ಮೆಲ್ಬೋರ್ನ್: ಮಾಜಿ ವಿಶ್ವ ನಂ.1 ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ರಷ್ಯಾದ ಡೆನಿಲ್ ಮೆಡ್ವೆಡೇವ್, 8ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಮಿನೌರ್, 4ನೇ ಶ್ರೇಯಾಂಕಿತ ಟೇಲರ್ ಫ್ರಿಟ್ಜ್, ಮಹಿಳಾ ವಿಭಾಗದಲ್ಲಿ ಮಾಜಿ ರನ್ನರ್ ಅಪ್ ಕಜಾಕ್‌ಸ್ತಾನದ ಎಲೆನಾ ರೈಬಕಿನಾ, 4ನೇ ಶ್ರೇಯಾಂಕಿತೆ ಜಾಸ್ಮಿನ್ ಪಾವೋಲಿನಿ, ಅಮೆರಿಕದ ಮ್ಯಾಡೀಸನ್ ಕೀಯ್ಸ ಮೂರನೇ ದಿನ ಗೆಲುವು ದಾಖಲಿಸಿದ ಪ್ರಮುಖರು.
ಮಂಗಳವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ರೋಹನ್ ಬೋಪಣ್ಣ ನೂತನ ಜತೆಗಾರ ಕೊಲಂಬಿಯಾದ ನಿಕೋಲಸ್ ಬ್ಯಾರಿಯೆಂಟೋಸ್ 5-7,6-7 (5) ನೇರ ಸೆಟ್‌ಗಳಿಂದ ಸ್ಪೇನ್‌ನ ಪೆಡ್ರೋ ಮಾರ್ಟಿನೆಜ್-ಜೌಮೆ ಮುನಾರ್‌ಗೆ ಮಣಿದರು. 14ನೇ ಶ್ರೇಯಾಂಕಿತ ಬೋಪಣ್ಣ- ಬ್ಯಾರಿಯೆಂಟೋಸ್ ಮೊದಲ ಸೆಟ್‌ನಲ್ಲಿ 5-7 ಹಿನ್ನಡೆ ಎದುರಿಸಿದರು.
ನಿರ್ಣಾಯಕ 2ನೇ ಸೆಟ್‌ನ ಟೈ ಬ್ರೇಕರ್‌ನಲ್ಲಿ ಕಠಿಣ ಪೈಪೋಟಿಯ ನಡುವೆಯೂ 1 ಗಂಟೆ 54 ನಿಮಿಷಗಳ ಕಾದಾಟದಲ್ಲಿ ಸವಾಲು ಜೀವಂತವಿರಿಸಲು ಇಂಡೋ-ಕೊಲಂಬಿಯಾ ಜೋಡಿ ವಿಲವಾಯಿತು. ಬೋಪಣ್ಣ ಇನ್ನೂ ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಶುಹಿ ಝಂಗ್ ಜತೆಯಾಗಿ ಆಡಲಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜತೆಯಾಗಿ ಪ್ರಶಸ್ತಿ ಜಯಿಸಿದ್ದ ಬೋಪಣ್ಣ ಈ ಸಾಧನೆ ಮಾಡಿದ ಹಿರಿಯ ಆಟಗಾರ ಎನಿಸಿದ್ದರು.
ರೈಬಕಿನಾ ಗೆಲುವಿನ ಆರಂಭ
ವಿಂಬಲ್ಡನ್ ಮಾಜಿ ಚಾಂಪಿಯನ್ ಎಲೆನಾ ರೈಬಕಿನಾ ತನ್ನ ಆರಂಭಿಕ ಪಂದ್ಯದಲ್ಲಿ 6-1, 6-1 ನೇರ ಸೆಟ್‌ಗಳಿಂದ ಎಮರ್ಸನ್ ಜೋನ್ಸ್ ಎದುರು ಸುಲಭ ಗೆಲುವು ಒಲಿಸಿಕೊಂಡರು. ಕೇವಲ 53 ನಿಮಿಷಗಳಲ್ಲಿ ರೈಬಕಿನಾ ಮೇಲುಗೈ ಸಾಧಿಸಿದರು. ಇಟಲಿಯ ಜಾಸ್ನಿಮ್ ಪಾವೋಲಿನಿ 6-0, 6-4 ರಿಂದ ಅರ್ಹತಾ ಸುತ್ತಿನ ಚೀನಾದ ವೀ ಸಿಜಿಯಾರನ್ನು ಮಣಿಸಿದರೆ, ಅಮೆರಿಕದ ಮ್ಯಾಡಿಸನ್ ಕೀಯ್ಸ 6-4, 7-5 ರಿಂದ ದೇಶಬಾಂಧವೇ ಅನ್ನಾ ಲೀ ಎದುರು ಗೆದ್ದು ಬೀಗಿದರು. ಬ್ರಿಟನ್ ಎಮ್ಮಾ ರಾಡುಕಾನು 7-6 (4), 7-6(2) ರಿಂದ ರಷ್ಯಾದ ಏಕಥ್ರೀನಾ ಅಲೆಕ್ಸಾಂಡ್ರೊವಾರನ್ನು ಪರಾಭವಗೊಳಿಸಿ ಎರಡನೇ ಸುತ್ತಿಗೇರಿದರು. ಪುರುಷರ ಸಿಂಗಲ್ಸ್‌ನಲ್ಲಿ 5ನೇ ಶ್ರೇಯಾಂಕಿತ ಮೆಡ್ವೆಡೇವ್ ಮ್ಯಾರಥಾನ್ ಹೋರಾಟದಲ್ಲಿ ಥಾಯ್ಲೆಂಡ್‌ನ ಕಸಿಡಿಟ್ ಸಮ್ರೆಜ್ ಎದುರು 6-2, 4-6, 3-6, 6-1, 6-2ರಿಂದ ಗೆಲುವು ದಾಖಲಿಸಿ ಮೊದಲ ಸುತ್ತಿನಲ್ಲೇ ಹೊರಬೀಳುವ ಮುಖಭಂಗದಿಂದ ಪಾರಾದರು.