ಉಗ್ರರ ದಾಳಿ ಖಂಡಿಸಿ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ ಅಕ್ಷಯ್​, ಅಮೀರ್​, ಸಲ್ಮಾನ್​

ನವದೆಹಲಿ: ಕಾಶ್ಮೀರದ ಅವಂತಿಪೋರಾದಲ್ಲಿ ಜೈಷ್ ಎ ಮೊಹಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯನ್ನು ಬಾಲಿವುಡ್​ ನಟರಾದ ಅಕ್ಷಯ್​ ಕುಮಾರ್​, ಅಮೀರ್​ ಖಾನ್​ ಹಾಗೂ ಸಲ್ಮಾನ್​ ಖಾನ್​ ಖಂಡಿಸಿದ್ದು, ಹುತಾತ್ಮರಾದ ವೀರ ಯೋಧರಿಗೆ ಸಂತಾಪ ಸೂಚಿಸಿದ್ದಾರೆ.

ಭೀಕರವಾದ ಭಯೋತ್ಪಾದಕ ದಾಳಿಯಿಂದ ಮನಸ್ಸಿಗೆ ಆಘಾತವಾಗಿದೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ನೀಡಲಿ ಹಾಗೂ ಗಾಯಗೊಂಡ ಯೋಧರು ಬೇಗ ಗುಣಮುಖರಾಗಲಿ ಎಂದು ನಟ ಅಕ್ಷಯ್​ ಕುಮಾರ್​ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದು, ನಾವು ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಮ್ಮ ದೇಶದ ಉಳಿವಿಗಾಗಿ ಹುತಾತ್ಮರಾದ ವೀರ ಯೋಧರಿಗೆ ಹಾಗೂ ಅವರ ಕುಟುಂಬದವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ ಎಂದು ನಟ ಸಲ್ಮಾನ್​ ಖಾನ್​ ಸಂತಾಪ ಸೂಚಿಸಿದ್ದಾರೆ.

ಕಾಶ್ಮೀರದ ಪುಲ್ವಾಮದಲ್ಲಿ ನಮ್ಮ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಉಗ್ರರ ದಾಳಿ ಸುದ್ದಿ ಕೇಳಿ ನನಗೆ ಆಘಾತವಾಯಿತು. ಇದೊಂದು ದುಃಖದ ಸಂಗತಿ. ಹುತಾತ್ಮರಾದ ಯೋಧರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಗಳು ಎಂದು ನಟ ಅಮೀರ್​ ಖಾನ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಗುರುವಾರ ಶ್ರೀನಗರ – ಜಮ್ಮು ಹೆದ್ದಾರಿಯಲ್ಲಿ ನಿಂತಿದ್ದ ಆಟೋರಿಕ್ಷಾಕ್ಕೆ ಸುಧಾರಿತ ಸ್ಫೋಟಕ ಅಳವಡಿಸಿ, ಸಿಆರ್‌ಪಿಎಫ್‌ ಯೋಧರಿದ್ದ ವಾಹನದ ಮೇಲೆ ಜೈಷ್ ಎ ಮೊಹಮದ್ ಸಂಘಟನೆಯ ಉಗ್ರರು ದಾಳಿ ನಡೆಸಿದರು. ಘಟನೆಯಲ್ಲಿ 37 ಯೋಧರು ಹುತಾತ್ಮರಾಗಿ ಹಲವರು ಗಾಯಗೊಂಡರು. (ಏಜೆನ್ಸೀಸ್​)