ಕಾಜೋಲ್​ಗೆ ಕನ್ನಡದಲ್ಲಿ ನಟಿಸಿಲ್ಲವೆಂಬ ಕೊರಗು

90ರ ದಶಕದಲ್ಲಿ ಬಾಲಿವುಡ್​ನ ಬಹುಬೇಡಿಕೆಯ ನಟಿಯಾಗಿ ಮಿಂಚಿದವರು ಕಾಜೋಲ್. ಹೊಸ ತಲೆಮಾರಿನ ಅನೇಕ ನಟಿಯರಿಗೆ ಅವರೇ ಮಾದರಿ. ಬೆಂಗಳೂರಿನ ಡಿಕೆನ್​ಸನ್ ರಸ್ತೆಯಲ್ಲಿರುವ ಜೋಯಾಲುಕ್ಕಾಸ್ ನೂತನ ಮಳಿಗೆ ಉದ್ಘಾಟಿಸಲು ಆಗಮಿಸಿದ್ದ ಕಾಜೋಲ್ ‘ವಿಜಯವಾಣಿ’ ಜತೆ ಮಾತನಾಡಿದರು. ಅವರು ಹಂಚಿಕೊಂಡ ಕೆಲವು ಇಂಟರೆಸ್ಟಿಂಗ್ ವಿಚಾರಗಳ ಅಕ್ಷರ ರೂಪ ಇಲ್ಲಿದೆ..

# ಸ್ಯಾಂಡಲ್​ವುಡ್​ನಲ್ಲಿ ಇದುವರೆಗೂ ನೀವು ನಟಿಸಲು ಸಾಧ್ಯವಾಗಿಲ್ಲ. ನಿಮಗೆ ಕನ್ನಡದಿಂದ ಅವಕಾಶಗಳು ಬಂದಿಲ್ಲವೇ?

ಹಾಗೇನೂ ಇಲ್ಲ. ನನಗೆ ಕನ್ನಡ ಚಿತ್ರರಂಗದಿಂದ ಅನೇಕ ಬಾರಿ ಅವಕಾಶಗಳು ಬಂದಿದ್ದವು. ಹಲವು ನಿರ್ವಪಕರು ಕನ್ನಡ ಸಿನಿಮಾಗಳಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಆದರೆ, ಭಾಷೆಯ ತೊಡಕಿನಿಂದ ಬಂದ ಅವಕಾಶಗಳನ್ನು ನಿರಾಕರಿಸಿಬಿಟ್ಟೆ. ನಿಜಕ್ಕೂ ಕನ್ನಡ ಒಂದು ಸುಂದರ ಭಾಷೆ. ಅಂಥ ಭಾಷೆಯ ಸಿನಿಮಾಗಳಲ್ಲಿ ನನಗೆ ನಟಿಸಲು ಆಗಲಿಲ್ಲವಲ್ಲ ಎಂಬ ಕೊರಗು ಇದೆ.

# ಹಾಗಾದರೆ, ಮುಂದೆ ಯಾವತ್ತಾದರೂ ನಿಮಗೆ ಕನ್ನಡದಿಂದ ಅವಕಾಶ ಬಂದರೆ ಒಪ್ಪಿಕೊಳ್ಳುತ್ತೀರಾ..?

ಖಂಡಿತ ಅದು ಕಷ್ಟಸಾಧ್ಯ. ಯಾಕೆಂದರೆ, ಈಗ ನಟಿಸಲು ಒಪ್ಪಿಕೊಂಡರೆ ಬಹಳ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ಕಾರಣ, ಭಾಷೆ ಬಗ್ಗೆ ತಿಳಿಯದೆ ಇರುವುದು. ಈ ಹಿಂದೆ ನಾನು ತಮಿಳು ಸಿನಿಮಾದಲ್ಲಿ ನಟಿಸಿದ್ದೆ. ಆಗ ನಾನು ಅನುಭವಿಸಿದ ಕಷ್ಟ ನನಗಿನ್ನೂ ನೆನಪಿದೆ. ಹಾಗಾಗಿ, ಅಷ್ಟೆಲ್ಲ ಹೋರಾಟ ಮಾಡಿ ಸಿನಿಮಾ ಮಾಡಬೇಕು ಎನ್ನುವ ಉತ್ಸಾಹ ಈಗ ನನಗಿಲ್ಲ.

# ಸಿಲಿಕಾನ್ ಸಿಟಿ ಬೆಂಗಳೂರಿನ ಬಗ್ಗೆ ನಿಮ್ಮ ಅನಿಸಿಕೆ?

ಬೆಂಗಳೂರು ನಗರ ಗ್ರೀನ್ ಸಿಟಿ. ನಾನು ತುಂಬ ಇಷ್ಟಪಡುವ ನಗರಗಳಲ್ಲಿ ಈ ಊರು ಕೂಡ ಒಂದು. ನನ್ನ ಅನೇಕ ಸ್ನೇಹಿತರು ಈ ಊರಿನಲ್ಲಿ ಇದ್ದಾರೆ. ಆ ಸಲುವಾಗಿ ನಾನು ಅನೇಕ ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಇಲ್ಲಿನ ಬೀದಿಗಳಲ್ಲಿ ಸುತ್ತಾಡಿದ್ದೇನೆ. ಈ ಊರಿನ ಮೇಲೆ ನನಗೆ ವಿಶೇಷವಾದ ಪ್ರೀತಿಯಿದೆ.

# ಮದುವೆ ಬಳಿಕ ನಟಿಯರಿಗೆ ಅವಕಾಶ ಕಮ್ಮಿ ಎಂಬ ಮಾತಿದೆಯಲ್ಲ?

ಸಿನಿಮಾರಂಗದಲ್ಲಿ ನಟಿಯರು ವಿವಾಹವಾದರೆ ಅವರ ಕಥೆ ಮುಗಿಯಿತು ಎನ್ನುವ ಭಾವನೆ ಇಂದು ನಿನ್ನೆಯದಲ್ಲ. ಅದು ಮೊದಲಿನಿಂದಲೂ ಚಾಲ್ತಿಯಲ್ಲಿದೆ. ನನ್ನ ವೃತ್ತಿಬದುಕಿಗೆ ಪತಿ ಅಜಯ್ ಕಡೆಯಿಂದ ಪ್ರೋತ್ಸಾಹ ಸಿಕ್ಕಿತು. ನಾನು ಮದುವೆಯಾದ ಮೇಲೂ ನಟಿಸಲು ಸಾಧ್ಯವಾಯಿತು.