ಮೊಬೈಲ್ ಕೊಡಿಸಲಿಲ್ಲ ಎಂದು ರೈಲು ಹತ್ತಿದ ಭಟ್ಕಳದ ಬಾಲಕ

ಉಡುಪಿ: ಮನೆಯಲ್ಲಿ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನೆ ಬಿಟ್ಟು ರೈಲು ಹತ್ತಿದ್ದ ಭಟ್ಕಳದ ವಿದ್ಯಾರ್ಥಿಯನ್ನು ಉಡುಪಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ರಕ್ಷಿಸಿ, ಆತನ ತಾಯಿಗೆ ಒಪ್ಪಿಸಿದ್ದಾರೆ.

ಭಟ್ಕಳ ಸೋನಾರ್ಕೇರಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಅತುಲ್ ರಮಾನಾಥ ಪೈ(15) ರಕ್ಷಿಸಲ್ಪಟ್ಟ ಬಾಲಕ. ಮನೆಯಲ್ಲಿ ಮೊಬೈಲ್ ಕೊಡಿಸುವಂತೆ ಹಠ ಮಾಡಿದ್ದ ಬಾಲಕನಿಗೆ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವಂತೆ ಮನೆಯವರು ಗದರಿದ್ದರು. ಇದರಿಂದ ಸಿಟ್ಟಾದ ಬಾಲಕ ಮಾ.29ರಂದು ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿ ಉಡುಪಿ ರೈಲು ನಿಲ್ದಾಣಕ್ಕೆ ಬಂದಿದ್ದಾನೆ. ಮಾ.30ರಂದು ರೈಲ್ವೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಗಾಂವ್ಕರ್, ಮುಖ್ಯಪೇದೆ ವೇಣು ಸಿ.ಎಚ್ ಅವರು ಬಾಲಕ ಫ್ಲಾಟ್‌ಫಾರ್ಮ್‌ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದನ್ನು ಗಮನಿಸಿದ್ದಾರೆ. ಆತನನ್ನು ವಿಚಾರಿಸಿದಾಗ ಆತ ಆಸ್ಪತ್ರೆಯಲ್ಲಿರುವ ತನ್ನ ಗೆಳೆಯನನ್ನು ನೋಡುವುದಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಆತನ ಉತ್ತರದಿಂದ ಸಂಶಯಗೊಂಡು, ಕಚೇರಿಗೆ ಕರೆದೊಯ್ದು ವಿಚಾರಿಸಿದಾಗ ಮೊಬೈಲ್ ವಿಚಾರ ತಿಳಿಸಿದ್ದಾನೆ.

ಬಳಿಕ ಆತನ ಶಿಕ್ಷಕರಲ್ಲಿ ವಿಚಾರಿಸಿ, ತಾಯಿಗೆ ಮಾಹಿತಿ ನೀಡಲಾಗಿದೆ. ತಾಯಿ ಭಾನುವಾರ ಉಡುಪಿಗೆ ಬಂದು ಮಗನನ್ನು ಕರೆದುಕೊಂಡು ಹೋಗಿದ್ದಾರೆ. ತಾಯಿಗೆ ಬಾಲಕನನ್ನು ಒಪ್ಪಿಸುವ ವೇಳೆ ರೈಲ್ವೆ ಪ್ರಾದೇಶಿಕ ಪ್ರಬಂಧಕ ವಿನಯಕುಮಾರ್ ಮತ್ತು ವಿಭಾಗ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *