ರಾಹುಲ್​ ‘ರಫೇಲ್​’ ಗೆ ರಕ್ಷಣಾ ಸಚಿವೆಯ ‘ಬೋಫೋರ್ಸ್​’ ತಿರುಗೇಟು

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯವರು ಸಂಸತ್ತಿನಲ್ಲಿ ರಫೇಲ್​ ಡೀಲ್​ಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ, ರಕ್ಷಣಾ ಸಚಿವರ ವಿರುದ್ಧ ನಡೆಸಿದ್ದ ವಾಗ್ದಾಳಿಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಕಟುವಾಗಿ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಈ ಒಪ್ಪಂದವನ್ನು ರದ್ದುಮಾಡಿತು. ಕಾರಣ ಅದಕ್ಕೆ ಈ ಒಪ್ಪಂದ ಮಾಡಿಕೊಳ್ಳುವುದರಿಂದ  ಯಾವುದೇ ಹಣ ಸಿಗುತ್ತಿರಲಿಲ್ಲ. ತನ್ನ ಖಜಾನೆಯನ್ನು ಭದ್ರ ಮಾಡಿಕೊಳ್ಳುವುದಕ್ಕೋಸ್ಕರ ಸಾಮಾಜಿಕ ರಕ್ಷಣೆಯನ್ನು ನಿರ್ಲಕ್ಷಿಸಿತು ಎಂದು ಆರೋಪ ಮಾಡಿದರು.

1980ರಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ನಡೆದ ಬೋಫೋರ್ಸ್​ ಹಗರಣವನ್ನು ಉಲ್ಲೇಖಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್​, ಬೋಫೋರ್ಸ್​ ಒಂದು ಹಗರಣ. ಆದರೆ, ರಫೇಲ್​ ಒಪ್ಪಂದದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ರಾಷ್ಟ್ರದ ಹಿತಾಸಕ್ತಿಯಾಗಿ ರಫೇಲ್​ ಒಪ್ಪಂದದ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಬೋಫೋರ್ಸ್​ ಶಸ್ತ್ರಾಸ್ತ್ರ ಹಗರಣದ ಕಾರಣದಿಂದಲೇ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡಿದೆ. ಆದರೆ, ರಫೇಲ್​ ಮತ್ತೆ ಮೋದಿಯವರೇ ಪ್ರಧಾನಿ ಸ್ಥಾನಕ್ಕೆ ಏರಲು ಸಹಾಯ ಮಾಡಲಿದೆ ಎಂದು ಹೇಳಿದರು.

ರಫೇಲ್​ ತಯಾರಕ ಡಸ್ಸಾಲ್ಟ್​ ಏವಿಯೇಶನ್​ ಕಂಪನಿ ಎಚ್​ಎಎಲ್​(ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​)ನೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್​ ಮೊಸಳೆ ಕಣ್ಣೀರು ಸುರಿಸುತ್ತಿದೆ. ಆದರೆ, ಈ ಪಕ್ಷ ಎಚ್​ಎಎಲ್​ ಅಭಿವೃದ್ಧಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಭಾರತೀಯ ಏರ್​ಫೋರ್ಸ್​ಗೆ ಯುದ್ಧ ವಿಮಾನಗಳ ಅಗತ್ಯವಿದೆ ಎಂದು ತಿಳಿದಿದ್ದರೂ ನೀವು ಒಪ್ಪಂದವನ್ನು ನಿಲ್ಲಿಸಿದ್ದಿರಿ. ಒಪ್ಪಂದದ ಬಗ್ಗೆ ನಿಮಗೆ ಯಾವುದೇ ನಿರ್ಧಾರಕ್ಕೆ ಬರಲು ಆಗಲೇ ಇಲ್ಲ. ಈ ಒಪ್ಪಂದದಿಂದ ನಿಮಗೆ ಯಾವುದೇ ಹಣವೂ ಸಿಗುತ್ತಿರಲಿಲ್ಲ. ರಕ್ಷಣಾ ಒಪ್ಪಂದಕ್ಕೂ, ರಕ್ಷಣಾ ವಿಚಾರವನ್ನು ಮುಂದಿಟ್ಟು ನಡೆಸುವ ವ್ಯವಹಾರಕ್ಕೂ ವ್ಯತ್ಯಾಸವಿದೆ. ನಾವು ರಕ್ಷಣೆಯಲ್ಲಿ ಯಾವುದೇ ವ್ಯವಹಾರ ಮಾಡುತ್ತಿಲ್ಲ. ರಾಷ್ಟ್ರೀಯ ಭದ್ರತೆ ನಮ್ಮ ಆದ್ಯತೆ ಆಗಿದ್ದು ಅದಕ್ಕೆ ತಕ್ಕಂತೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

126 ಇದ್ದ ರಫೇಲ್​ ಜೆಟ್​ಗಳನ್ನು ಬಿಜೆಪಿ ಕೇಂದ್ರ ಸರ್ಕಾರ 36ಕ್ಕೆ ಇಳಿಸಿದೆ ಎಂದು ಕಾಂಗ್ರೆಸ್​ ಆರೋಪ ಮಾಡಿದ್ದು ದೇಶದ ಜನರಲ್ಲಿ ತಪ್ಪುತಿಳಿವಳಿಕೆ ಹುಟ್ಟಿಸಿದೆ. ಕಾಂಗ್ರೆಸ್​ಗೆ 18 ಜೆಟ್​ಗಳನ್ನು ಮಾತ್ರ ಖರೀದಿಸುವ ಸಾಮರ್ಥ್ಯ ಇತ್ತು. ಅದನ್ನು ಎನ್​ಡಿಎ 36ಕ್ಕೆ ಏರಿಸಿದೆ ಎಂದು ನಾವು ಹೇಳುತ್ತೇವೆ ಎಂದರು.