More

    ಬ್ರೆಕ್ಸಿಟ್ ಗೆದ್ದ ಬೋರಿಸ್

    ಲಂಡನ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ‘ಬ್ರೆಕ್ಸಿಟ್’ ಮಸೂದೆಗೆ ಬ್ರಿಟನ್ ಸಂಸತ್ ಬುಧವಾರ ಅಂಗೀಕಾರ ನೀಡಿದೆ. ಯುರೋಪಿಯನ್ ಒಕ್ಕೂಟದಿಂದ ಜ. 31ರಂದು ಬ್ರಿಟನ್ ಅಧಿಕೃತವಾಗಿ ಹೊರಬರುವುದು ಖಚಿತವಾಗಿದೆ. 2016ರ ಜನಮತ ಸಂಗ್ರಹದಲ್ಲಿ ಬ್ರಿಟನ್ ಮತದಾರರು ಬ್ರೆಕ್ಸಿಟ್ ಆಯ್ಕೆ ಮಾಡಿಕೊಂಡ ಮೂರೂವರೆ ವರ್ಷಗಳ ನಂತರ, ಹಲವು ಸುತ್ತಿನ ರಾಜಕೀಯ ಗುದ್ದಾಟವನ್ನು ಎದುರಿಸಿ ಒಕ್ಕೂಟವನ್ನು ತೊರೆಯಲು ಬ್ರಿಟನ್ ಸಜ್ಜಾಗಿದೆ. ಇದಕ್ಕಾಗಿ ಡೌನಿಂಗ್ ಸ್ಟ್ರೀಟ್​ನಲ್ಲಿನ ದೊಡ್ಡ ಗಡಿಯಾರದ ಮೂಲಕ ಕೌಂಟ್​ಡೌನ್​ನ್ನು ಸಹ ಪ್ರಾರಂಭಿಸಲಾಗಿದೆ.

    ‘ಬ್ರೆಕ್ಸಿಟ್’ ಮಸೂದೆಗೆ ಕಳೆದ ವರ್ಷ ಬ್ರಿಟನ್ ಸಂಸತ್​ನಲ್ಲಿ ಆರಂಭಿಕ ಜಯ ದೊರೆತಿತ್ತು. ಹೌಸ್ ಆಫ್ ಕಾಮನ್ಸ್​ನಲ್ಲಿ (ಸಂಸತ್​ನ ಕೆಳಮನೆ) ಮಸೂದೆ ಮೇಲೆ ನಡೆದ 2ನೇ ಸುತ್ತಿನ ಮತದಾನದಲ್ಲಿ ಪರವಾಗಿ 358 ಮತ್ತು ವಿರುದ್ಧವಾಗಿ 234 ಸಂಸದರು ಮತ ಚಲಾಯಿಸಿದ್ದರು. ಬಳಿಕ ಮಸೂದೆಯನ್ನು ಹೌಸ್ ಆಫ್ ಲಾರ್ಡ್ಸ್​ಗೆ (ಸಂಸತ್​ನ ಮೇಲ್ಮನೆ) ರವಾನಿಸಲಾಗಿತ್ತು. ಈಗ ಅಲ್ಲಿಯೂ ಮಸೂದೆ ಸುಗಮವಾಗಿ ಅಂಗೀಕಾರ ಪಡೆದಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ. ಬ್ರೆಕ್ಸಿಟ್ ಮಸೂದೆ ಸಂಸತ್​ನಲ್ಲಿ ಅಂತಿಮ ಗೆರೆಯನ್ನು ದಾಟುವುದಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ಈಗ ನಾವು ಅದನ್ನು ಸಾಧಿಸಿದ್ದೇವೆ. ಬಹಳ ಉದ್ದದ ರಸ್ತೆಯಲ್ಲಿನ ಕೊನೆಯನ್ನು ನಾವು ತಲುಪಿದ್ದೇವೆ. ಇನ್ನು ಮುಂದೆ ನಾವು ಉತ್ತಮ ರಸ್ತೆಗಳು, ಶಿಕ್ಷಣ, ಆಸ್ಪತ್ರೆ ವ್ಯವಸ್ಥೆಗಳ ಬಗ್ಗೆ ಗಮನಹರಿಸಿ ಅಭಿವೃದ್ಧಿಯೆಡೆಗೆ ಸಾಗುವ ಗುರಿ ಹೊಂದಿದ್ದೇವೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.

    ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಮಸೂದೆಗೆ ಅಂಕಿತ ಹಾಕಿದ್ದು, ಬ್ರೆಕ್ಸಿಟ್ ಕಾನೂನಾಗಿ ರೂಪ ಪಡೆದಿದೆ. ಇದನ್ನು ಕೆಲ ದಿನಗಳಲ್ಲಿ ಯುರೋಪಿಯನ್ ಒಕ್ಕೂಟದ ಅನುಮೋದನೆಗೆ ಕಳುಹಿಸಲಾಗುತ್ತದೆ. ಜ. 29ರಂದು ಯುರೋಪಿಯನ್ ಸಂಸತ್ತು ಬ್ರೆಕ್ಸಿಟ್ ಕುರಿತು ಚರ್ಚೆ ಕೈಗೊಳ್ಳಲಿದ್ದು, ಬಳಿಕ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಫೆ.1ರಿಂದ ಬ್ರಿಟನ್ ಯುರೋಪಿಯನ್ ಒಕ್ಕೂಟದಲ್ಲಿ ಇರದಿದ್ದರೂ 11 ತಿಂಗಳ ಪರಿವರ್ತನೆ ಅವಧಿಗೆ ಅದು ಪ್ರವೇಶಿಸಲಿದ್ದು, ಈ ಅವಧಿಯಲ್ಲಿ ಹಿಂದಿನ ನಿಯಮಗಳನ್ನೇ ಪಾಲಿಸಬೇಕಾಗುತ್ತದೆ. ಆದರೆ ಒಕ್ಕೂಟದ ಸಂಸ್ಥೆಗಳಲ್ಲಿ ಬ್ರಿಟನ್​ಗೆ ಯಾವುದೇ ಪ್ರಾತಿನಿಧ್ಯವಿರುವುದಿಲ್ಲ. ಈ ವ್ಯವಸ್ಥೆ 2021ರ ಜ.1ರಂದು ಕೊನೆಯಾಗಲಿದ್ದು, ಈ ವೇಳೆಗೆ ಉಭಯ ಪಕ್ಷಗಳು ತಮ್ಮ ಭವಿಷ್ಯದ ಆರ್ಥಿಕ ಮತ್ತು ಭದ್ರತಾ ಸಹಭಾಗಿತ್ವದ ಕುರಿತು ಮಾತು ಕತೆಗಳನ್ನು ಪೂರ್ಣಗೊಳಿಸಬೇಕು.

    ಏನಿದು ಬ್ರೆಕ್ಸಿಟ್?

    28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು. ಈ ಸೇರ್ಪಡೆಗೆ 1975ರಲ್ಲಿ ನಡೆದ ಜನಮತ ಗಣನೆ ಅಂಗೀಕಾರ ನೀಡಿತು. 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಎಡ ಚಿಂತನೆಯ ಪಕ್ಷಗಳಿಂದ ಕೇಳಿಬರ ತೊಡಗಿತು. ಬ್ರೆಕ್ಸಿಟ್ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದು) ಹೆಸರಿನ ಆಂದೋಲನಗಳು ನಡೆದವು. 2015ರ ಚುನಾವಣೆಯಲ್ಲಿ ಈ ಆಗ್ರಹವನ್ನು ಡೇವಿಡ್ ಕ್ಯಾಮರಾನ್ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಿದರು. ಆಶ್ವಾಸನೆಯಂತೆ 2016ರ ಜೂನ್ 23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಬ್ರೆಕ್ಸಿಟ್​ಗೆ ವಿರುದ್ಧ ನಿಲುವು ಹೊಂದಿದ್ದ ಪ್ರಧಾನಿ ಡೇವಿಡ್ ಕ್ಯಾಮರಾನ್​ಗೆ ಮುಖಭಂಗವಾಗಿ ಅವರು ರಾಜೀನಾಮೆ ನೀಡುವಂತಾಯಿತು. ನಂತರ ಥೆರೇಸಾ ಮೇ ಪ್ರಧಾನಿಯಾದರು. ಒಂದು ವರ್ಷದ ಬಳಿಕ ಮಧ್ಯಂತರ ಚುನಾವಣೆ ಘೋಷಣೆ ಮಾಡಿದರು. ಆದರೆ, ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಸರಳ ಬಹುಮತ ದೊರೆಯಲಿಲ್ಲ. 2017ರ ಮಾರ್ಚ್ 29ರಂದು ಬ್ರಿಟನ್ ಸರ್ಕಾರ ಸಂವಿಧಾನದ 50ನೇ ವಿಧಿಯನ್ನು (ಐರೋಪ್ಯ ಒಕ್ಕೂಟದ ಒಪ್ಪಂದ) ಕೈಬಿಡುವ ಪ್ರಸ್ತಾವನೆ ಮಾಡಿದೆ. ಇದರ ಅನ್ವಯ 2019ರ ಮಾರ್ಚ್ 29ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕಿತ್ತು.. ಈ ಗಡುವಿನೊಳಗೆ ಬ್ರೆಕ್ಸಿಟ್​ಗೆ ಥೆರೇಸಾ ಮೇ ರೂಪಿಸಿರುವ ನಿಯಮಾವಳಿಗೆ ಒಪ್ಪಿಗೆ ಪಡೆಯುವುದು ಅಗತ್ಯವಾಗಿತ್ತು. ಅದರಲ್ಲಿ ವಿಫಲವಾಗಿದ್ದ್ದಂದ ಅವರೂ 2019 ಮೇ 24ರಂದು ಪದತ್ಯಾಗ ಮಾಡಿದರು.

    ಬ್ರೆಕ್ಸಿಟ್​ಗೆ ಪ್ರಧಾನಿಗಳ ತಲೆದಂಡ

    ಇದುವರೆಗೂ ಇಬ್ಬರು ಬ್ರಿಟನ್ ಪ್ರಧಾನಿಗಳು ಪದಚ್ಯುತಗೊಂಡಿದ್ದಾರೆ. 2016ರ ಜೂನ್ 23ರಂದು ನಡೆದ ಜನಮತ ಗಣನೆಯಲ್ಲಿ ಶೇ.52 ಮಂದಿ ಬ್ರೆಕ್ಸಿಟ್​ಗೆ ಸಮ್ಮತಿಸಿದ ಕಾರಣ ಪ್ರಧಾನಿ ಡೇವಿಡ್ ಕ್ಯಾಮರಾನ್ ರಾಜೀನಾಮೆ ನೀಡಿದ್ದರು. ಬಳಿಕ ಥೆರೇಸಾ ಮೇ ಪ್ರಧಾನಿಯಾದರು. ಬ್ರೆಕ್ಸಿಟ್​ಗೆ ಬ್ರಿಟನ್ ಪಾರ್ಲಿಮೆಂಟ್​ನಲ್ಲಿ 3 ಸಾರಿ ಸೋಲಾಯಿತು. ಈ ಹಿನ್ನೆಲೆಯಲ್ಲಿ ಅವರು 2019ರ ಮೇ 24ರಂದು ಪದತ್ಯಾಗ ಮಾಡಿದರು.

    ಮಧ್ಯಂತರ ಚುನಾವಣೆ ತಂತ್ರ ಯಶಸ್ವಿ

    ಕನ್ಸರ್ವೆಟಿವ್ ಪಕ್ಷಕ್ಕೆ ಬಹುಮತ ಇರದಿದ್ದ ಕಾರಣ ಬ್ರೆಕ್ಸಿಟ್ ಮಸೂದೆಗೆ ಥೆರೇಸಾ ಮೇ ಪ್ರಧಾನಿಯಾಗಿದ್ದ ಕಾಲದಿಂದಲೂ ಸೋಲಾಗುತ್ತಿತ್ತು. ಇದೇ ಕಾರಣಕ್ಕೆ ಥೆರೇಸಾ ಅಧಿಕಾರದಿಂದ ಇಳಿಯಬೇಕಾಯಿತು. ನಂತರ ಪ್ರಧಾನಿಯಾದ ಬೋರಿಸ್ ಜಾನ್ಸ್​ನ್​ಗೂ ಇದೇ ಸಮಸ್ಯೆ ಎದುರಾಗಿತ್ತು. ಆದ್ದರಿಂದಲೇ ಅವರು ಮಧ್ಯಂತರ ಚುನಾವಣೆ ಘೋಷಣೆ ಮಾಡಿದ್ದರು. ಡಿ.12ರಂದು ನಡೆದ ಮತದಾದಲ್ಲಿ ಕನ್ಸರ್ವೆಟಿವ್ ಪಕ್ಷ 365 ಸ್ಥಾನಗಳಿಸುವ ಮೂಲಕ ಬ್ರೆಕ್ಸಿಟ್ ಹಾದಿ ಸುಗಮಗೊಂಡಿತ್ತು. ಜ.31 ರ ಮೊದಲು ಬ್ರೆಕ್ಸಿಟ್​ಗೆ ಬ್ರಿಟನ್ ಸಂಸತ್ತು ಅನುಮೋದನೆ ನೀಡಲು ಇದ್ದ ಗಡುವಿನ ಅವಧಿಯಲ್ಲಿ ಬೋರಿಸ್ ನಿರೀಕ್ಷಿಸಿದಂತೆ ಸಂಸತ್​ನ ಎಲ್ಲ ಗೆರೆಗಳನ್ನು ಬ್ರೆಕ್ಸಿಟ್ ದಾಟಿದೆ. ರಾತ್ರಿ ಬೆಳಗಾಗುವುದರಲ್ಲಿ ಐರೋಪ್ಯ ಒಕ್ಕೂಟದ ಸದಸ್ಯರಿಗಾಗಿಯೇ ರೂಪಿಸಿರುವ ಏಕೈಕ ಮಾರುಕಟ್ಟೆ ಮತ್ತು ಸುಂಕ ಒಕ್ಕೂಟದಿಂದ ಬ್ರಿಟನ್ ಹೊರಬೀಳಲಿದೆ. ಜತೆಗೆ ಯೂರೋಪೋಲ್ ಮತ್ತು ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್​ನ ಭಾಗವಾಗಿಯೂ ಇರುವುದಿಲ್ಲ. ಬ್ರಿಟನ್ ಐರೋಪ್ಯ ಒಕ್ಕೂಟದ ಬಜೆಟ್​ಗೆ ತನ್ನ ಪಾಲನ್ನು ನೀಡಬೇಕಾಗಿಯೂ ಇರುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts