ಕರ್ನಾಟಕ ದೇಶೀಯ ಟಿ20 ಚಾಂಪಿಯನ್

ಇಂದೋರ್: ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಕಳೆದ ಒಂದು ದಶಕದಿಂದ ಗಗನಕುಸುಮವಾಗಿದ್ದ ಚುಟುಕು ಕದನದಲ್ಲೂ ಕರ್ನಾಟಕ ತಂಡ ಯಶ ಸಾಧಿಸಿದೆ. ಪ್ರಸಕ್ತ ದೇಶೀಯ ಕ್ರಿಕೆಟ್ ಋತುವಿನ ಕಡೆಯ ಟೂರ್ನಿಯಾದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ 8 ವಿಕೆಟ್​ಗಳಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್​ಪಟ್ಟ ಅಲಂಕರಿಸಿತು. ಇದರೊಂದಿಗೆ ದೇಶೀಯ ಕ್ರಿಕೆಟ್​ನ ಎಲ್ಲ ಮಾದರಿಯ ಟ್ರೋಫಿ ಜಯಿಸಿದ ಖ್ಯಾತಿಗೆ ಒಳಗಾಯಿತು.

ಹೋಳ್ಕರ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ, ನೌಶಾದ್ ಶೇಖ್ (69*ರನ್, 41 ಎಸೆತ, 5 ಬೌಂಡರಿ, 3 ಸಿಕ್ಸರ್) ಬ್ಯಾಟಿಂಗ್ ನೆರವಿನಿಂದ 4 ವಿಕೆಟ್​ಗೆ 155 ರನ್​ಗಳಿಸಿತು. ಪ್ರತಿಯಾಗಿ ಮಯಾಂಕ್ ಅಗರ್ವಾಲ್ (85*ರನ್, 57 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ರೋಹನ್ ಕದಂ (60 ರನ್, 39 ಎಸೆತ, 6 ಬೌಂಡರಿ, 3 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಫಲವಾಗಿ 18.3 ಓವರ್​ಗಳಲ್ಲಿ 159 ರನ್​ಗಳಿಸಿ ಜಯದ ನಗೆ ಬೀರಿತು.

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಕರ್ನಾಟಕ ಆರಂಭದಲ್ಲೇ ಶರತ್ ಬಿಆರ್ (2) ವಿಕೆಟ್ ಕಳೆದುಕೊಂಡಿತು. ಬಳಿಕ, ಉತ್ತಮ ಫಾಮ್ರ್ ನಲ್ಲಿದ್ದ ರೋಹನ್ ಕದಂ ಹಾಗೂ ಅನುಭವಿ ಮಯಾಂಕ್ ಅಗರ್ವಾಲ್ ಜೋಡಿ ಬಿರುಸಿನ ಬ್ಯಾಟಿಂಗ್​ನಿಂದ ಪಂದ್ಯದ ದಿಕ್ಕನ್ನೇ ಬದಲಿಸಿತು. ಮಹಾರಾಷ್ಟ್ರ ಬೌಲರ್​ಗಳ ಸವಾಲನ್ನು ಲೀಲಾಜಾಲವಾಗಿ ಎದುರಿಸಿದ ಈ ಜೋಡಿ ಪರಸ್ಪರ ಪೈಪೋಟಿಗಿಳಿದಂತೆ ರನ್ ಬಾರಿಸಿದರು.ಆರಂಭಿಕ ವೈಫಲ್ಯವನ್ನು ಲೆಕ್ಕಿಸದೆ ಈ ಜೋಡಿ 3ನೇ ಓವರ್​ನಿಂದಲೇ ಸ್ಪೋಟಕ ಬ್ಯಾಟಿಂಗ್ ನಡೆಸಿತು. ಈ ಜೋಡಿಯನ್ನು ಬೇರ್ಪಡಿಸಲು ಮಹಾರಾಷ್ಟ್ರ ನಾಯಕ ಹಲವು ಬೌಲರ್​ಗಳನ್ನು ಬದಲಿಸಿದರೂ ಪ್ರಯೋಜನವಾಗಲಿಲ್ಲ. ಈ ಜೋಡಿ 2ನೇ ವಿಕೆಟ್​ಗೆ 92 ರನ್ ಜತೆಯಾಟವಾಡುವ ಮೂಲಕ ಗೆಲುವನ್ನು ಸುಲಭವಾಗಿಸಿಕೊಂಡಿತು. ಗೆಲುವಿನತ್ತ ದಾಪುಗಾಲಿಟ್ಟಿದ್ದ ವೇಳೆ ಕದಂ, ದಿವ್ಯಾಂಗ್ ಎಸೆತದಲ್ಲಿ ವಿಜಯ್ ಜೋಲ್ ಹಿಡಿತ ಅದ್ಭುತ ಕ್ಯಾಚ್​ಗೆ ಬಲಿಯಾದರು. ಬಳಿಕ ಬಂದ ಅನುಭವಿ ಕರುಣ್ ನಾಯರ್ (8) ಮಯಾಂಕ್ ಜತೆ 3ನೇ ವಿಕೆಟ್​ಗೆ ಮುರಿಯದ 53 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಸ್ಪೋಟಿಸಿದ ನೌಶಾದ್​ಶೇಖ್

ಮಹಾರಾಷ್ಟ್ರ ತಂಡಕ್ಕೆ ಆಲ್ರೌಂಡರ್ ನೌಶಾದ್ ಶೇಖ್ ಆಸರೆಯಾದರು. ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದರು. 10ನೇ ಓವರ್ ವೇಳೆಗೆ 55 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ವೇಳೆ ನೌಶಾದ್ ಜತೆಯಾದ ಅನುಭವಿ ಅಂಕಿತ್ ಭಾವ್ನೆ (29ರನ್, 25 ಎಸೆತ, 4 ಬೌಂಡರಿ) 4ನೇ ವಿಕೆಟ್​ಗೆ 81 ರನ್ ಪೇರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಲು ನೆರವಾದರು. ಇದಕ್ಕೂ ಮೊದಲು ಆರಂಭಿಕರಾದ ರುತುರಾಜ್ ಗಾಯಕ್ವಾಡ್ (12) ಹಾಗೂ ರಾಹುಲ್ ತ್ರಿಪಾಠಿ (30ರನ್, 32 ಎಸೆತ, 3 ಬೌಂಡರಿ) ಬಿರುಸಿನ ಆರಂಭ ನೀಡಲು ವಿಫಲರಾದರು.

ರಾಜ್ಯಕ್ಕೆ ಪ್ರಶಸ್ತಿಗಳ ಸುಗ್ಗಿ..

ಪ್ರಸಕ್ತ ವರ್ಷದ ಆರಂಭಿಕ ತಿಂಗಳಲ್ಲೇ ಕರ್ನಾಟಕಕ್ಕೆ (ಬೆಂಗಳೂರು ಫ್ರಾಂಚೈಸಿಗಳು ಸೇರಿ) ಮೂರು ಪ್ರಶಸ್ತಿಗಳು ಬಂದಂತಾಗಿದೆ. ಜನವರಿಯಲ್ಲಿ ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್ ಪ್ರಶಸ್ತಿ ಗೆದ್ದರೆ, ಅದೇ ತಿಂಗಳು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಬೆಂಗಳೂರು ರ್ಯಾಪ್ಟರ್ಸ್ ತಂಡ ಚಾಂಪಿಯನ್ ಆಯಿತು. ರಣಜಿ ಟ್ರೋಫಿಯಲ್ಲಿ ಸೋತ ಕರ್ನಾಟಕ, ಟಿ20ಯಲ್ಲಿ ಚಾಂಪಿಯನ್ ಆಗಿದೆ. ಐಎಸ್​ಎಲ್​ನಲ್ಲಿ ಬೆಂಗಳೂರು ಎಫ್​ಸಿ ಫೈನಲ್​ನಲ್ಲಿದೆ. ಇದರಿಂದ ಐಪಿಎಲ್​ನಲ್ಲಿ ಆರ್​ಸಿಬಿ ಪ್ರಶಸ್ತಿ ಕನಸಿಗೆ ಮತ್ತಷ್ಟು ಬಲ ಬಂದಿದೆ.

4- ದೇಶೀಯ ಕ್ರಿಕೆಟ್​ನಲ್ಲಿನ ಎಲ್ಲ ಮೂರು (ರಣಜಿ, ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ) ಮಾದರಿಯ ಟೂರ್ನಿಗಳನ್ನು ಗೆದ್ದ 4ನೇ ತಂಡ ಕರ್ನಾಟಕ. ಇದಕ್ಕೂ ಮೊದಲು ಗುಜರಾತ್, ಬಂಗಾಳ ಹಾಗೂ ತಮಿಳುನಾಡು ಈ ಗೌರವಕ್ಕೆ ಪಾತ್ರವಾಗಿದ್ದವು.

14-  ಕರ್ನಾಟಕ ತಂಡ ದೇಶೀಯ ಟಿ20ಯಲ್ಲಿ ಸತತ 14ನೇ ಜಯ ದಾಖಲಿಸಿರುವ ಕೆಕೆಆರ್ ದಾಖಲೆಯನ್ನು ಸರಿಗಟ್ಟಿತು. ಕಳೆದ ವರ್ಷದ ಕೊನೆಯಲ್ಲಿ 2 ಹಾಗೂ ಈ ವರ್ಷ ಸತತ 12 ಪಂದ್ಯಗಳಲ್ಲಿ ರಾಜ್ಯ ಗೆದ್ದಿದೆ. ಕೆಕೆಆರ್ 2014ರಲ್ಲಿ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್​ನಲ್ಲಿ ಈ ಸಾಧನೆ ಮಾಡಿತ್ತು.

01-  ಮುಷ್ತಾಕ್ ಅಲಿ ಟಿ20 ಟೂರ್ನಿಯ ಒಂದೇ ಆವೃತ್ತಿಯಲ್ಲಿ 500 ರನ್ ಬಾರಿಸಿದ ಮೊದಲ ಆಟಗಾರ ರೋಹನ್ ಕದಂ. ಆಡಿದ 12 ಪಂದ್ಯಗಳಲ್ಲಿ ಕದಂ 5 ಅರ್ಧಶತಕದೊಂದಿಗೆ 536 ರನ್ ಬಾರಿಸಿದರು.