ಶಕ್ತಿವರ್ಧನೆಗೆ ಬೇಯಿಸಿದ ಶೇಂಗಾ

| ಮಾನಸ, ವೇದ ಆರೋಗ್ಯ ಕೇಂದ್ರ,  ಶಿರಸಿ

ಶೇಂಗಾವನ್ನು ಬೇಯಿಸಿ ತಿನ್ನುವುದು ಅನೇಕ ಕಡೆಗಳಲ್ಲಿ ರೂಢಿಯಲ್ಲಿದೆ. ದಕ್ಷಿಣ ಭಾಗಗಳ ಆಹಾರಪದ್ಧತಿಯಲ್ಲಿ ಶೇಂಗಾವನ್ನು ಬೇಯಿಸಿ ತಿನ್ನುವುದು ಹೆಚ್ಚು. ಅಮೆರಿಕನ್ ಕೆಮಿಕಲ್ ಸೊಸೈಟಿಯ ಸಂಶೋಧಕರು ಜರ್ನಲ್ ಆಫ್ ಅಗ್ರಿಕಲ್ಚರಲ್ ಆಂಡ್ ಫುಡ್ ಕೆಮಿಸ್ಟ್ರಿಯಲ್ಲಿ, ಶೇಂಗಾವನ್ನು ಯಾವ ರೀತಿಯಲ್ಲಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂಬ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಬೇಯಿಸಿದ ಶೇಂಗಾ, ಎಣ್ಣೆಯಲ್ಲಿ ಹುರಿದ ಶೇಂಗಾ, ಒಣಗಿಸಿದ ಶೇಂಗಾ ಹಾಗೂ ಕಚ್ಚಾ ಶೇಂಗಾವನ್ನು ತೆಗೆದುಕೊಂಡು ಅದರಲ್ಲಿರುವ ಪೋಷಕಾಂಶಗಳನ್ನು ಬೇರೆ ಬೇರೆಯಾಗಿ ಅಧ್ಯಯನ ಮಾಡಿದ್ದಾರೆ. ಇದರ ಪ್ರಕಾರ ಬೇಯಿಸಿದ ಶೇಂಗಾವು ಉಳಿದ ವಿಧಾನಗಳಿಗಿಂತ ಸುಮಾರು ನಾಲ್ಕು ಪಟ್ಟು ಅಧಿಕ ಪ್ರಮಾಣದಲ್ಲಿ ಆಂಟಿ-ಆಕ್ಸಿಡೆಂಟ್ ಐಸೋಫ್ಲೇವೊನ್ಸ್ ಹೊಂದಿರುತ್ತದೆ. ಪ್ರತಿನಿತ್ಯ ಈ ಫ್ಲೇವೊನ್ಸ್​ಗಳ ಸೇವನೆಯಿಂದ ಕ್ಯಾನ್ಸರ್, ಮಧುಮೇಹ, ಹೃದಯ ಸಮಸ್ಯೆಗಳು ಕಾಡುವಂತಹ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಅರ್ಧ ಕಪ್ ಬೇಯಿಸಿದ ಶೇಂಗಾ 286 ಕ್ಯಾಲೋರಿಗಳು, 12 ಗ್ರಾಂ ಪ್ರೋಟೀನ್, 8 ಗ್ರಾಂ ನಾರಿನಂಶ, 2 ಗ್ರಾಂ ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಯಾವುದೇ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಇಲ್ಲ. ಆದ್ದರಿಂದ ಶಕ್ತಿಯ ವರ್ಧನೆಗೆ ಇದು ಬಹಳ ಪರಿಣಾಮಕಾರಿ. ಊಟಕ್ಕೆ ಬಹಳ ಸಮಯವಿದೆ, ನಿಶ್ಶಕ್ತಿ ಆಗುತ್ತಿದೆ ಎಂದು ಅನಿಸುತ್ತಿದ್ದಲ್ಲಿ ಬೇಯಿಸಿದ ಶೇಂಗಾವನ್ನು ಸೇವಿಸುವುದು ಉತ್ತಮ ಆಯ್ಕೆ. ಮಿದುಳಿಗೆ, ಮಾಂಸಖಂಡಗಳಿಗೆ ಬೇಯಿಸಿದ ಶೇಂಗಾ ಉತ್ತಮ ಆಹಾರ. ಸಂತೃಪ್ತ ಭಾವನೆಯನ್ನು ಮೂಡಿಸುತ್ತದೆ.