ಬೊಫೋರ್ಸ್ ಅರ್ಜಿ ವಾಪಸ್: ಕೋರ್ಟ್ ಪ್ರಶ್ನೆ ಬಳಿಕ ಸಿಬಿಐ ಕ್ರಮ

ನವದೆಹಲಿ: ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಡೆದಿದ್ದ ಬೊಫೋರ್ಸ್ ಹಗರಣದ ಬಗ್ಗೆ ಮತ್ತಷ್ಟು ತನಿಖೆ ನಡೆಸಲು ಅನುಮತಿ ಕೋರಿ ದೆಹಲಿ ಕೋರ್ಟ್​ಗೆ ಸಲ್ಲಿಸಿದ್ದ ಮನವಿಯನ್ನು ಸಿಬಿಐ ಗುರುವಾರ ಹಿಂಪಡೆದಿದೆ. ಆದರೆ, ಮೇ 23ರ ನಂತರ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಈ ಹಗರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸುವ ಸಾಧ್ಯತೆ ಇದೆ. ಈ ಹಗರಣದ ತನಿಖೆ ಕುರಿತಂತೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ಕಾರಣ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ಸಿಬಿಐ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ನವೀನ್ ಕುಮಾರ್ ಕಶ್ಯಪ್, ಅರ್ಜಿದಾರರಿಗೆ ಅರ್ಜಿ ಹಿಂಪಡೆಯಲು ಎಲ್ಲ ಹಕ್ಕು ಇದೆ ಎಂದು ಹೇಳಿದ್ದಾರೆ.

ಸಿಬಿಐಗೆ ಕೋರ್ಟ್ ಪ್ರಶ್ನೆ: ಬೊಫೋರ್ಸ್ ಹಗರಣದ ಬಗ್ಗೆ ಹೊಸದಾಗಿ ಕೆಲವು ಪುರಾವೆ ದೊರೆತ ಕಾರಣ ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ಸಿಬಿಐ ಕಳೆದ 2018ರ ಫೆ. 1ರಂದು ದೆಹಲಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಹಗರಣದ ತನಿಖೆ ನಡೆಸಲು ಕೋರ್ಟ್ ಅನುಮತಿ ಕೋರಿದ್ದು ಏಕೆ ಎಂದು ಕಳೆದ ವರ್ಷ ಡಿ. 4ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ಪ್ರಶ್ನಿಸಿತ್ತು. ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆ. ಅದಕ್ಕೆ ತನಿಖೆ ನಡೆಸುವ ಅಧಿಕಾರ ಇರುವಾಗ ನ್ಯಾಯಾಲಯದ ಅನುಮತಿ ಕೋರುವ ಪ್ರಮೇಯ ಇರಲಿಲ್ಲ ಎಂದು ಕಳೆದ ಮೇ 8ರ ವಿಚಾರಣೆ ವೇಳೆ ಕೋರ್ಟ್ ಪುನರುಚ್ಚರಿಸಿತ್ತು.

ಮೇಲ್ಮನವಿ ವಜಾ ಮಾಡಿದ್ದ ಸುಪ್ರೀಂ

ಬೊಫೋರ್ಸ್ ಹಗರಣ ಸಂಬಂಧ 2005ರ ಮೇ 31ರಂದು ತೀರ್ಪು ನೀಡಿದ್ದ ದೆಹಲಿ ಹೈಕೋರ್ಟ್, ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಿಬಿಐ 2018ರ ಫೆ. 2ರಂದು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಅದೇ ವರ್ಷ ನ. 2ರಂದು ಸಿಬಿಐ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್, ಮೇಲ್ಮನವಿ ಸಲ್ಲಿಸಲು 90 ದಿನ ಅವಕಾಶ ಇದೆ. ಆದರೆ, 13 ವರ್ಷ ವಿಳಂಬ (4,500 ದಿನ) ಮಾಡಿದ್ದೇಕೆ ಎಂದು ತರಾಟೆಗೆ ತೆಗೆದುಕೊಂಡಿತ್ತು. ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ವಕೀಲ ಅಜಯ್ ಅಗರವಾಲ್ ಬಹು ಹಿಂದೆಯೇ ಮೇಲ್ಮನವಿ ಸಲ್ಲಿಸಿದ್ದಾರೆ. ಅದು ಇತ್ಯರ್ಥಕ್ಕೆ ಬಾಕಿ ಇದೆ. ಸಿಬಿಐ ಇಚ್ಛಿಸಿದರೆ ಅವರಿಗೆ ನೆರವು ನೀಡ ಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

ಸಿಆರ್​ಪಿಸಿ 173(8) ಸೆಕ್ಷನ್ ಅನ್ವಯ ತನಿಖಾ ಸಂಸ್ಥೆ ಯಾವುದೇ ಪ್ರಕರಣ ಕುರಿತು ಹೆಚ್ಚುವರಿ ತನಿಖೆ ನಡೆಸಬಹುದು. ಇದಕ್ಕೆ ಕೋರ್ಟ್ ನಿಂದ ಅನುಮತಿ ಕಡ್ಡಾಯವಲ್ಲ. ಹೀಗಾಗಿ ಬೊಫೋರ್ಸ್ ಹಗರಣ ಕುರಿತ ತನಿಖೆ ಮುಂದುವರಿಯಲಿದೆ.

| ನಿತನ್ ವಕಂಕರ್ ಸಿಬಿಐ ವಕ್ತಾರ

ಅರ್ಜಿ ಸಲ್ಲಿಸಿದ್ದೇಕೆ?

ರಾಜೀವ್ ಗಾಂಧಿ ಸರ್ಕಾರ ಬೊಫೋರ್ಸ್ ಹಗರಣ ತನಿಖೆಯ ದಾರಿತಪ್ಪಿಸಿತ್ತು ಎಂದು ಖಾಸಗಿ ಪತ್ತೇದಾರ ಮೈಕಲ್ ಹರ್ಶ್ಮೆನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದನ್ನು ಆಧರಿಸಿ ತನಿಖೆ ನಡೆಸಬಹುದು ಎಂದು ಅಟಾರ್ನಿ ಜನರಲ್ 2017ರ ಅಕ್ಟೋಬರ್​ನಲ್ಲಿ ಮೌಖಿಕವಾಗಿ ಹೇಳಿದ್ದರು. ಹೀಗಾಗಿ ಸಿಬಿಐ ಅನುಮತಿ ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.

ಏನಿದು ಹಗರಣ?

ಸ್ವೀಡನ್​ನ ಎಬಿ ಬೊಫೋರ್ಸ್ ಕಂಪನಿಯಿಂದ 155 ಎಂಎಂನ 400 ಬೊಫೋರ್ಸ್ ಫಿರಂಗಿ ಖರೀದಿಸಲು 1986ರ ಮಾರ್ಚ್ 24ರಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. -ಠಿ; 1,437 ಕೋಟಿ ಮೊತ್ತ ಈ ಒಪ್ಪಂದ ಕುದುರಿಸಲು -ಠಿ; 64 ಕೋಟಿ ಲಂಚವನ್ನು ಎಬಿ ಬೊಫೋರ್ಸ್ ಕಂಪನಿ ಪಾವತಿಸಿದೆ ಎಂದು ಸ್ವೀಡನ್ ರೆಡಿಯೋ ವರದಿ ಮಾಡಿದ್ದರಿಂದ ಅವ್ಯವಹಾರ ಬಯಲಿಗೆ ಬಂತು. 1990ರ ಜ. 22ರಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಎಬಿ ಬೊಫೋರ್ಸ್ ಸಂಸ್ಥೆ ಅಧ್ಯಕ್ಷ ಮಾರ್ಟಿನ್ ಅಡ್ಬೋ, ಮಧ್ಯವರ್ತಿಗಳಾದ ಒಟ್ಟಾವಿಯೋ ಕ್ವಟ್ರೋಚಿ, ವಿನ್ ಛಡ್ಡಾ, ಭಾರತದ ರಕ್ಷಣಾ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್ ಮತ್ತು ಸ್ವೀಡನ್ ಕೆಲವು ಅಧಿಕಾರಿಗಳನ್ನು ಆರೋಪಿಗಳೆಂದು ಗುರುತಿಸಿತ್ತು. 1999ರ ಅಕ್ಟೋಬರ್ 22ರಂದು ಸಿಬಿಐ ಮೊದಲ ಆರೋಪಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಸಿತು. 2000 ಇಸ್ವಿ ಅ. 9ರಂದು ಸಲ್ಲಿಸಿದ ಎರಡನೇ ಆರೋಪಪಟ್ಟಿಯಲ್ಲಿ ಎಸ್.ಪಿ. ಹಿಂದುಜಾ, ಜಿ.ಪಿ. ಹಿಂದುಜಾ ಮತ್ತು ಪಿ.ಪಿ. ಹಿಂದುಜಾ ಸೋದರರ ಹೆಸರನ್ನು ಸಿಬಿಐ ಉಲ್ಲೇಖಿಸಿತ್ತು. ಒಟ್ಟಾವಿಯೋ ಕ್ವಟ್ರೋಚಿಯನ್ನು 2011ರ ಮಾರ್ಚ್ 4ರಂದು ವಿಶೇಷ ನ್ಯಾಯಾಲಯ ಆರೋಪ ಮುಕ್ತಗೊಳಿಸಿತು. ಕ್ಟಟ್ರೋಚಿ ವಿರುದ್ಧದ ಪ್ರಕರಣಕ್ಕೆ ಈಗಾಗಲೇ -ಠಿ; 250 ಕೋಟಿ ವ್ಯಯ ಮಾಡಲಾಗಿದೆ. ತೆರಿಗೆದಾರರ ಹಣವನ್ನು ಹೀಗೆ ಪೋಲು ಮಾಡಲಾಗದು ಎಂದು ಕೋರ್ಟ್ ಹೇಳಿತ್ತು. ರಾಜೀವ್ ಗಾಂಧಿ ಕುಟುಂಬದ ಜತೆ ಆಪ್ತ ನಂಟು ಹೊಂದಿದ್ದರು ಎನ್ನಲಾದ ಕ್ವಟ್ರೋಚಿ 1993ರ ಜುಲೈ 29ರಂದು ಭಾರತ ಬಿಟ್ಟು ಹೋಗಿದ್ದ. 2013ರಲ್ಲಿ ಆತ ಮೃತಪಟ್ಟಿದ್ದ. ಆರೋಪಿಗಳಾದ ಮಾರ್ಟಿನ್ ಅಡ್ಬೋ, ಭಟ್ನಾಗರ್ ಮತ್ತು ಛಡ್ಡಾ ಕೂಡ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *