ಕೊಳವೆಬಾವಿಗೆ ಪುನಶ್ಚೇತನ

ನಿಶಾಂತ್ ಬಿಲ್ಲಂಪದವು ವಿಟ್ಲ
ಕೊಳವೆಬಾವಿಗಳು ತುಂಬಿ ಹೋಗಿ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದು, ಕುಡಿಯುವ ನೀರಿಗೂ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. 500 ಅಡಿಗೂ ಅಧಿಕ ಆಳದ ಕೊಳವೆ ಬಾವಿ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಅಂತಾರಾಷ್ಟ್ರೀಯ ಸಂಸ್ಥೆ ಜೇಸಿ ವಿಟ್ಲದ ಸದಸ್ಯರು ಮುಂದಾಗಿದ್ದಾರೆ.

ಕೊಳವೆಬಾವಿಗಳಿಗೆ ಮಳೆ ನೀರು ಪೂರಣಗೊಳಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಕಾರ್ಯಕ್ಕೆ ಸರ್ಕಾರಗಳು ಕಾನೂನು ಮಾಡಿದ್ದರೂ, ಪಂಚಾಯಿತಿ ಕೊಳವೆಬಾವಿಗೆ ನೀರಿಂಗಿಸುವ ಕಾರ್ಯವಾಗುತ್ತಿಲ್ಲ. ವ್ಯಕ್ತಿತ್ವ ವಿಕಸನ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆ ಈಗ ನೀರಿಂಗಿಸುವ ಕಾರ್ಯಕ್ಕೆ ಮುಂದಾಗಿದೆ. ಜೇಸಿ ವತಿಯಿಂದ ನಡೆಸಲ್ಪಡುವ ಶಾಲೆ ಆವರಣದಲ್ಲಿ ಇತ್ತೀಚೆಗೆ 500 ಅಡಿವರೆಗೆ ಕೊಳವೆಬಾವಿ ಕೊರೆದರೂ ಅರ್ಧ ಇಂಚು ಮಾತ್ರ ನೀರು ಲಭಿಸಿತ್ತು. ಸಾಕಷ್ಟು ನೀರಿಲ್ಲದ ಕಾರಣ ಬಳಸದೆ ಬಿಡಲಾಗಿತ್ತು. ಇದನ್ನು ಗಮನಿಸಿದ ವಿಟ್ಲ ಜೇಸಿ ಘಟಕ ಅದಕ್ಕೆ ಮಳೆ ನೀರು ತುಂಬಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಸಂಸ್ಥೆಯ ಉತ್ಸಾಹಕ್ಕೆ ಶಾಲಾ ಆಡಳಿತ ಮಂಡಳಿ ಪ್ರೋತ್ಸಾಹ ನೀಡಿದ್ದು, ವಿಟ್ಲದ ರೋಟರಿ ಹಾಗೂ ಲಯನ್ಸ್ ಸಂಸ್ಥೆಯವರೂ ಸಹಕಾರ ನೀಡಿದ್ದಾರೆ. ಕೊಳವೆಬಾವಿ ಸುತ್ತ ಗುಂಡಿ ಮಾಡಿ ಅದರಲ್ಲಿ ನೀರು ಶುದ್ಧವಾಗಿ ಅಂತರ್ಜಲವನ್ನು ಸೇರುವ ರೀತಿಯ ವ್ಯವಸ್ಥೆ ಮಾಡಲಾಗಿದೆ. ವಿಟ್ಲ ಜೇಸಿ ಘಟಕದ 12 ಸದಸ್ಯರು ಹಾಗೂ ಜೂನಿಯರ್ ಜೇಸಿಯ ನಾಲ್ವರು ಸೇರಿ ಬೆಳಗ್ಗೆ 10ಕ್ಕೆ ಕೆಲಸ ಆರಂಭಿಸಿ ರಾತ್ರಿ 12 ಗಂಟೆ ಹೊತ್ತಿಗೆ ಪೂರ್ಣಗೊಳಿಸಿದ್ದಾರೆ. ಮೋಹನ ಮೈರ ಅಧ್ಯಕ್ಷಾವಧಿಯಲ್ಲಿ ಜೇಸಿ ಸಾಮಾಜಿಕ ಚಟುವಟಿಕೆಯತ್ತ ಹೆಚ್ಚು ಒಲವು ತೋರಿಸಲಾರಂಭಿಸಿದೆ. ಇದನ್ನು ಬಾಬು ಕೊಪ್ಪಳ ಹಾಗೂ ರಮೇಶ್ ಅಧ್ಯಕ್ಷಾವಧಿಯಲ್ಲಿ ಮುಂದುವರಿಸಿಕೊಂಡು ಬರಲಾಗಿದ್ದು, ಈಗ ಬಾಲಕೃಷ್ಣ ವಿಟ್ಲ ಅವರೂ ಮುಂದುವರಿಸುತ್ತಿದ್ದಾರೆ.

ವ್ಯವಸ್ಥಿತ ನೀರಿಂಗಿಸುವ ವ್ಯವಸ್ಥೆ: ಕೊಳವೆ ಬಾವಿ ಸುತ್ತ ಸುಮಾರು ನಾಲ್ಕು ಅಡಿ ಸುತ್ತಳತೆಯಲ್ಲಿ ಸುಮಾರು ಏಳು ಅಡಿ ಆಳದ ಗುಂಡಿ ಮಾಡಲಾಗಿದೆ. ಕೊಳವೆ ಬಾವಿಯ ಕೇಸಿಂಗ್ ಪೈಪ್‌ಗೆ ರಂಧ್ರಗಳನ್ನು ಮಾಡಿ, ಕಾಂಕ್ರೀಟ್ ರಿಂಗ್ ಅಳವಡಿಸಿ ಅದರೊಳಗೆ ಜಲ್ಲಿ, ಮರಳು, ಇದ್ದಿಲನ್ನು ವ್ಯವಸ್ಥಿತವಾಗಿ ತುಂಬಿಸಿ ನೀರು ಶುದ್ಧೀಕರಣವಾಗಿ ಇಂಗುವಂತೆ ಮಾಡಲಾಗಿದೆ.
ಸಾಮಾಜಿಕ ಚಟುವಟಿಕೆ: ಸರ್ಕಾರದ ಸೌಲಭ್ಯದ ಸಿಗದೆ ತೀರ ಬಡವರ ಮನೆ ನಿರ್ಮಾಣ ಕಾರ್ಯ ಹಾಗೂ ದುರಸ್ತಿ, ಬಸ್ ತಂಗುದಾಣ ನಿರ್ಮಾಣ, ಸ್ವಚ್ಛ ಭಾರತ ಅಂಗವಾಗಿ ಮನೆಗಳಿಗೆ ಶೌಚಗೃಹ ನಿರ್ಮಾಣ, ಶಾಲೆಗಳಿಗೆ ಶೌಚಗೃಹಗಳನ್ನು ಕಟ್ಟಿಕೊಡಲಾಗಿದೆ. ವಿಟ್ಲ ಜೇಸಿ ಘಟಕ ತನ್ನದೇ ಆದ ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಸಮಾಜದಲ್ಲಿ ಹಿಂದುಳಿದವರನ್ನು ಮುಂದೆ ತರುವ ಪ್ರಯತ್ನ ಮಾಡಿದೆ.
ನೀರಿನ ಕೊರತೆ ಹಾಗೂ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಅಂತರ್ಜಲ ಹೆಚ್ಚಿಸುವ ಕಾರ್ಯವಾಗಬೇಕಿದೆ. ಪರಿಸರ ರಕ್ಷಣೆ ಬಗ್ಗೆ ಜೇಸಿ ಸಂಸ್ಥೆಯಿಂದ ತರಬೇತಿ ನೀಡುವ ಜತೆಗೆ ಕಾರ್ಯ ರೂಪದಲ್ಲಿ ಮಾಡಿ ತೋರಿಸಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಾಕೊಳ್ಳಲಾಗಿದೆ. ವಿಠಲ ಪದವಿಪೂರ್ವ ಕಾಲೇಜು ಕೊಳವೆ ಬಾವಿಗೂ ನೀರಿಂಗಿಸುವ ಕಾರ್ಯ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಬಾಲಕೃಷ್ಣ ವಿಟ್ಲ ಅಧ್ಯಕ್ಷ ಜೇಸಿ ವಿಟ್ಲ ಘಟಕ

Leave a Reply

Your email address will not be published. Required fields are marked *