More

  ಯುದ್ಧ ಕೊನೆಗೊಳ್ಳಲಿ: ಎರಡೂ ದೇಶಗಳು ಪ್ರತಿಷ್ಠೆಯನ್ನು ತ್ಯಜಿಸಿ, ಶಾಂತಿಸ್ಥಾಪನೆಗೆ ಮುಂದಾಗಬೇಕು

  ಯುದ್ಧದಿಂದ ಏನನ್ನೂ ಸಾಧಿಸಲಾಗದು. ಆದರೆ, ಅದು ಸೃಷ್ಟಿಸುವ ಸಾವು-ನೋವು, ವಿತ್ತೀಯ ಹಾನಿ, ತಂದೊಡ್ಡುವ ಸಂಕಷ್ಟಗಳು ಮಾತ್ರ ಅಪಾರ. ಇವುಗಳ ಪರಿಣಾಮವೂ ದೀರ್ಘಕಾಲದವರೆಗೆ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಈ ವಾಸ್ತವ ಅಂತಾರಾಷ್ಟ್ರೀಯ ಸಮುದಾಯಕ್ಕೆ ಅಥವಾ ವಿಶ್ವದ ಬಲಾಢ್ಯ ರಾಷ್ಟ್ರಗಳಿಗೆ ಗೊತ್ತಿಲ್ಲ ಅಂತೇನಲ್ಲ. ಆದರೂ, ಪ್ರತಿಷ್ಠೆ, ಜಿದ್ದಾಜಿದ್ದಿ, ಸ್ವಹಿತಾಸಕ್ತಿ ಮತ್ತು ಅಹಂಕಾರದ ತಾಕಲಾಟಕ್ಕೆ ಯುದ್ಧವನ್ನು ಸಾರಿ, ಜನಸಾಮಾನ್ಯರ ಪ್ರಾಣವನ್ನು ಬಲಿ ಪಡೆಯುವ ಕೃತ್ಯ ಖಂಡಿತವಾಗಿಯೂ ಒಪು್ಪವಂಥದ್ದಲ್ಲ. ಮಾತುಕತೆ, ಸಂಧಾನದ ಪ್ರಯತ್ನಗಳನ್ನು ಬದಿಗಿರಿಸಿ ಸಮರವೊಂದೇ ಪರಿಹಾರ ಎಂದು ನಂಬಿರುವ ದೇಶಗಳು ಅಂತಾರಾಷ್ಟ್ರೀಯ ವಲಯಕ್ಕೆ ಹಾನಿ ತಂದೊಡ್ಡುತ್ತಿರುವುದು ವಿಷಾದನೀಯ.

  2022ರ ಫೆಬ್ರವರಿ 24ರಂದು ಆರಂಭವಾಗಿದ್ದ ರಷ್ಯಾ ಮತ್ತು ಯೂಕ್ರೇನ್ ನಡುವಿನ ಸಮರ ಎರಡು ವರ್ಷಗಳನ್ನು ಪೂರೈಸಿ, ಮೂರನೇ ವರ್ಷಕ್ಕೆ ಪ್ರವೇಶಿಸಿದೆ. ಯುದ್ಧ ಸಾರಿದ ಆರಂಭಿಕ ಹಂತದಲ್ಲೇ ಗೆಲುವು ಸಾಧಿಸುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ರಷ್ಯಾಗೆ ಯೂಕ್ರೇನ್ ಭಾರಿ ಪ್ರತಿರೋಧವನ್ನು ಒಡ್ಡಿತು. ಇದರಿಂದ ರಷ್ಯಾ ಮತ್ತಷ್ಟು ಕೆರಳಿ, ಸಮರ ತೀವ್ರಗೊಳಿಸಿತು. ಈ ಸಮರದಲ್ಲಿ 50 ಸಾವಿರ ಜನರು ಬಲಿಯಾಗಿದ್ದಾರೆ ಎಂದು ಯೂಕ್ರೇನ್ ಹೇಳಿಕೊಂಡಿದ್ದರೆ, ಯೂಕ್ರೇನಿನ 70 ಸಾವಿರ ಸೈನಿಕರು ಬಲಿಯಾಗಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ಯೂಕ್ರೇನ್​ಗೆ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಬಳಕೆಗಾಗಿ ಬ್ರಿಟನ್ 25 ಸಾವಿರ ಕೋಟಿ ರೂ.ಗಳ ನೆರವು ನೀಡಿದ್ದು, ‘ನಿರಂಕುಶತ್ವ ಎಂದೂ ಗೆಲ್ಲುವುದಿಲ್ಲ’ ಎಂದು ಹೇಳಿದೆ.

  ವರ್ಷಗಟ್ಟಲೇ ಯುದ್ಧ ನಡೆದರೂ, ಸಾವಿರಾರು ಜನರು, ಸೈನಿಕರು ಬಲಿಯಾದರೂ ರಷ್ಯಾ ಹಾಗೂ ಯೂಕ್ರೇನ್ ಈ ಸಮರ ನಿಲ್ಲಿಸುವ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ವಿಪರ್ಯಾಸ. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯವಾಗಿ ಬಲಾಢ್ಯವಾಗಿರುವ ರಾಷ್ಟ್ರಗಳು ಕೂಡ ಯುದ್ಧ ನಿಲ್ಲಿಸುವ ಪ್ರಯತ್ನದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡಿಲ್ಲ. ಹೀಗಾಗಿ, ರಷ್ಯಾ ಮತ್ತು ಯೂಕ್ರೇನ್ ದೇಶಗಳು ಪರಸ್ಪರ ದೂಷಿಸುತ್ತ ಮೂರನೇ ವರ್ಷದಲ್ಲೂ ಸಮರ ಮುಂದುವರಿಸಿವೆ. ದೊಡ್ಡ ರಾಷ್ಟ್ರಗಳ ಪೈಕಿ ಕೆಲವು ರಷ್ಯಾ ಪರ, ಮತ್ತೆ ಕೆಲವು ಯೂಕ್ರೇನ್ ಪರ ವಹಿಸಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿವೆ. ‘ದೊಡ್ಡಣ್ಭ’ ಎಂದು ಕರೆಯಿಸಿಕೊಳ್ಳುವ ಅಮೆರಿಕ ರಷ್ಯಾದ ವಿರುದ್ಧ ಹಲವು ನಿರ್ಬಂಧಗಳನ್ನು ಹೇರಿದ್ದು, ಅವುಗಳ ಸಂಖ್ಯೆ, ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಯೂಕ್ರೇನ್​ಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿದೆ.

  ಜಾಗತಿಕವಾಗಿ ಭಯೋತ್ಪಾದನೆ, ಬಡತನ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಮತ್ತು ಈ ಪಿಡುಗುಗಳ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸುವ ಅಗತ್ಯವಿದೆ. ಕಾಲದ ಈ ಅಗತ್ಯವನ್ನು ಮನಗಾಣದೆ ಜೀವಹಾನಿಯಲ್ಲಿ ತೊಡಗುವ ಸಮರಗಳಿಂದ ನಷ್ಟ, ದುಃಖದ ಹೊರತಾಗಿ ಬೇರೇನೂ ದಕ್ಕುವುದಿಲ್ಲ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ, ಅಂತಾರಾಷ್ಟ್ರೀಯ ವಲಯ ಇನ್ನಾದರೂ ಎಚ್ಚೆತ್ತುಕೊಂಡು, ವಾಸ್ತವದೊಂದಿಗೆ ಮುಖಾಮುಖಿಯಾಗಿ ಯುದ್ಧವನ್ನು ನಿಲ್ಲಿಸಲು ಪೂರ್ಣಪ್ರಮಾಣದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಯುದ್ಧಗಳು ವರ್ಷಗಟ್ಟಲೇ ಮುಂದುವರಿಯುತ್ತಿವೆ ಎನ್ನುವುದೇ ಮನುಕುಲದ ಪಾಲಿಗೆ ತೀವ್ರ ಆತಂಕದ ವಿಷಯ.

  ಅಗಲಿದ ಸಂಗಾತಿಯನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಕೋಲಾ! ವಿಡಿಯೋ ನೋಡಿದ್ರೆ ಕಣ್ಣಂಚಲ್ಲಿ ನೀರು ತರಿಸುತ್ತೆ

  ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts