ಗರ್ಭ, ಭ್ರೂಣ ಎರಡೂ ಬೇರೆ!

ಆರೈಕೆ ಎಂಬುದು ಎಲ್ಲರಿಗೂ ಬೇಕು. ಅಂಥದ್ದರಲ್ಲಿ ಗರ್ಭಿಣಿಯರಿಗೆ ವಿಶೇಷ ಆರೈಕೆ ಯಾಕೆ, ಅಷ್ಟೊಂದು ಮಹತ್ವ ನೀಡಬೇಕೆ ಎಂಬುದು ಚರ್ಚಾ ವಿಷಯವೇನಲ್ಲ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಪ್ರತಿಕ್ಷಣವೂ ಎಚ್ಚರ ವಹಿಸಬೇಕಾಗುತ್ತದೆ. ಒಂದೆರಡು ಕ್ಷಣ ಕಣ್ಣು ಮುಚ್ಚಿದರೆ, ಗಮನ ಬೇರೆಡೆ ಹೋದರೆ ಏನು ಬೇಕಾದರೂ ಆಗಬಹುದು. ಕಣ್ಣು ತೆರೆಯುವುದರೊಳಗೆ ಅಪಘಾತ ಸಂಭವಿಸಿ ಜೀವಕ್ಕೆ ಕುತ್ತು ತರಬಹುದಾದ ಅಪಾಯವಿರುತ್ತದೆ. ಅದಕ್ಕಾಗಿ ಕ್ಷಣಕ್ಷಣವೂ ಎಚ್ಚರದಿಂದಿರಬೇಕು. ಹಾಗಿರುವಾಗ ‘ವೇಗ ನಿಯಂತ್ರಣದಲ್ಲಿರಲಿ, ಜಾಗರೂಕತೆಯಿಂದ ವಾಹನ ಚಲಾಯಿಸಿ’, ‘ಮುಂದೆ ತಿರುವು ಇದೆ. ಎಚ್ಚರದಿಂದ ಚಲಿಸಿ’ ಎಂಬ ಸೂಚನಾಫಲಕ ಹಾಕುವುದಾದರೂ ಏಕೆ ಎಂಬ ಪ್ರಶ್ನೆ ಏಳುತ್ತದೆ. ಹೇಗೂ ಎಚ್ಚರದಿಂದ ಇರಲೇಬೇಕೆಂದ ಮೇಲೆ ಎಚ್ಚರದಿಂದ ಚಲಾಯಿಸಿ ಎಂಬ ನಿರ್ದೇಶನಗಳಿಗೆ ಏನು ಬೆಲೆ ಎಂಬ ಯೋಚನೆ ಬರುತ್ತದೆ. ಸದಾ ಜಾಗ್ರತೆಯಿಂದಲೇ ವಾಹನ ಚಲಾಯಿಸಬೇಕು, ಕೆಲವು ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ಗಮನ ನೀಡಿ ಎಂಬುದು ಈ ಸಲಹೆಯ ಹಿಂದಿರುವ ಕಾಳಜಿ. ಗರ್ಭಿಣಿಯರೂ ಹಾಗೆಯೇ! ಹುಟ್ಟಲಿರುವ ಶಿಶುವು ದೇಹದಲ್ಲಿರುವಾಗ ಹೇಗೆ ಬೇಕೋ ಹಾಗೆ ಇರುವುದಲ್ಲ! ಆರೈಕೆಯು ಉಚ್ಛ್ರಾಯ ಸ್ಥಿತಿಯಲ್ಲಿರಬೇಕು. ಹಾಗಿದ್ದರೇನೇ ಮುಂದಿನ ಜನಾಂಗದ ಅಂಗಾಂಗ, ಅವಯವಗಳೆಲ್ಲ ವೈಕಲ್ಯಗಳಿಲ್ಲದೆ ದಷ್ಟಪುಷ್ಟವಾಗಿ ಬೆಳೆದು ಜಗತ್ತಿಗೊಂದು ಕೊಡುಗೆ ನೀಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ.

ಇದನ್ನರಿತ ಆಯುರ್ವೆದವು ಗರ್ಭಿಣಿ ಚರ್ಯುಗೆ ಸಂಬಂಧಿತ ವಿಚಾರಗಳನ್ನು ಸೂಕ್ಷ್ಮತೆಯ ನೆರಳಿನಲ್ಲಿ ಅತ್ಯಂತ ಪ್ರಬುದ್ಧವಾಗಿ ಎಳೆಎಳೆಯಾಗಿ ಬಿಡಿಸಿ ಹೇಳಿದೆ. ಗರ್ಭ ಉತ್ಪತ್ತಿಯನ್ನು ವಿವರಿಸುತ್ತಾ ಜಲ ಹಾಗೂ ಅಗ್ನಿ ಮಹಾಭೂತಗಳು ದೃಶ್ಯ ಪಾತ್ರ ವಹಿಸಿ ಉಳಿದ ಮೂರರ ಸೂಕ್ಷ್ಮಪಾತ್ರದೊಂದಿಗೆ ನೆರವೇರುತ್ತದೆ ಎಂದಿದ್ದಾರೆ. ಶುಕ್ರವೆಂಬ ಪುರುಷ ವೀರ್ಯಾಣು ಹಾಗೂ ಶೋಣಿತವೆಂಬ ಸ್ತ್ರೀಯ ಅಂಡಾಣು ಮಿಲನವಾಗುವುದರ ಜೊತೆಗೆ ಪಂಚಮಹಾಭೂತ ಹಾಗೂ ಆತ್ಮಗಳ ಸಂಯೋಗವಾದಾಗ ಮಾತ್ರ ಗರ್ಭ ಉತ್ಪತ್ತಿ ಎಂಬುದು ಆಯುರ್ವೆದದ ವ್ಯಾಖ್ಯೆ. ವಿಶೇಷ ಏನೆಂದರೆ ಗರ್ಭ ಹಾಗೂ ಭ್ರೂಣಗಳೆರಡೂ ವಿಭಿನ್ನ. ಆರಂಭಿಕ ಸ್ಥಿತಿಯೇ ಗರ್ಭ. ಬೆಳವಣಿಗೆ ಹೊಂದುತ್ತ ಸಾಗುವ ನಂತರದ ಹಂತವೇ ಭ್ರೂಣ. ಇಂದಿನ ವಿಜ್ಞಾನಿಗಳು ಎಂಟು ವಾರದೊಳಗೆ ಎಂಬ್ರಿಯೋ ಅರ್ಥಾತ್ ಗರ್ಭವೆಂದು ಹೆಸರಿಸಿ ಆ ಬಳಿಕದ ಅವಸ್ಥೆಗೆ ಫೀಟಸ್ ಅರ್ಥಾತ್ ಭ್ರೂಣವೆಂದು ಕರೆದಿರುವುದನ್ನು ಗಮನಿಸಿದರೆ ಹಿಂದಿನ ವೈದ್ಯವಿಜ್ಞಾನಿಋಷಿಗಳ ದೃಢವಾದ ದೂರದರ್ಶಿತ್ವದ ದರ್ಶನವಾಗುತ್ತದೆ.

ಬೀಜ, ಬೀಜಭಾಗ, ಬೀಜಭಾಗ ಅವಯವಗಳೆಂಬ ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಸ್ತ್ರೀಯ ಬೀಜಾಣು ದೋಷದಿಂದ ಕೂಡಿದ್ದರೆ ಬಂಜೆಯಾಗುವ ಹೆಣ್ಣು ಮಗುವಿನ ಜನನಕ್ಕೆ ಕಾರಣವಾಗಬಹುದು. ಗರ್ಭಾಶಯದ ಬೀಜಭಾಗದ ಸಂಬಂಧಿತ ಅವಯವವು ದೋಷಪೂರಿತವಾಗಿದ್ದರೆ ಮೃತವಾದ ಮಗು ಹೆರಬಹುದು. ಲಿಂಗ ನಿರ್ಧಾರಕ ಬೀಜಭಾಗದ ಅವಯವದಲ್ಲಿ ತೊಂದರೆಯಿದ್ದರೆ ಸ್ತ್ರೀಯ ರೂಪವನ್ನು ಹೊಂದಿದ್ದರೂ ಸ್ತ್ರೀಯಲ್ಲದ ‘ವಾರ್ತಾ’ ಎಂಬ ಸಂತಾನಪ್ರಾಪ್ತಿಗೆ ಕಾರಣವಾಗುತ್ತದೆ. ಚರಕಸಂಹಿತೆಯ ಶಾರೀರಸ್ಥಾನದಲ್ಲಿ ಈ ವಿವರಣೆಗಳಿದ್ದು ಬೀಜಭಾಗವು ವಂಶವಾಹಿಯಿಂದಾಗುವ ಅನುವಂಶಿಕ ಪ್ರಭಾವಗಳಿಗೆ ಕಾರಣವಾದರೆ ಬೀಜಭಾಗದ ಅವಯವವು ವರ್ಣತಂತುವಿನ ನೇರ ಉಲ್ಲೇಖವಾಗಿದೆ! ಸಹಸ್ರಾರು ವರ್ಷಗಳ ಮೊದಲೇ ಭಾರತದಲ್ಲಿ ಶಿಶುವಿನ ಅಂಗವೈಕಲ್ಯಗಳಿಗೆ ಮೂಢನಂಬಿಕೆಗಳಿಗೆ ಶರಣಾಗದೆ ತಂದೆ-ತಾಯಿಯ ಬೀಜದೋಷ, ವಂಶವಾಹಿ ಹಾಗೂ ವರ್ಣತಂತು ಅಂಶಗಳೇ ಕಾರಣವೆಂದು ಸಾರಿಹೇಳಿರುವುದು ವೈಜ್ಞಾನಿಕ ಮನೋಧರ್ಮದ ಮಾರ್ವಿುಕ ಅಭಿವ್ಯಕ್ತಿ.

ಪಂಚಸೂತ್ರಗಳು

  • ಶಂಖಪುಷ್ಪಿ: ಕ್ಷಯರೋಗಿಗಳಿಗೆ ಹಿತ.
  • ಮಾದಲಹಣ್ಣು: ರಕ್ತಭೇದಿ ನಿಯಂತ್ರಕ.
  • ದೀವಿಹಲಸು: ಮೂತ್ರ ಪ್ರಮಾಣ ಹೆಚ್ಚಿಸುತ್ತದೆ.
  • ಸಾಸಿವೆ: ಬೆನ್ನುಹುರಿಯ ರೋಗಗಳಲ್ಲಿ ಉಪಯುಕ್ತ.
  • ದೊಡ್ಡ ಏಲಕ್ಕಿ: ನರರೋಗಗಳಲ್ಲಿ ಅನುಕೂಲಕಾರಿ.

Leave a Reply

Your email address will not be published. Required fields are marked *