ಟೊರೊಂಟೋದಲ್ಲಿ ‘ಪುಸ್ತಕ ಸಂಭ್ರಮ-ಕವಿ ಕೂಟ’: ಪುಸ್ತಕಕ್ಕೆ ಪ್ರದೇಶ, ಜಾತಿ, ವಯಸ್ಸು ಭೇದವಿಲ್ಲವೆಂದ ಡಾ. ಸಂಗಮೇಶ ಸವದತ್ತಿಮಠ

ಟೊರೊಂಟೊ: ಪುಸ್ತಕ ಎಷ್ಟೇ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ. ಯಾವ ಪುಸ್ತಕ ಯಾವ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಹೇಳಲು ಆಗಲ್ಲ. ಪುಸ್ತಕಕ್ಕೆ ಪ್ರದೇಶ, ಜಾತಿ, ಧರ್ಮ, ವಯಸ್ಸು, ಕಾಲ, ಲಿಂಗ, ಎಂಬ ಭೇದ ಇಲ್ಲ. ಇವತ್ತು ನೀವೆಲ್ಲರೂ ಪುಸ್ತಕ ಸಂಸ್ಕೃತಿಯನ್ನು ಪುಸ್ತಕ ಸಂಭ್ರಮವನ್ನಾಗಿ ಆತ್ಮೀಯತೆಯಿಂದ ಮತ್ತು ಸ್ವಯಂಸ್ಫೂರ್ತಿಯಿಂದ ಆಚರಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಆಗುತ್ತಿದೆ ಎಂದು ಡಾ. ಸಂಗಮೇಶ ಸವದತ್ತಿಮಠ ಹೇಳಿದರು.

ಟೊರೊಂಟೊ ಮತ್ತು ನೆರೆಹೊರೆಯ ನಗರಗಳ ಕನ್ನಡಿಗರಿಗಾಗಿ ಸ್ವಭಾವ ವೇದಿಕೆ ಮಾರ್ಚ್ 31ರಂದು ಆಯೋಜಿಸಿದ್ದ “ಪುಸ್ತಕ ಸಂಭ್ರಮ-ಕವಿ ಕೂಟ” ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಭಾಷೆ ನಮ್ಮನ್ನೆಲ್ಲ ಇಲ್ಲಿ ಒಂದುಗೂಡಿಸಿದೆ. ಕನ್ನಡ ನುಡಿ, ನಾಡು, ಸಂಸ್ಕೃತಿ-ಇವೆಲ್ಲ ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿವೆ. ಕನ್ನಡಕ್ಕೆ ಅದರದ್ದೇ ಆದ ಅಸ್ತಿತ್ವ, ಇತಿಹಾಸ, ಪರಂಪರೆ, ಭವ್ಯತೆ ಇದೆ. ಆದ್ದರಿಂದ ಇಂದು ನಾವು ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಮಾತು ನಮ್ಮಲ್ಲರಿಗೂ ಮಂತ್ರವಾಗಬೇಕು ಎಂದು ಸಲಹೆ ನೀಡಿದರು.

ಪ್ರಸ್ತಕ ಸಂಭ್ರಮದ ವಿಶೇಷತೆ: ಅತಿಹಿರಿಯ ಸಾಹಿತ್ಯಾಸಕ್ತರು ಅಥವಾ ಹೆಚ್ಚು ಪುಸ್ತಕಗಳ ಸಂಗ್ರಹವಿರುವ ಹಿರಿಯರ ಮನೆಗಳಲ್ಲಿ ಸ್ವಭಾವದ ‘ಪುಸ್ತಕ ಸಂಭ್ರಮ-ಕವಿ ಕೂಟ’ ಆಯೋಜನೆಗೊಳ್ಳುವುದು ವಿಶೇಷವಾಗಿದೆ. ಕಾರ್ಯಕ್ರಮ ಮುಗಿದ ಬಳಿಕ, ಆತಿಥೇಯರ ಮನೆಯನ್ನು ಒಪ್ಪ ಓರಣ ಮಾಡುವ ಜತೆಗೆ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಿಕೊಡಲಾಗುತ್ತದೆ. ಸುಮಾರು ೫೦೦ಕ್ಕೂ ಮಿಕ್ಕಿದ ಕನ್ನಡ ಪುಸ್ತಕಗಳ ಸಂಗ್ರಹ ಇರುವ 87 ವರ್ಷದ ಹಾಗೂ ಅತಿಹೆಚ್ಚು ಪುಸ್ತಕ ಸಂಗ್ರಹ ಹೊಂದಿರುವ ಡಾ. ಸಿಮ್​ ಮೂರ್ತಿ ಈ ಬಾರಿಯ ಕಾರ್ಯಕ್ರಮ ಆತಿಥ್ಯವಹಿಸಿಕೊಂಡಿದ್ದರು.

ಉಷಾ ರಾಜಶೇಖರ್, ಲಲಿತ ಗಣೇಶ್ ಕಲ್ಚಾರ್, ವಿನಾಯಕ್ ಹೆಗ್ಡೆ, ಪ್ರಶಾಂತ್ ಸುಬ್ಬಣ್ಣ, ದಿನೇಶ್ ಕುಮಾರ್ ಸ್ವರಚಿತ ಕವನಗಳನ್ನು ವಾಚಿಸಿದರು.

ಡಾ. ಸಿಮ್ ಮೂರ್ತಿ- ಪ್ರತಿಜ್ಞೆ, ರಮಣ ರಾವ್-ಮಂಕು ತಿಮ್ಮನ ಕಗ್ಗ, ಲಲಿತ ಗಣೇಶ್ ಕಲ್ಚಾರ್-ಅನಾಥ ಹಕ್ಕಿಯ ಕೂಗು, ಪ್ರಶಾಂತ್ ಅನಂತರಾಮನ್​-ಯೇಗ್ದಾಗೆಲ್ಲ ಐತೆ, ಆಶಾ ಚಂದ್ರು-ಮೂಕಜ್ಜಿಯ ಕನಸುಗಳು, ಬೃಂದಾ ಮುರಳಿ-ಮದರ್ ಕರೇಜ್, ದಿನೇಶ್ ಕುಮಾರ್-ಸ್ವಾರ್ಥ ಸೇರಿ ಹಲವು ಪುಸ್ತಕಗಳ ವಿಮರ್ಶಿಸುವ ಜತೆಗೆ ಆ ಪುಸ್ತಕಗಳನ್ನು ಓದುವಾಗ ತಮಗಾದ ಅನುಭವವನ್ನು ಹಂಚಿಕೊಂಡರು.
ಶಶಿ ಗೌರಕ್ಕಲ್, ರಂಜನಾ ಹೆಗಡೆ ಮತ್ತು ಅಕ್ಷತಾ ಶರಣ್ ಭಾವಗೀತೆಗಳನ್ನು ಹಾಡಿದರೆ, ಜಯಶ್ರೀ ರಾವ್ ಅವರು ಪಿಯಾನೋ ಹಿನ್ನೆಲೆ ಒದಗಿಸಿದರು.

ಅಮೃತ ವರ್ಷೋತ್ಸವ ಸಂಭ್ರಮದಲ್ಲಿದ್ದ ಡಾ. ಸಂಗಮೇಶ ಸವದತ್ತಿಮಠ ಅವರನ್ನು ಸನ್ಮಾನಿಸಲಾಯಿತು. ಪ್ರಶಾಂತ್ ಸುಬ್ಬಣ್ಣ ಸ್ವಾಗತಿಸಿದರು. ಸುಬ್ರಹ್ಮಣ್ಯ ಶಿಶಿಲ ಕಾರ್ಯಕ್ರಮ ನಿರ್ವಹಿಸಿದರು. ವಿನಾಯಕ ಹೆಗಡೆ ವಂದನಾರ್ಪಣೆ ಮಾಡಿದರು.