More

  ಬಾಂಬರ್ ಆದಿತ್ಯ ಏಕಪಾತ್ರಾಭಿನಯ

  ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಪೊಲೀಸರಿಗೆ ಶರಣಾಗತಿಯಾಗಿರುವ ಆದಿತ್ಯ ರಾವ್, ಕೃತ್ಯ ಎಸಗುವ ಕೆಲದಿನಗಳ ಹಿಂದೆಯೇ 3-4 ಬಾರಿ ಹೋಗಿ ಬಾಂಬ್ ಇಡುವ ಜಾಗ ಹಾಗೂ ತೆರಳಬೇಕಾದ ರೀತಿ ಇತ್ಯಾದಿಗಳ ಬಗ್ಗೆ ಸಿದ್ಧತೆ ಮಾಡಿಕೊಂಡಿದ್ದ. ಬಾಂಬ್ ಇಟ್ಟ ಬಳಿಕ ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿದ್ದಾಗಿ ಏರ್​ಪೋರ್ಟ್ ಟರ್ವಿುನಲ್ ಮ್ಯಾನೇಜರ್​ಗೆ ಹುಸಿ ಕರೆ ಮಾಡಿ ಬೆದರಿಸಿದ್ದ ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದರು.

  ಬಾಂಬ್ ಇಟ್ಟ ಬಳಿಕ ಶಿರಸಿ, ಶಿವಮೊಗ್ಗಕ್ಕೆ ತೆರಳಿದ್ದು, ಮಾಧ್ಯಮಗಳಲ್ಲಿ ಆತನ ಚಲನವಲನದ ಸಿಸಿ ಕ್ಯಾಮರಾ ದೃಶ್ಯಾವಳಿ ಪ್ರಸಾರವಾಗಿದ್ದರಿಂದ ಹಾಗೂ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿದ್ದರಿಂದ ಬೆಂಗಳೂರಿಗೆ ತೆರಳಿ ಶರಣಾಗಲು ತೀರ್ವನಿಸಿದ್ದಾನೆ. ಅದರಂತೆ ಶಿವಮೊಗ್ಗದಿಂದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಬೆಂಗಳೂರು ತಲುಪಿದ್ದಾನೆ ಎಂದು ವಿವರಿಸಿದರು.

  ಬಜ್ಪೆ ಠಾಣೆಯಲ್ಲಿ 2 ಪ್ರಕರಣ: ಬಾಂಬ್ ಇರಿಸಿದ್ದು ಹಾಗೂ ಹುಸಿ ಕರೆ ಮಾಡಿ ಬೆದರಿಸಿದ ಕುರಿತು ಆದಿತ್ಯ ರಾವ್ ಮೇಲೆ ಬಜ್ಪೆ ಠಾಣೆಯಲ್ಲಿ 2 ಕೇಸ್ ದಾಖಲಿಸಲಾಗಿದೆ. ಬಾಂಬ್ ಇಟ್ಟ ಕೃತ್ಯಕ್ಕಾಗಿ ‘ಅನ್ಲಾಫುಲ್ ಆಕ್ಟಿವಿಟೀಸ್ (ಪ್ರಿವೆನ್ಶನ್) ಕಾಯ್ದೆ 1967’ರ ಸೆಕ್ಷನ್ 10,11,13, 18, ದಿ ಎಕ್ಸ್​ಪ್ಲೋಸಿವ್ ಸಬ್​ಸ್ಟ್ಯಾನ್ಸಸ್ ಆಕ್ಟ್​ನ ಸೆಕ್ಷನ್ 5, 6ರಂತೆ ಕೇಸ್ ದಾಖಲಿಸಿದ್ದು, ಹುಸಿ ಕರೆ ಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 307, 120ಬಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದರು.

  ಈಗಲೇ ಹೇಳಲ್ಲ: ಏರ್​ಪೋರ್ಟ್ ನಲ್ಲಿ ಆತ ಇಟ್ಟ ಬ್ಯಾಗ್​ನಲ್ಲಿ ಟೈಮರ್, ಡಿಟೊನೇಟರ್ ಮತ್ತು ಸ್ಪೋಟಕವಿತ್ತು. ತಾಂತ್ರಿಕವಾಗಿ ಸುಧಾರಿತ ಸ್ಪೋಟಕ ವಸ್ತುವಾಗಿತ್ತು. ಈ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ನಿಖರವಾಗಿ ತಿಳಿಯಲಿದೆ. ಸ್ಪೋಟಕ ಯಾವುದೆಂದು ಗೊತ್ತಿದೆ, ಆದರೆ ಈಗಲೇ ಬಹಿರಂಗಗೊಳಿಸುವುದಿಲ್ಲ ಎಂದು ಹರ್ಷ ತಿಳಿಸಿದರು. ಟೈಮರ್​ನೊಂದಿಗೆ ಸ್ಪೋಟಕಕ್ಕೆ ಸಂಪರ್ಕ ನೀಡದಿದ್ದರೂ ಇಡೀ ಬ್ಯಾಗ್ ಅನ್ನು ಸ್ಪೋಟಗೊಳಿಸಿ ನಾಶಪಡಿಸಿದ ಕುರಿತು ಪ್ರತಿಕ್ರಿಯಿಸಿ, ಇದು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಸಿಐಎಸ್​ಎಫ್​ನ ಜಂಟಿ ನಿರ್ಧಾರ. ಪೊಲೀಸ್ ಇಲಾಖೆ ಪಾತ್ರವಿಲ್ಲ ಎಂದರು.

  ಕಚೇರಿ ಕೆಲಸ ಇಷ್ಟವಿಲ್ಲ

  ಮೈಸೂರಿನಲ್ಲಿ ಬಿಇ ಮೆಕಾನಿಕಲ್ ಇಂಜಿನಿಯರಿಂಗ್ ಓದಿದ್ದ ಆದಿತ್ಯ ರಾವ್ ಬಳಿಕ ಎಂಬಿಎ ಮುಗಿಸಿದ್ದ. ಆರೋಗ್ಯದ ದೃಷ್ಟಿಯಿಂದ ಕಚೇರಿಯೊಳಗೆ ಕೆಲಸ ಮಾಡಲು ಆಸಕ್ತಿ ಇಲ್ಲವೆಂದು ಕಚೇರಿಯಿಂದ ಹೊರಗೆ ಮಾಡುವಂಥ ಕೆಲಸಗಳಿಗೆ ಸೇರುತ್ತಿದ್ದ. ಬ್ಯಾಂಕಿಂಗ್, ಫೈನಾನ್ಸ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಆದಿತ್ಯ, ಐಸಿಐಸಿಐ, ಎಚ್​ಡಿಎಫ್​ಸಿ, ಬಿರ್ಲಾ ಲೈಫ್ ಮೊದಲಾದ ಫೈನಾನ್ಸ್, ಇನ್ಶುರೆನ್ಸ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ. ಬೆಂಗಳೂರಿನ ಪೀಣ್ಯದಲ್ಲಿರುವ ಕಾಮಧೇನು ಅಟೋಮೊಬೈಲ್ಸ್ ಕಂಪನಿ, ಸುಳ್ಳು ದಾಖಲೆ ಸೃಷ್ಟಿಸಿ ಬಿಡದಿ ಟೊಯೊಟಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ. ಯಾವುದೇ ಕೆಲಸದಲ್ಲೂ ಹೆಚ್ಚು ಸಮಯ ಇರುತ್ತಿರಲಿಲ್ಲ. ಸಂದರ್ಶನ ಎದುರಿಸುವುದರಲ್ಲಿ ಪರಿಣತನಾಗಿದ್ದುದರಿಂದ ಅನುಭವ ಇಲ್ಲದಿದ್ದರೂ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದ. ಬುದ್ಧಿಮತ್ತೆಗೆ ತಕ್ಕುದಾಗಿ ಅವಕಾಶ ದೊರೆತಿಲ್ಲ, ಸಮಾಜದಲ್ಲಿ ಮನ್ನಣೆ ಸಿಗುತ್ತಿಲ್ಲ ಎಂಬ ಭಾವನೆ ಬಂದು ವೈಟ್ ಕಾಲರ್ ಉದ್ಯೋಗ ಬಿಟ್ಟು ಸೆಕ್ಯುರಿಟಿ ಗಾರ್ಡ್, ಹೊಟೇಲ್ ಇತ್ಯಾದಿ ಬ್ಲೂ ಕಾಲರ್ ಕೆಲಸಗಳಿಗೆ ಶಿಫ್ಟ್ ಆಗಿದ್ದ.

  ಕೆಲಸ ಸಿಗದ್ದಕ್ಕೆ ಪ್ರತೀಕಾರ

  ಹಲವು ರೀತಿಯ ಕೆಲಸಗಳನ್ನು ಮಾಡಿದ ಅನುಭವದಿಂದ ಬೇಸತ್ತ ಆದಿತ್ಯ ಕೊನೆಗೆ ಬೆಂಗಳೂರು ಏರ್​ಪೋರ್ಟ್​ನ 25 ಸಾವಿರ ರೂ. ವೇತನದ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಹಾಕಿದ್ದ. ಓವರ್ ಕ್ವಾಲಿಫೈಡ್ ಆಗಿರುವುದರಿಂದ ಅಫಿಡವಿಟ್ ಮಾಡಿಸಿ ತರುವಂತೆ ಅಲ್ಲಿನ ಅಧಿಕಾರಿಗಳು ಹೇಳಿದಂತೆ ಮಣಿಪಾಲಕ್ಕೆ ಬಂದು ಅಫಿಡವಿಟ್ ಮಾಡಿಸಿ, ವಾಪಸಾಗುಷ್ಟರಲ್ಲಿ ಆ ಕೆಲಸ ಬೇರೆಯವರ ಪಾಲಾಗಿತ್ತು. ಇದರಿಂದ ನೊಂದು ಪ್ರತೀಕಾರಕ್ಕೆ ತೀರ್ವನಿಸಿದ್ದ. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಮಂಗಳೂರು ವಿಮಾನ ನಿಲ್ದಾಣ ದೊಡ್ಡದಾಗಿರುವುದರಿಂದ ಕೃತ್ಯಕ್ಕೆ ಆಯ್ಕೆ ಮಾಡಿಕೊಂಡೆ ಎಂದು ಆರೋಪಿ ಸ್ವ ಇಚ್ಛಾ ಹೇಳಿಕೆ ನೀಡಿರುವುದಾಗಿ ಹರ್ಷ ವಿವರಿಸಿದರು.

  ಒಬ್ಬನೇ ಭಾಗಿ

  ಬಾಂಬ್ ಇಟ್ಟು ವ್ಯವಸ್ಥಿತವಾಗಿ ಬೆಂಗಳೂರಿಗೆ ಹೋಗಿ ಶರಣಾಗಿದ್ದ ಆದಿತ್ಯ ರಾವ್ ‘ಮಾನಸಿಕ ಅಸ್ವಸ್ಥನಾಗಿ ದ್ದನೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಇದು ದೇಶದ ಆಂತರಿಕ ಭದ್ರತೆಗೆ ಆತಂಕ ತರುವ ಅತಿದೊಡ್ಡ ಆರೋಪ. ಪೊಲೀಸ್ ತನಿಖಾ ತಂಡ ಎಲ್ಲ ಸಾಕ್ಷ್ಯಾಧಾರ ಸಂಗ್ರಹಿಸಿದೆ. ಅದರ ನಂತರ ಬೇರೆ ಯಾವುದೇ ವ್ಯಾಖ್ಯಾನ ಮಾಡಲ್ಲ ಎಂದರು. ಇದುವರೆಗೆ ಸಂಗ್ರಹಿಸಿದ ಮಾಹಿತಿ ಪ್ರಕಾರ ಏರ್​ಪೋರ್ಟ್​ನಲ್ಲಿ ಸ್ಪೋಟಕ ಇರಿಸಿದ ಕೃತ್ಯದಲ್ಲಿ ಆದಿತ್ಯ ರಾವ್ ಒಬ್ಬನೇ ಭಾಗಿಯಾಗಿದ್ದಾನೆ. ತನಿಖೆ ಮುಂದುವರಿಯಲಿದ್ದು, ಯಾರಾದರೂ ಭಾಗಿಯಾಗಿದ್ದರೆ ಮುಂದಿನ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಹರ್ಷ ಹೇಳಿದರು.

  ಆದಿತ್ಯ ರಾವ್​ನ ಮೊದಲನೇ ಹಂತದ ತನಿಖೆ ಆಗಿದೆ. ಆರೋಪಿಯು ಮಾನಸಿಕ ಅಸ್ವಸ್ಥನೆಂದು ನಾನು ಹೇಳಿಲ್ಲ, ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ

  | ಬಸವರಾಜ ಬೊಮ್ಮಾಯಿ ಗೃಹ ಸಚಿವ

  ಮಂಗಳೂರಿನಲ್ಲಿ ಬಾಂಬ್ ಪತ್ತೆಯಂತಹ ಪ್ರಕರಣದ ಆರೋಪಿಗಳನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು. ಯಾವುದೇ ಸಮಾಜಘಾತುಕ ಶಕ್ತಿಗಳನ್ನು ಬೆಳೆಯಲು ಬಿಡಬಾರದು. ಕೆಲವರು ಶೋಕಿ, ಪ್ರಚಾರದ ಆಸೆಗಾಗಿ ಹೀಗೆಲ್ಲ ಮಾಡುತ್ತಾರೆ.

  | ಬಿ.ಶ್ರೀರಾಮುಲು ಆರೋಗ್ಯ ಸಚಿವ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts