ಅವಕಾಶವಂಚಿತರ ನೆರವಿಗೆ ಶ್ರಮಿಸುತ್ತಿರುವ ಸಂಸ್ಥೆಗೆ ದೇಣಿಗೆ ನೀಡಲು ಬಾಲಿವುಡ್​ನಟಿ ಶ್ರೀದೇವಿ ಸೀರೆ ಹರಾಜು

ಮುಂಬೈ: ಅವಕಾಶವಂಚಿತ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಮತ್ತು ಅಂಗವಿಕಲರ ನೆರವಿಗೆ ಶ್ರಮಿಸುತ್ತಿರುವ ಸಂಸ್ಥೆಗೆ ದೇಣಿಗೆ ನೀಡಲು ಬಾಲಿವುಡ್​ ನಟಿ ದಿ. ಶ್ರೀದೇವಿ ಅವರ ಸೀರೆಯನ್ನು ಹರಾಜು ಮಾಡಲು ಶ್ರೀದೇವಿ ಅವರ ಪತಿ ಬೋನಿ ಕಪೂರ್​ ನಿರ್ಧರಿಸಿದ್ದಾರೆ.

ಶ್ರೀದೇವಿ ಅವರ ರೂಪ, ಲಾವಣ್ಯದ ಪ್ರತೀಕವಾದ ಹಾಗೂ ಅವರು ತುಂಬಾ ಇಷ್ಟಪಡುತ್ತಿದ್ದ ಸೀರೆಗಳನ್ನು ಹರಾಜು ಮಾಡಲಾಗುತ್ತಿದೆ. ಇವುಗಳನ್ನು ಹರಾಜು ಮಾಡುವ ಜವಾಬ್ದಾರಿಯನ್ನು ಪರಿಸೇರ ಎಂಬ ವೆಬ್​ಸೈಟ್​ಗೆ ನೀಡಲಾಗಿದೆ. ಪ್ರತಿಯೊಂದು ಸೀರೆಯ ಬೆಲೆ ಅಂದಾಜು 40 ಸಾವಿರ ರೂ.ಗಳಾಗಿದ್ದು, ಆರಂಭಿಕ ಹರಾಜು ಮೊತ್ತ 45 ಸಾವಿರ ರೂ.ಗಳಾಗಿವೆ. ಹರಾಜಿನಿಂದ ಬರುವ ಹಣವನ್ನು ಕನ್​ಸರ್ನ್​ ಇಂಡಿಯಾ ಫೌಂಡೇಷನ್​ ಎಂಬ ಸಂಸ್ಥೆಗೆ ನೀಡಲಾಗುವುದು ಎಂದು ಬೋನಿ ಕಪೂರ್​ ಅವರ ಆಪ್ತ ಮೂಲಗಳು ತಿಳಿಸಿವೆ.

ಮೊದಲ ಪುಣ್ಯತಿಥಿ: ಬಾಲಿವುಡ್​ನ ಜನಪ್ರಿಯ ನಟಿ ಶ್ರೀದೇವಿ ದುಬೈನಲ್ಲಿ 2018ರ ಫೆಬ್ರವರಿ 24ರಂದು ಮೃತಪಟ್ಟಿದ್ದರು. ಇವರ ಮೊದಲ ಪುಣ್ಯತಿಥಿಯನ್ನು ಫೆ.24ರಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಸೀರೆಗಳನ್ನು ಹರಾಜು ಮಾಡಿ, ದೇಣಿಗೆ ನೀಡಲು ಬೋನಿ ಕಪೂರ್​ ನಿರ್ಧರಿಸಿದ್ದಾರೆ ಎನ್ನಲಾಗಿದೆ.