶ್ರಫ್​, ಆಕೆಯ ಮುಖವನ್ನು ಜಜ್ಜಿ ಹತ್ಯೆ ಮಾಡಿದ್ದ. ಬಳಿಕ ಏನೂ ತಿಳಿಯದವನಂತೆ ಮನೆಗೆ ಮರಳಿದ್ದ. ದಾರಿಹೋಕರು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಡೆಲ್​ ಆಗಲು ಬಯಸಿದ್ದ ಖುಷಿ ಪರಿಹಾರ್​ ಶವ ಇದು ಎಂದು ಪೊಲೀಸರು ಗುರುತಿಸಿದ್ದರು. ಅನುಮಾನದ ಮೇರೆಗೆ ಅಶ್ರಫ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಖುಷಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ. ಇತ್ತೀಚಿಗೆ ಆಕೆ ಹಲವು ಯುವಕರೊಂದಿಗೆ ತಿರುಗುತ್ತಿದ್ದಳು. ಹಾಗಾಗಿ ಆಕೆ ನಡವಳಿಕೆ ಹಾಗೂ ಶೀಲದ ಬಗ್ಗೆ ಅನುಮಾನಗೊಂಡು ಈ ಕೃತ್ಯ ಎಸಗಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ನಾಗ್ಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *