ಪ್ರಿಯಾಂಕಾ ಛೋಪ್ರಾ ತುಂಬ ಕಪ್ಪು ಎಂದಿದ್ದರು ತೀರ್ಪುಗಾರರು

ನವದೆಹಲಿ: ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಬದುಕನ್ನು ಬದಲಿಸಿದ್ದು 18 ವರ್ಷಗಳ ಹಿಂದೆ ಗೆದ್ದ ಮಿಸ್​ ಇಂಡಿಯಾ ಹಾಗೂ ವಿಶ್ವ ಸುಂದರಿ ಪಟ್ಟ. ಆದರೆ 2000ನೇ ಇಸವಿಯಲ್ಲಿ ಆಕೆ ವಿಶ್ವ ಸುಂದರಿ ಪಟ್ಟಕ್ಕೆ ಏರುವ ಮೊದಲು ಭಾಗವಹಿಸಿದ್ದ ಮಿಸ್​ ಇಂಡಿಯಾ ಸ್ಪರ್ಧೆಯಲ್ಲಿ ಅವಳನ್ನು ಆಯ್ಕೆ ಮಾಡುವುದರ ಬಗ್ಗೆ ಕೆಲವು ತೀರ್ಪುಗಾರರಲ್ಲಿ ಒಮ್ಮತ ಇರಲಿಲ್ಲವಂತೆ. ಅವಳು ತುಂಬ ಕಪ್ಪಗಿದ್ದಾಳೆ. ಹೇಗೆ ಮಿಸ್​ ಇಂಡಿಯಾ ಕಿರೀಟ ತೊಡಿಸುವುದು ಎಂದು ಅಪಸ್ವರ ನುಡಿದಿದ್ದರಂತೆ.

ಈ ವಿಷಯವನ್ನು ಅಂದಿನ ಸ್ಪರ್ಧೆಯ ಮೆಂಟರ್​ ಆಗಿದ್ದ ಪ್ರದೀಪ್​ ಗುಹಾ ಬಹಿರಂಗ ಪಡಿಸಿದ್ದಾರೆ. ಅಸೀಮ್​ ಛಬ್ರಾ​ ಪ್ರಿಯಾಂಕಾ ಛೋಪ್ರಾ ಬಗ್ಗೆ ಬರೆದಿರುವ ದಿ ಇನ್​ಕ್ರೆಡಿಬಲ್​ ಸ್ಟೋರಿ ಆಫ್​ ಗ್ಲೋಬಲ್​ ಬಾಲಿವುಡ್ ಸ್ಟಾರ್​ ಪುಸ್ತಕಕ್ಕೆ ವಿವರಣೆ ನೀಡಿರುವ ಅವರು, ಪ್ರಿಯಾಂಕಾ ಬಣ್ಣದ ಬಗ್ಗೆ ಮಾತನಾಡಿದಾಗ ನಾನೇ ಅದನ್ನು ಅಲ್ಲಗಳೆದಿದ್ದೆ. ದಕ್ಷಿಣ ಅಮೆರಿಕದ ಹುಡುಗಿಯರನ್ನು ನೋಡಿ. ಆಫ್ರಿಕಾದ ಹುಡುಗಿಯರು ಇನ್ನೂ ಕಪ್ಪಗಿದ್ದರೂ ಗೆಲ್ಲುತ್ತಾರೆ. ಅವರಿಗೆಲ್ಲ ಹೋಲಿಸಿದರೆ ಪ್ರಿಯಾಂಕಾ ಬಣ್ಣ ಅಷ್ಟೇನೂ ಕಪ್ಪು ಅಲ್ಲ ಎಂದು ಹೇಳಿದ್ದೆ. ನನಗೆ ಪ್ರಿಯಾಂಕಾ ಗೆಲ್ಲುತ್ತಾಳೆ ಎಂಬ ನಂಬಿಕೆ ಇತ್ತು. ಅವಳು ಒಂದು ಬಾರಿ ಮಾಡಿದ ತಪ್ಪನ್ನು ಅರಿತ ಮೇಲೆ ಮತ್ಯಾವತ್ತೂ ಅದನ್ನು ಮರುಕಳಿಸುವುದಿಲ್ಲ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಸೌಂದರ್ಯ ಸ್ಪರ್ಧೆ ಎದುರಿಸಿದ್ದು, ಆ ಹಿನ್ನೆಲೆಯಲ್ಲಿ ಮಾಡಿದ ಹೋರಾಟಗಳ ಬಗ್ಗೆ ಅಸೀಮ್​ ಛಬ್ರಾ​ಗೆ ಮಾಹಿತಿ ನೀಡಿರುವ ಪ್ರದೀಪ್​ ಗುಹಾ, ಪ್ರಿಯಾಂಕಾ ಛೋಪ್ರಾ ಮೊದಲು ಸ್ಪಷ್ಟ ಆಯ್ಕೆ ಆಗಿರಲಿಲ್ಲ. ಇನ್ನೂ ಸ್ವಲ್ಪ ಆತ್ಮವಿಶ್ವಾಸ ಬೇಕಿತ್ತು ಅವಳಲ್ಲಿ. ಅವಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಷ್ಟವಿದೆಯಾ ಇಲ್ಲವಾ ಎಂದು ನನಗೂ ಅನ್ನಿಸಿತ್ತು. ಆದರೆ ಕ್ರಮೇಣ ಅವಳ ಹೋರಾಟ, ಆತ್ಮವಿಶ್ವಾಸವನ್ನು ನಾನು ನೋಡಿದ್ದೇನೆ. ಗೆಲುವಿಗಾಗಿ 200% ಶ್ರಮ ಹಾಕಿದ್ದಾಳೆ ಎಂದು ಹೇಳಿದ್ದಾರೆ.