ವಯಸ್ಸಾದ, ಯಶಸ್ಸು ಕಾಣದ ಮಹಿಳೆಯರಿಂದ #Me Too ಚಳವಳಿ: ಗಾಯಕ ಅಭಿಜಿತ್​ ಭಟ್ಟಾಚಾರ್ಯ

ಮುಂಬೈ: ಬಾಲಿವುಡ್​ನ #Me Too ಚಳವಳಿ ದಿನಕ್ಕೊಬ್ಬರನ್ನು ಸುತ್ತಿಕೊಳ್ಳುತ್ತಿದೆ. ಹಾಗೇ ತಮ್ಮ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನನಗೇನೂ ಹೆದರಿಕೆಯಿಲ್ಲ. ಹೀಗೆ ಒಬ್ಬರಲ್ಲ ಒಬ್ಬರ ಮೇಲೆ ಆರೋಪ ಮಾಡುತ್ತಿರುವ ಮಹಿಳೆಯರು ಈಗ ವಯಸ್ಸಾದವರು. ನಿವೃತ್ತ ಜೀವನ ನಡೆಸುತ್ತಿರುವವರು. ಬದುಕಲ್ಲಿ ಯಶಸ್ಸು ಕಾಣದೆ ನಿರಾಸೆಗೊಂಡವರು. ಇವೆರೆಲ್ಲ ತನ್ನ ಗಂಡನಿಗೆ ಹೊಡೆಯುವವರು ಆಗಿರಬೇಕು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ತನುಶ್ರೀ ದತ್ತಾ ನಾನಾ ಪಾಟೇಕರ್​ ವಿರುದ್ಧ ಆರೋಪ ಮಾಡುತ್ತಿದ್ದಂತೇ ಹಲವರು ತಮ್ಮ ವೃತ್ತಿ ಜೀವನದಲ್ಲಿ ಆದ ಕೆಟ್ಟ ಅನುಭವ ಹಂಚಿಕೊಂಡಿದ್ದರು. ಹಾಗೇ ಗಗನಸಖಿಯೋರ್ವರು ಗಾಯಕ ಅಭಿಜಿತ್​ ಭಟ್ಟಾಚಾರ್ಯ ತನ್ನ ಜತೆ ಅನುಚಿತವಾಗಿ ವರ್ತಿಸಿದ್ದರು ಎಂದು ಹೇಳಿಕೊಂಡಿದ್ದರು.

20 ವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಗಾಯಕ ಅಭಿಜಿತ್​ ನನ್ನನ್ನು ಹಿಡಿದು, ತಮ್ಮ ಬಳಿ ಎಳೆದುಕೊಂಡರು. ನಾನು ನೃತ್ಯ ಮಾಡಲು ನಿರಾಕರಿಸಿದಾಗ ತಳ್ಳಿದರು. ನಾನು ಅವರ ಚೇಷ್ಟೆಗಳ ವಿರುದ್ಧ ತಿರುಗಿಬಿದ್ದಾಗ, ನನ್ನ ಕಿವಿಯ ಬಳಿ ಬಂದು, ನಿನ್ನನ್ನು ನೀನು ಏನಂದುಕೊಂಡಿದ್ದೀಯಾ? ಸ್ವಲ್ಪ ಕಾಯಿ ನಿನಗೆ ಒಳ್ಳೆಯ ಪಾಠ ಕಲಿಸುತ್ತೇನೆ ಎಂದು ಹೇಳಿದ್ದಲ್ಲದೆ, ನನ್ನ ಕಿವಿಗೆ ಚುಂಬಿಸಲು ಮುಂದಾಗಿದ್ದರು ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿದ್ದರು.

ಈ ಬಗ್ಗೆ ಮಾಧ್ಯಮದವರು ಅಭಿಜಿತ್​ ಬಳಿ ಪ್ರಶ್ನಿಸಿದಾಗ, ದೊಡ್ಡದಾಗಿ ನಕ್ಕ ಅವರು, ನನಗೆ ಅವರು ಯಾರೆಂದು ಗೊತ್ತಿಲ್ಲ. ನನ್ನ ಜೀವನದಲ್ಲಿ ಇದುವರೆಗೆ ನಾನು ಯಾವುದೇ ಪಬ್​, ಡಿಸ್ಕೋ ಕ್ಲಬ್​ಗಳಿಗೆ ಹೋಗಿಲ್ಲ. ನನಗೆ ನಾನು 1958ರಲ್ಲಿ ಹುಟ್ಟಿದ್ದೇನೋ ಇಲ್ಲವೋ ಎಂಬುದೂ ನೆನಪಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಗಾಯಕ ಕೈಲಾಶ್​ ಖೇರ್​ ವಿರುದ್ಧ ಸೋನಾ ಮೋಹಾಪಾತ್ರಾ ಮಾಡಿರುವ ಆರೋಪದ ಬಗ್ಗೆ ಪ್ರಶ್ನೆ ಮಾಡಿದಾಗ, ಬದುಕಲ್ಲಿ ಯಶಸ್ಸು ಕಾಣದ ಮಹಿಳೆಯರು ಈಗ ಹೀಗೆ ಲೈಂಗಿಕ ದೌರ್ಜನ್ಯದ ದೂರು ಹೇಳುತ್ತಿದ್ದಾರೆ ಎಂದಿದ್ದಾರೆ.