ಹಿಂದಿಯ ‘ರಾಕೆಟ್ ಸಿಂಗ್: ಸೇಲ್ಸ್‌ಮ್ಯಾನ್ ಆಫ್ ದ ಇಯರ್’, ‘ಹೌಸ್‌ಫುಲ್-2’, ತೆಲುಗಿನ ‘ಆರೆಂಜ್’, ‘ಮಸಾಲ’ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ನಟಿ ಶಜಾನ್ ಪದಮ್ಸಿಗೆ ಸಲ್ಲುತ್ತದೆ. ರಣಬೀರ್ ಕಪೂರ್, ಅಕ್ಷಯ್ ಕುಮಾರ್, ರಾಮಚರಣ್ ತೇಜ, ವಿಕ್ಟರಿ ವೆಂಕಟೇಶ್ ಅವರಂತಹ ಸ್ಟಾರ್‌ಗಳ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇಂತಹ ನಟಿ ಕಳೆದ ಕೆಲ ವರ್ಷಗಳಿಂದ ಬ್ರೇಕ್‌ನಲ್ಲಿದ್ದರು. 2023ರಲ್ಲಿ ತೆರೆಕಂಡಿದ್ದ ‘ಪಾಗಲ್‌ಪನ್: ನೆಕ್ಸ್ಟ್ ಲೆವೆಲ್’ ಶಜಾನ್ ಅಭಿನಯಿಸಿದ್ದ ಕೊನೆಯ ಸಿನಿಮಾ. ಇದೀಗ 37 ವರ್ಷದ ಶಜಾನ್ ಉದ್ಯಮಿ ಅಶಿಷ್ ಕನಕಿಯಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದು, ಇದೇ ಜೂ. 5ರಂದು ಮುಂಬೈನ ಪ್ರತಿಷ್ಠಿತ ಹೊಟೇಲ್‌ನಲ್ಲಿ ಅದ್ದೂರಿ ವಿವಾಹ ಜರುಗಲಿದೆ. ಕುಟುಂಬದವರು ಹಾಗೂ ಆಪ್ತರನ್ನು ಮಾತ್ರ ಮದುವೆಗೆ ಆಮಂತ್ರಿಸಲಾಗಿದೆ. ಅದೇ ಸ್ಟಾರ್ ಹೋಟೆಲ್‌ನಲ್ಲಿ ಜೂ. 7ರಂದು ಔತಣಕೂಟ ಏರ್ಪಡಿಸಲಾಗಿದೆ. ಶಜಾನ್ ಹಾಗೂ ಆಶಿಷ್ ಬಾಲ್ಯ ಸ್ನೇಹಿತರಾಗಿದ್ದು, ಸ್ನೇಹವು ಕ್ರಮೇಣ ಪ್ರೀತಿಗೆ ತಿರುಗಿದೆ. ಕೆಲ ವರ್ಷಗಳ ಕಾಲ ಒಟ್ಟಿಗೆ ಸುತ್ತಾಡಿದ್ದಾರೆ. ಇದೀಗ ಮನೆಯವರ ಒಪ್ಪಿಗೆ ಪಡೆದಿರುವ ಇವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಜನವರಿಯಲ್ಲಿ ಆಶಿಷ್ ಹಾಗೂ ಶಜಾನ್ ನಿಶ್ಚಿತಾರ್ಥ ಗುಜರಾತಿ ಸಂಪ್ರದಾಯದಂತೆ ನೆರವೇರಿತ್ತು. -ಏಜೆನ್ಸೀಸ್
