ರಕ್ಷಣೆಯಲ್ಲೂ ‘ಕೈ’ ವ್ಯವಹಾರ

ನವದೆಹಲಿ: ಎನ್​ಡಿಎ ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರ ಮಾಡಿದ್ದರೆ (ಡೀಲ್ ಇನ್ ಡಿಫೆನ್ಸ್) ಕಾಂಗ್ರೆಸ್ ಸರ್ಕಾರಗಳು ರಕ್ಷಣಾ ಕ್ಷೇತ್ರದಲ್ಲಿ ‘ವ್ಯವಹಾರ’ (ಡಿಫೆನ್ಸ್ ಡೀಲ್) ನಡೆಸಿವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಕುರಿತು ಜಂಟಿ ಸದನ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸಬೇಕು ಎಂಬ ಕಾಂಗ್ರೆಸ್ ಆಗ್ರಹ ಕುರಿತು ಲೋಕಸಭೆಯಲ್ಲಿ ಶುಕ್ರವಾರ ಸುದೀರ್ಘವಾದ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಸರ್ಕಾರಗಳಿಗೆ ರಕ್ಷಣಾ ವಲಯದಲ್ಲಿ ಡೀಲ್ ಮಾಡಿ ಅಭ್ಯಾಸವಾಗಿದೆ. ಆದರೆ ಬಿಜೆಪಿ ಅವಧಿಯಲ್ಲಿ ಪಾರದರ್ಶಕವಾಗಿ ರಕ್ಷಣಾ ವ್ಯವಹಾರ ನಡೆದಿದೆ. 10 ವರ್ಷಗಳ ಕಾಲ ರಫೇಲ್ ಬಗ್ಗೆ ಯುಪಿಎ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆದರೆ ಎನ್​ಡಿಎ ಸರ್ಕಾರ ಕೇವಲ 14 ತಿಂಗಳಲ್ಲಿ ಈ ಒಪ್ಪಂದ ಅಂತಿಮಗೊಳಿಸಿತು. ಆದಾಗ್ಯೂ ಕಾಂಗ್ರೆಸ್ ನಾಯ ಕರು ದೇಶಾದ್ಯಂತ ಸುಳ್ಳಿನ ಪ್ರಚಾರ ಮಾಡುತ್ತಿ ದ್ದಾರೆ. ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಸತ್ಯ ಕೇಳುವ ಸಂಯಮ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಸಚಿವೆ ಕಿಡಿಕಾರಿದರು.

ಎಎ ವರ್ಸಸ್ ಆರ್​ವಿ : ಕಾಂಗ್ರೆಸ್ ನಾಯಕರು ಎಎ(ಅನಿಲ್ ಅಂಬಾನಿ) ಹೆಸರಿನ ಮೂಲಕ ಆಧಾರ ರಹಿತ ಆರೋಪ ಮಾಡಿದರೆ, ನಾವು ಆಧಾರಗಳ ಮೂಲಕ ಆರ್​ವಿ(ರಾಬರ್ಟ್ ವಾದ್ರಾ) ಹಾಗೂ ಕ್ಯೂ(ಕ್ವಟ್ರೋಚಿ) ವಿರುದ್ಧ ಆರೋಪ ಮಾಡುತ್ತೇವೆ. ಅನವಶ್ಯಕವಾಗಿ ರಫೇಲ್ ಖರೀದಿ ಪ್ರಕ್ರಿಯೆಯನ್ನು ವಿವಾದಗೊಳಿಸಬೇಡಿ. ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ ರಕ್ಷಣಾ ಇಲಾಖೆಯಲ್ಲಿನ ಮಧ್ಯವರ್ತಿಗಳನ್ನು ಮನೆಗೆ ಕಳುಹಿಸಿದೆ. ಇದನ್ನು ಒಪ್ಪಿಕೊಳ್ಳಲಾಗದ ಕಾಂಗ್ರೆಸ್ ವೃಥಾರೋಪದಲ್ಲಿ ಮುಳುಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಮತ್ತೆ ಕಣ್ಣು ಹೊಡೆದ ರಾಹುಲ್!

ಕಳೆದ ಬಾರಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಸಂದರ್ಭದಲ್ಲಿ ಪ್ರಧಾನಿಗೆ ಅಪು್ಪಗೆ ನೀಡಿ ಬಂದು ಆಸನದಲ್ಲಿ ಕುಳಿತ ಕೂಡಲೇ ರಾಹುಲ್ ತಮ್ಮ ಪಕ್ಕದಲ್ಲಿದ್ದ ಸಂಸದರತ್ತ ನೋಡಿ ಕಣ್ಣು ಮಿಟುಕಿಸಿದ್ದರು. ಶುಕ್ರವಾರ ಕೂಡ ಉಪಸಭಾಧ್ಯಕ್ಷ ತಂಬಿದೊರೈ ಮಾತನಾಡುತ್ತಿದ್ದಾಗ ಪಕ್ಕದಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾಗೆ ಕಣ್ಣು ಹೊಡೆದರು.

ರಫೇಲ್ ದರ ಸಮರ

ರಫೇಲ್ ಯುದ್ಧ ವಿಮಾನದ ಬೆಲೆ 526 ಕೋಟಿ ರೂ. ಆಗಿತ್ತು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಅದು 2007ರ ಟೆಂಡರ್​ನಲ್ಲಿ ನಮೂದಿಸಿದ್ದ ಬೆಲೆಯಾಗಿತ್ತು. ಅದಾದ ಬಳಿಕ ಯುಪಿಎ ಸರ್ಕಾರ 2012ರಲ್ಲಿ ಟೆಂಡರ್ ಅಂತಿಮಗೊಳಿಸಿದಾಗ ಯುದ್ಧ ವಿಮಾನದ ಮೂಲ ಬೆಲೆ 737 ಕೋಟಿ ರೂ. ಎಂದು ನಿರ್ಧರಿಸಲಾಗಿತ್ತು. ಈ ವಿಮಾನದಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿರಲಿಲ್ಲ. ಆದರೆ ಎನ್​ಡಿಎ ಅವಧಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದಾಗ ಬೆಲೆಯನ್ನು ಶೇ.9 ಕಡಿಮೆಗೊಳಿಸಿ, 670 ಕೋಟಿ ರೂ.ಗೆ ನಿಗದಿಪಡಿಸಲಾಯಿತು. ಶಸ್ತ್ರಾಸ್ತ್ರಗಳನ್ನು ಹೊಂದಿರುವ ಯುದ್ಧ ವಿಮಾನದ ಬೆಲೆ ಕೂಡ ಕಡಿಮೆಯಾಗಿದೆ. ಆದರೆ ಈ ವಿಚಾರಗಳನ್ನು ಕಾಂಗ್ರೆಸ್ ಮುಚ್ಚಿಡುತ್ತಿದೆ ಎಂದು ನಿರ್ಮಲಾ ಹೇಳಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ಸಿಬಿಐ ತನಿಖೆಗೆ ನೀಡುವಂತಿಲ್ಲ ಎಂದಷ್ಟೇ ಹೇಳಿದೆ. ಜಂಟಿ ಸದನ ಸಮಿತಿಯ(ಜೆಪಿಸಿ)ತನಿಖೆ ನಡೆಸಲು ಬಿಜೆಪಿಯವರಿಗೇಕೆ ಭಯ?

| ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಸಚಿವೆ ಸ್ಪಷ್ಟನೆಗಳು

  • ಹಿಂದಿನ ಎಲ್ಲ ತುರ್ತು ಸಂದರ್ಭದಲ್ಲಿ 2 ಸ್ಕ್ವಾಡ್ರನ್(36) ಯುದ್ಧ ವಿಮಾನಗಳನ್ನು ಖರೀದಿಸಿರುವ ಸಂಪ್ರದಾಯವಿದೆ.
  • ರಾಹುಲ್ ಗಾಂಧಿ ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದು, ಈ ಹಿಂದೆಯೂ ಎಚ್​ಎಎಲ್ ಜತೆ ಒಪ್ಪಂದವಾ ಗಿರಲಿಲ್ಲ.
  • ಯುಪಿಎ ಅವಧಿಯಲ್ಲಿ 18 ಯುದ್ಧ ವಿಮಾನಗಳನ್ನು ಫ್ಲೈ-ಅವೇ(ಯುದ್ಧ ಸನ್ನದ್ಧ) ಸ್ಥಿತಿಯಲ್ಲಿ ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ ಎನ್​ಡಿಎ ಅವಧಿಯಲ್ಲಿ ಅದು 36ಕ್ಕೆ ಏರಿಕೆಯಾಗಿದೆ.
  • ಉಳಿದ ವಿಮಾನಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಭಾರತದಲ್ಲೇ ಉತ್ಪಾದನೆಯಾಗಲಿದೆ.
  • ಎಲ್ಲ ವಿಮಾನಗಳು ಫ್ಲೈ-ಅವೇ ಸ್ಥಿತಿಯಲ್ಲಿ ಭಾರತಕ್ಕೆ ಬರುವಾಗ ಎಚ್​ಎಎಲ್ ಅಪ್ರಸ್ತುತವಾಗುತ್ತದೆ. ಅನವಶ್ಯಕವಾಗಿ ವಿವಾದಕ್ಕೋಸ್ಕರ ಈ ವಿಚಾರ ಎಳೆದು ತರಲಾಗುತ್ತಿದೆ.
  • ಯುಪಿಎ ಅವಧಿಯಲ್ಲಿನ ಟೆಂಡರ್​ನಲ್ಲಿ ಹೇಳಿರುವ ಅವಧಿಗಿಂತ 6 ತಿಂಗಳು ಮೊದಲು 18 ಯುದ್ಧ ವಿಮಾನಗಳ ಬದಲಿಗೆ 36 ಯುದ್ಧ ವಿಮಾನಗಳು ಭಾರತಕ್ಕೆ ಸಿಗಲಿವೆ. ಮೊದಲ ವಿಮಾನವು ಸೆಪ್ಟೆಂಬರ್ 2019ರಲ್ಲಿ ಹಾಗೂ 36ನೇ ವಿಮಾನವು 2022ರಲ್ಲಿ ದೊರೆಯಲಿದೆ.
  • ಯುಪಿಎ ಅವಧಿಯಲ್ಲಿ 53 ಗುತ್ತಿಗೆಗಳನ್ನು ಎಚ್​ಎಎಲ್​ವ್ಯಾಪ್ತಿ ಯಿಂದ ಹೊರಗಿಡಲಾಗಿತ್ತು. ಆದರೆ ಎನ್​ಡಿಎ ಸರ್ಕಾರದ ಅವಧಿಯಲ್ಲಿ 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಟೆಂಡರ್ ನೀಡಲಾಗಿದೆ.
  • ಎಚ್​ಎಎಲ್ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರು ಅಗಸ್ತಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದ್ದೇಕೆ? ಆಗ ಏಕೆಎಚ್​ಎಎಲ್ ನೆನಪಾಗಲಿಲ್ಲ.