ಕಲಬುರಗಿ: ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಕರ್ನಾಟಕ (ಕೆಕೆ) ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆ ಹಿನ್ನೆಲೆಯಲ್ಲಿ ವಾಡಿ ನಿಲ್ದಾಣದಲ್ಲಿ ಭಾನುವಾರ ಬೆಳಗಿನ ಜಾವ ನಾಲ್ಕು ಗಂಟೆ ತಪಾಸಣೆ ನಡೆಸಲಾಯಿತು.

ಹುಸಿ ಕರೆ ಎಂದು ಖಚಿತವಾದ ಬಳಿಕ ನಿಟ್ಟುಸಿರು ಬಿಟ್ಟ ಅಧಿಕಾರಿಗಳು, ಉತ್ತರ ಪ್ರದೇಶ ಮೂಲದ ದೀಪಸಿಂಗ್ ಠಾಕೂರ್ ಎಂಬಾತನನ್ನು ಬಂಧಿಸಿದ್ದಾರೆ. ಜನರಲ್ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ದೀಪಸಿಂಗ್ ಆರ್ಪಿಎಫ್ ಅಧಿಕಾರಿಗಳಿಗೆ ಕರೆ ಮಾಡಿ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಸುಳ್ಳು ಹೇಳಿದ್ದಾನೆ. ತಕ್ಷಣ ರೈಲ್ವೆ ಪೊಲೀಸ್, ಆರ್ಪಿಎಫ್, ಬಾಂಬ್ ನಿಷ್ಕ್ರಿಯ ದಳದವರು ಕಲಬುರಗಿಯಲ್ಲಿ ರಾತ್ರಿ 1.30ಕ್ಕೆ ರೈಲು ತಡೆದು ಮುಂಜಾನೆ 4.30ರವರೆಗೆ ತಪಾಸಣೆ ನಡೆಸಿ ಹುಸಿ ಕರೆ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ.
ದೀಪಸಿಂಗ್ ಠಾಕೂರ್ ಪ್ರಯಾಣಿಕರೊಂದಿಗೆ ಜಗಳ ಮಾಡಿಕೊಂಡು ಎಲ್ಲರಿಗೂ ಪಾಠ ಕಲಿಸುವುದಾಗಿ ಹೇಳಿ ಪೊಲೀಸರಿಗೆ ಕರೆ ಮಾಡಿದ್ದ. ನಂತರ ಪೊಲೀಸರಿಗೆ ಹೆದರಿ ಫ್ಲೈಟ್ ಮೋಡ್ಗೆ ಹಾಕಿದ್ದ. ಟ್ರೂ ಕಾಲರ್ನಲ್ಲಿ ಆತನ ಚಿತ್ರ ಪರಿಶೀಲಿಸಿ ಪತ್ತೆ ಹಚ್ಚಿದ ಪೊಲೀಸರು, ವಶಕ್ಕೆ ಪಡೆದು ವಿಚಾರಿಸಿದಾಗ ಹುಸಿ ಕರೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ವಾಡಿ ಠಾಣೆ ಪಿಎಸ್ಐ ವೀರಭದ್ರಪ್ಪ ವಿಜಯವಾಣಿಗೆ ತಿಳಿಸಿದ್ದಾರೆ.