ಹುಬ್ಬಳ್ಳಿ: ಶಿಗ್ಗಾವಿ- ಸವಣೂರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ ಎಂಬಂತಾಗಿದೆ. ಇಡೀ ಸರ್ಕಾರವೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದೆ. ಆದರೂ ನಾವು ಎದೆಗುಂದುವುದಿಲ್ಲ, ಕ್ಷೇತ್ರದ ಜನ ನಮ್ಮೊಂದಿಗೆ ಇದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರು ಸಹ ಅಭ್ಯಥಿರ್ ಭರತ ಬೊಮ್ಮಾಯಿ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಗೆಲುವು ನಿಶ್ಚಯವಾಗಿದೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ಜಮೀನಿನ ಉತಾರದಲ್ಲಿ ವಕ್ಫ ಹೆಸರಿನಿಂದಾಗಿಯೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತನ ಕುಟುಂಬದವರೇ ದೂರು ಕೊಟ್ಟಿದ್ದಾರೆ. ಅದನ್ನು ಟ್ವೀಟ್ ಮಾಡಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್ ಹಾಕಿದ್ದಾರೆಂದರೆ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರ ಧೋರಣೆ, ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸುವ ಹುನ್ನಾರ ಎಂಬುದು ಗೊತ್ತಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷದ ಧ್ವನಿ ದಮನ ಮಾಡಲು ಹೊರಟಿದೆ. ಆದರೆ, ಇವರು ಎಷ್ಟೇ ಒತ್ತಡ ಹೇರಿದರೂ ನಾವು ಪುಟಿದೇಳುತ್ತೇವೆ ಎಂದು ಸವಾಲು ಹಾಕಿದರು.
ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಬೇಕಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಪಿಪಿಇ ಕಿಟ್ ಅಗತ್ಯವಾಗಿತ್ತು. ತಜ್ಞರ ಸಮಿತಿಯ ಸಲಹೆಯಂತೆ ಅಂದು ರಾಜ್ಯ ಸರ್ಕಾರ ಉತ್ಪಾದನೆಗೆ ಅನುಮತಿ ನೀಡಿತು. ಜನರ ರಕ್ಷಣೆಗಾಗಿ ಕೈಗೊಂಡ ಅಂದಿನ ಎಲ್ಲ ನಿರ್ಣಯಗಳು ಸದನದಲ್ಲೂ ಚರ್ಚೆ ಆಗಿವೆ. ಇಷ್ಟಿದ್ದರೂ ಎಲ್ಲ ಮುಗಿದ ಮೇಲೆ ಅದರ ವಿಶ್ಲೇಷಣೆ ಮಾಡುವುದು ಎಷ್ಟು ಸರಿ? ಎಂದು ಬೊಮ್ಮಾಯಿ ಪ್ರಶ್ನಿಸಿದರು.
ನಿತ್ಯ ಒಂದೊಂದು ಕಾಂಗ್ರೆಸ್ ಸಚಿವ, ಶಾಸಕರ ಮೇಲೆ ಹಗರಣದ ಆರೋಪಗಳು ಕೇಳಿ ಬರುತ್ತಿವೆ. ಈ ವಿಷಯ ಡೈವರ್ಟ್ ಮಾಡಲು ಬಿಜೆಪಿ ನಾಯಕರ ಮೇಲೆ ಅನಗತ್ಯ ಆರೋಪ ಮಾಡಲಾಗುತ್ತಿದೆ. ವಕ್ಫ ಪ್ರಕರಣಕ್ಕೆ ಸಂಬಂಧಿಸಿ ರೈತರಿಗೆ ನೀಡಿದ್ದ ನೋಟಿಸ್ ವಾಪಸ್ ಎಂಬುದು ಕೇವಲ ಕಣ್ಣೊರೆಸುವ ತಂತ್ರ. ಮುಖ್ಯವಾಗಿ ವಕ್ಪ ಅದಾಲತ್ನ ಗೆಜೆಟ್ ನೋಟಿಫಿಕೇಶನ್ ರದ್ದಾಗಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.