More

    ಬಾಂಬ್ ಇದೆ ಎಂದು ಟಿಶ್ಯೂ ಪೇಪರ್‌ನಲ್ಲಿ ಬೆದರಿಕೆ; ಇಂಡಿಗೋ ವಿಮಾನದಲ್ಲಿ ಆತಂಕ..

    ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ನಲ್ಲಿ ಭಾನುವಾರ ರಾತ್ರಿ ಇಳಿಯುವ ಮುನ್ನ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.

    ಇಳಿಯುವ ಮುನ್ನವೇ ವಿಮಾನದಲ್ಲಿ ಬಾಂಬ್ ಇರುವುದಾಗಿ ಶೌಚಗೃಹದಲ್ಲಿ ಟಿಶ್ಯೂ ಪೇಪರ್ ಮೇಲೆ ಗೀಚಿದ ಅನಾಮಧೇಯ ಸಂದೇಶ ಪತ್ತೆಯಾಗಿ ಆತಂಕ ಮೂಡಿತ್ತು. ವಿಮಾನದ ಕ್ಯಾಪ್ಟನ್ ಕೆಐಎ ಭದ್ರತಾ ಸಂಸ್ಥೆಯನ್ನು ಸಂಪರ್ಕಿಸಿ, ಅನುಮತಿ ಪಡೆದು ವಿಮಾನ ಇಳಿಸಿದ್ದಾರೆ. ಸುರಕ್ಷಿತ ಸ್ಥಳದಲ್ಲಿ ಇಳಿಸಿ ತಪಾಸಣೆ ನಡೆಸಿದ ಮೇಲೆ ಹುಸಿ ಬಾಂಬ್ ಸಂದೇಶ ಎಂಬ ನಿರ್ಧಾರಕ್ಕೆ ಬಂದು ನಿಟ್ಟುಸಿರುಬಿಟ್ಟಿದ್ದಾರೆ.

    ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ನಂ. 6ಇ 556ರ ಹಿಂಭಾಗದ ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಬಿದ್ದಿದ್ದನ್ನು ಕ್ಯಾಬಿನ್ ಸಿಬ್ಬಂದಿ ಗಮನಿಸಿದ್ದಾರೆ. ಅದರಲ್ಲಿ ‘ಲ್ಯಾಂಡ್ ನಾ ಕರ್ನಾ, ಇಸ್ ಫ್ಲೈಟ್ ಮೆ ಬಾಂಬ್ ಹೈ’ (ವಿಮಾನವನ್ನು ಇಳಿಸಬೇಡಿ, ಇದರಲ್ಲಿ ಬಾಂಬ್ ಇದೆ) ಎಂದು ಹಿಂದಿಯಲ್ಲಿ ಉಲ್ಲೇಖಿಸಲಾಗಿತ್ತು.

    ಈ ಬಾಂಬ್ ಬೆದರಿಕೆ ಸಂದೇಶವನ್ನು ಗಮನಿಸಿದ ಸಿಬ್ಬಂದಿ, ಕಾಕ್‌ಪಿಟ್ ಸಿಬ್ಬಂದಿಗೆ ರವಾನೆ ಮಾಡಿದ್ದಾರೆ. ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮತ್ತು ವಾಯು ಸಂಚಾರ ನಿಯಂತ್ರಣ ಘಟಕವನ್ನು ಸಂಪರ್ಕಿಸಿ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಲ್ಯಾಂಡ್ ಆಗಲು ಅನುಮತಿ ಸಿಕ್ಕ ಬಳಿಕ ರಾತ್ರಿ 9.30ರಲ್ಲಿ ವಿಮಾನ ಕೆಐಎನಲ್ಲಿ ಇಳಿಸಲಾಗಿದೆ.

    ಪ್ರತ್ಯೇಕ ಸ್ಥಳದಲ್ಲಿ ವಿಮಾನ ನಿಲ್ಲಿಸಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಸಿಐಎಸ್‌ಎಫ್ ತಂಡ ತಪಾಸಣೆ ನಡೆಸಿತು. ಪ್ರಯಾಣಿಕರನ್ನು ಎರಡು ಬಾರಿ ಪರಿಶೀಲಿಸಲಾಗಿದೆ. ಲಗೇಜ್‌ಗಳನ್ನು ಪ್ರತ್ಯೇಕ ಮಾಡಿ ಮತ್ತು ವೈಯಕ್ತಿಕ ತಪಾಸಣೆ ನಡೆಸಿ ಕಳುಹಿಸಿಕೊಡಲಾಗಿದೆ.

    ಶೌಚಗೃಹ ಪ್ರವೇಶಿಸುವವರ ಮೇಲೆ ನಿಗಾ ಇರಿಸಲು ಹೊರಗೆ ಕ್ಯಾಮರಾ ಅಳವಡಿಸುವುದು ಉತ್ತಮ. ಅಂತಹ ಶಂಕಿತರನ್ನು ಸುಲಭವಾಗಿ ಕಂಡುಹಿಡಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹುಸಿ ಬಾಂಬ್ ಸಂದೇಶದ ಪರಿಣಾಮ ಬೆಂಗಳೂರಿನಿಂದ ಜೈಪುರಕ್ಕೆ ತೆರಳುವ ಇಂಡಿಗೋ ವಿಮಾನ 3.15 ಗಂಟೆಗಳ ಕಾಲ ತಡವಾಗಿ ಹೊರಟಿತು.

    ಕೈಬರಹ ಪರಿಶೀಲನೆ: ಪ್ರಯಾಣಿಕರ ಕೈಬರಹ ಮಾದರಿ ಸಂಗ್ರಹಿಸಲಾಗಿದೆ. ಶಂಕಿತರ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಶೌಚಗೃಹದ ಒಳಗೆ ಪ್ರಯಾಣಿಕ ಟಿಶ್ಯೂ ಪೇಪರ್ ಬಿಟ್ಟು ಹೋಗಿರಬೇಕು. ಅದರ ಮೇಲೆ ಬೇರೆಯವರು ಬರೆದಿರುವ ಸಾಧ್ಯತೆಯನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts