ಹುಬ್ಬಳ್ಳಿ: ಗೌತಮ ಬುದ್ಧ ಎಂದರೆ ಜ್ಞಾನ, ಅಂತಹ ಜ್ಞಾನಿಗಳ ಕುರಿತು ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ದಲಿತರಲ್ಲಿ ಜ್ಞಾನದ ಬೆಳಕು ಹರಿಯುತ್ತಿದೆ ಎಂಬುದನ್ನು ತೋರಿಸಿಕೊಟ್ಟಂತಾಗಿದೆ. ಭಾರತವನ್ನು ಈಗಲೂ ಬುದ್ಧನಿಂದ ಗುರುತಿಸಲಾಗುತ್ತದೆ ಎಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಭಾರತೀಯ ಬೌದ್ಧ ಮಹಾಸಭಾ (ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ- ಬಿಎಸ್ಐ) ಜಿಲ್ಲಾ ಶಾಖೆ ವತಿಯಿಂದ ಇಲ್ಲಿಯ ಭೈರಿದೇವರಕೊಪ್ಪ ಸಂಗೊಳ್ಳಿ ರಾಯಣ್ಣನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಮಟ್ಟದ ಪ್ರಥಮ ಬೌದ್ಧ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ದಲಿತರು ಜಾಗೃತರಾಗುತ್ತಿದ್ದಾರೆ. ಪುನಃ ನಮ್ಮ ಧರ್ಮವನ್ನು ಸ್ವೀಕಾರ ಮಾಡುವ ಕಾಲ ಬಂದಂತಾಗಿದೆ. ಇಂದಿಗೂ ಕೂಡ ಹಳ್ಳಿಗಳು, ಕೆಲ ನಗರಗಳಲ್ಲಿ ಜಾತಿ ವ್ಯವಸ್ಥೆ ಆಚರಣೆಯಲ್ಲಿ ಇರುವುದು ಖೇದಕರ ಸಂಗತಿ ಎಂದರು.
ಕಾಣದ ಸಮಾನತೆ:
ಶಿಗ್ಗಾಂವಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕ ಕಳೆದರೂ ಕೆಲವೆಡೆ ಇನ್ನೂ ಸಮಾನತೆ ಎಂಬುದು ಕಾಣದಾಗಿದೆ. ನಮ್ಮೂರಿನ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಿದ್ದನ್ನು ನಾನೂ ಅನುಭವಿಸಿದ್ದೇನೆ. ಸಂಕೀರ್ಣತೆಯಿಂದ ಪರ್ವ ಕಾಲದತ್ತ ನಾವು ಸಾಗಬೇಕಿದೆ. ಹಾಗಾಗಿ ಗೌತಮ ಬುದ್ಧರು ನಮಗೆ ದಾರಿದೀಪ ಎಂದರು.
ಗದಗ ದಲಿತ ಸಾಹಿತ ಪರಿಷತ್ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಮಾತನಾಡಿ, ಭಗವಾನ್ ಬುದ್ಧ, ಡಾ. ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಇದನ್ನು ಬದಲಾಗದ ಭಾರತ ಎಂದು ಕರೆಯಬೇಕಾಗಿದೆ. ದಲಿತ ಕೇರಿಗಳಲ್ಲಿ ಮತ್ತೆ ಬುದ್ಧ, ಬಸವ, ಅಂಬೇಡ್ಕರ ಹುಟ್ಟಿ ಬರಬೇಕು. ಆಗ ಮಾತ್ರ ಮೇರಾ ಭಾರತ ಮಹಾನ್ ಆಗಲು ಸಾಧ್ಯ ಎಂದು ಹೇಳಿದರು.
ಬಿಎಸ್ಐ ಉತ್ತರ ಕರ್ನಾಟಕ ಅಧ್ಯಕ್ಷ ಮನೋಹರ ಮೋರೆ, ಬಿಎಸ್ಐ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವೈಶಾಲಿ ಮೋರೆ ಮಾತನಾಡಿದರು. ಬೆಂಗಳೂರಿನ ಶ್ರೀ ಪೂಜ್ಯಬಂತೆ ನ್ಯಾನಲೋಕ, ಶ್ರೀ ಧಮ್ಮವೀರೊ, ಶ್ರೀ ಧಮ್ಮಪಾಲ ಅವರು ಸಾನ್ನಿಧ್ಯ ವಹಿಸಿದ್ದರು. ಪಂಚಶೀಲ, ತ್ರಿಶರಣಗಳನ್ನು ಬೋಧನೆ ಮಾಡಿದರು.
ಸಿದ್ಧರಾಮ ಹಿಪ್ಪರಗಿ, ಡಾ. ಪುಟ್ಟಮಣಿ ದೇವಿದಾಸ, ಪ್ರೊ. ಧನವಂತ ಹಾಜವಗೋಳ, ದೇವೇಂದ್ರ ಬಾಲ್ಕೆ, ಶಿವರಾಜ ಎಂ.ಸಿ, ಲಕ್ಷ್ಮಣ ಬಕ್ಕಾಯಿ, ಸಿ.ವೈ. ರಾಧಾ, ಇತರರು ಇದ್ದರು.
ಬಿಎಸ್ಐ ಜಿಲ್ಲಾಧ್ಯಕ್ಷ ಡಾ. ನಿಂಗಪ್ಪ ಸಿಂದಗಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ ವಿಭಾಗದ ಉಪಾಧ್ಯಕ್ಷ ಬಿ.ಎಫ್. ಕಾಳೆ ನಿರೂಪಿಸಿದರು.
ಸಮ್ಮೇಳನ ನಿರ್ಣಯಗಳು:
ಬುದ್ಧ ಪೂರ್ಣಿಮೆಯನ್ನು ಸರ್ಕಾರದಿಂದಲೇ ಆಚರಿಸಬೇಕು. ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ರಾಜ್ಯಾದ್ಯಂತ ಬುದ್ಧ ವಿಹಾರಗಳ ನಿರ್ಮಾಣ ಮಾಡಬೇಕು. ಜಿಲ್ಲಾ ಕೇಂದ್ರಗಳಲ್ಲಿ 25 ಎಕರೆ, ತಾಲೂಕು ಕೇಂದ್ರಗಳಲ್ಲಿ 5 ಎಕರೆ, ಹಳ್ಳಿಯಲ್ಲಿ ಒಂದು ಎಕರೆ ನೀಡಿ ಬುದ್ಧವಿಹಾರ ಧ್ಯಾನ ಕೇಂದ್ರ, ಶಾಲೆ, ಕಾಲೇಜು ಮಂಜೂರು ಮಾಡಬೇಕು, ಅನುದಾನ ನೀಡಬೇಕು. ಬೌದ್ಧ ಸಾಹಿತ್ಯದ ತ್ರಿಪೀಟಕಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಾಶನ ಮಾಡಲು ಅನುದಾನ ನೀಡಬೇಕು. ಕೇಂದ್ರ ಸರ್ಕಾರದ ಮತಾಂತರ ಬೌದ್ಧರಿಗೆ ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂಬುದು ಸೇರಿ 10 ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.