ಮುಳ್ಳಿನ ಬೇಲಿಯೊಳಗೆ ನೆಗೆದ ಭಕ್ತಸಮೂಹ

ಯಳಂದೂರು: ಛಾವಣಿ ಇಲ್ಲದ ಊರ ಹೊರಗೆ ಇರುವ ಸದಾ ಬಿಸಿಲು ತಲೆ ಮೇಲೆ ಬೀಳುವ ಬಿಸಿಲು ಮಾರಮ್ಮನ ದೇಗುಲ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಲುಸಾಲಾಗಿ ಸತ್ತಿಗೆ ಸೂರಿಪಾನಿಗಳೊಂದಿಗೆ ಬಂದು, ಮಂಗಳವಾದ್ಯಗಳೊಂದಿಗೆ ಎದುರಿಗೆ ಇರುವ ಮುಳ್ಳಿನ ಪೊದೆಗಳೊಳಗೆ ನೆಗೆಯುವ ಭಕ್ತಗಣ!

ಇಂತಹ ವಿಚಿತ್ರ-ವಿಸ್ಮಯಕಾರಿ ಘಟನೆಗೆ ಪ್ರತಿ ವರ್ಷ ಸಾಕ್ಷಿಯಾಗುವುದು ಸಮೀಪದ ಗೂಳೀಪುರ ಗ್ರಾಮ. ಹಬ್ಬವು ನೆರೆದಿದ್ದ ಭಕ್ತರಿಗೆ ಭಕ್ತಿಯ ಕಿಚ್ಚಿನೊಂದಿಗೆ, ಮುಳ್ಳಿನ ಪೊದೆಯೊಳಗೆ ಬಿದ್ದರೂ ಗಾಯಗೊಳ್ಳದ ಭಕ್ತರ ವಿಸ್ಮಯಕಾರಿ ದೃಶ್ಯವನ್ನು ಕಣ್ಣಿಗೆ ಕಟ್ಟಿಕೊಟ್ಟಿತು.

ವಿಶಿಷ್ಟ ಆಚರಣೆ: ಜಿಲ್ಲೆಯಲ್ಲೇ ವಿಶಿಷ್ಟ ಆಚರಣೆಯೊಂದಿಗೆ ಗುರುತಿಸಿಕೊಂಡಿರುವ ಈ ಗ್ರಾಮದಲ್ಲಿ ಜಾತ್ರೆ ಸಂದರ್ಭದಲ್ಲಿ ನಡೆಯುವ ಇಂತಹ ಆಚರಣೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ನೆರೆದಿದ್ದರು. ದೇವಸ್ಥಾನವನ್ನು ತಳಿರು ತೋರಣ ಹಾಗೂ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಅಲಂಕೃತ ಸತ್ತಿಗೆ ಸೂರಿಪಾನಿಗಳನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ದೇವಸ್ಥಾನದ ಮುಂಭಾಗದಲ್ಲಿರುವ ಜಮೀನಿನಲ್ಲಿ ಪೂಜೆ ಮಾಡಲಾಯಿತು.
ನಂತರ ಸುತ್ತಲೂ ಇರುವ ಹೆಸರಿಗೆ ಮುಳ್ಳಿನ ಪೊದೆಗಳಲ್ಲಿ ಮಾರಮ್ಮ, ಊರುಕಾತಮ್ಮ, ಕುಣಗಳ್ಳಿ ಮಾರಮ್ಮ, ಬಿಸಿಲು ಮಾರಮ್ಮ, ಕುಂಟ ಮಾರಮ್ಮ, ನಾಡಮೇಗಲಮ್ಮ, ಮಂಟೇಸ್ವಾಮಿ ದೇವರುಗಳ ಪ್ರತಿನಿಧಿಗಳು ಓಡೋಡಿ ಬಂದು ಮುಳ್ಳಿನ ಪೊದೆಗಳಿಗೆ ಬೀಳುತ್ತಿದ್ದ ದೃಶ್ಯ, ಇವರನ್ನು ಎತ್ತಿಕೊಳ್ಳಲು ಇನ್ನಷ್ಟು ಜನ ಹೋಗಿ ಮುಳ್ಳಿನ ಪೊದೆಗಳಿಂದ ಬಿಡಿಸುತ್ತಿದ್ದ ದೃಶ್ಯ ನೆರೆದಿದ್ದ ಭಕ್ತರಲ್ಲಿ ಅಚ್ಚರಿಯೊಂದಿಗೆ ಭಕ್ತಿಯ ಕಿಚ್ಚು ಹೆಚ್ಚಿಸಿತು.

ಇದನ್ನು ದೂರದಿಂದಲೇ ನೋಡಬೇಕೆಂಬ ಷರತ್ತಿನೊಂದಿಗೆ ಸಾವಿರಾರು ಭಕ್ತರು ಈ ದೃಶ್ಯ ಕಣ್ತುಂಬಿಕೊಂಡರು.
ನಂತರ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ, ದೇವರಿಗೆ ಹೊಂಬಾಳೆಯನ್ನು ತರುವ ಮೂಲಕ ಈ ವಿಧಿಯನ್ನು ಪೂರ್ಣಗೊಳಿಸಲಾಯಿತು. ಇದಕ್ಕೂ ಮುಂಚೆ ದೇಗುಲದ ಮುಂಭಾಗ ಮಹಿಳೆಯರು ಬೆಲ್ಲದ ಅನ್ನ ಹಾಗೂ ತಂಬಿಟ್ಟುಗಳನ್ನು ಅಲ್ಲೇ ಸೌದೆ ಒಲೆಯನ್ನು ಹಾಕಿ, ಮಣ್ಣಿನ ಮಡಕೆಗಳಲ್ಲಿ ತಯಾರಿಸಿ ದೇವರಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಿದರು. ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೂಂಡಿದ್ದರು.