ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್​ ಬಿರುಗಾಳಿ!: 1,339 ವಿಮಾನಗಳ ಸಂಚಾರ ರದ್ದು

ಡೆನೆವರ್​: ಅಮೆರಿಕದ ಪರ್ವತಶ್ರೇಣಿಗಳು ಮತ್ತು ಬಯಲು ಪ್ರದೇಶದಲ್ಲಿ ಬಾಂಬ್​ ಬಿರುಗಾಳಿ ಉಂಟಾಯಿತು! ಇದರಿಂದಾಗಿ ಅಲ್ಲಿನ ವೈಮಾನಿಕ ಪ್ರಯಾಣ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಅಂದಾಜು 1,339 ವಿಮಾನಗಳ ಸಂಚಾರ ರದ್ದುಗೊಂಡಿತು.

ಹಾಂ, ಬಾಂಬ್​ಗಳ ಬಿರುಗಾಳಿನಾ?… ಉಗ್ರರು ಮತ್ತೊಮ್ಮೆ ಅಮೆರಿಕದ ಮೇಲೆ ಬಾಂಬ್​ಗಳ ಸುರಿಮಳೆಗೈದರೇ ಎಂಬಿತ್ಯಾದಿ ಪ್ರಶ್ನೆಗಳು ಮನದಲ್ಲಿ ಮೂಡಬಹುದು. ಆದರೆ, ಇದು ಉಗ್ರರು ಸುರಿಸಿದ ಬಾಂಬ್​ಗಳ ಸುರಿಮಳೆ ಅಲ್ಲ. ಬದಲಿಗೆ ನೈಸರ್ಗಿಕವಾಗಿ ಎದ್ದ ಬಿರುಗಾಳಿ. ಇದರಿಂದಾಗಿ ಪರ್ವತಶ್ರೇಣಿಗಳು, ಗುಡ್ಡಗಾಡು ಪ್ರದೇಶದಲ್ಲಿ ಭಾರಿ ಹಿಮಪಾತವಾದರೆ, ಬಯಲು ಪ್ರದೇಶದಲ್ಲಿ ಭಾರಿ ಮಳೆಯಾಯಿತು. ಇದರಿಂದಾಗಿ 1,339 ವಿಮಾನಗಳು ಹಾಗೂ ವಾಹನಗಳ ಸಂಚಾರದಲ್ಲಿ ಭಾರಿ ವ್ಯತ್ಯ ಉಂಟಾಯಿತು.

ಕೊಲಾರಾಡೋ, ವ್ಯೋಮಿಂಗ್​, ನೆಬ್ರಸ್ಕಾ ಮತ್ತು ಡಕೋಟಾಗಳಲ್ಲಿ ಭಾರಿ ತೊಂದರೆ ಉಂಟಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಬರದಂತೆ ಹಾಗೂ ವಾಹನಗಳನ್ನು ಬಳಸದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಾಂಬ್​ ಬಿರುಗಾಳಿ ಎಂದರೆ…: ಬಾಂಬ್​ ಬಿರುಗಾಳಿ ಎಂಬುದು ಒಂದು ಬಿರುಗಾಳಿಯ ಹೆಸರು. 24 ಗಂಟೆಗಳ ಅವಧಿಯಲ್ಲಿ ಬ್ಯಾರೋಮೆಟ್ರಿಕ್​ ಒತ್ತಡ 24 ಬಾರ್​ ಇಳಿಕೆಯಾದಾಗ ಏಳುವ ಬಿರುಗಾಳಿ. ಈ ಬಿರುಗಾಳಿ ಎದ್ದಾಗ ತುಂಬಾ ಬಿರುಸಾಗಿ ಗಾಳಿ ಬೀಸುತ್ತದೆ. ಜತೆಗೆ ಭಾರಿ ಹಿಮವರ್ಷ ಅಥವಾ ಮಳೆಯಾಗುತ್ತದೆ. (ಏಜೆನ್ಸೀಸ್​)