ದೇಹದಾನದಿಂದ ವೈದ್ಯಕೀಯ ಕ್ಷೇತ್ರಕ್ಕೆ ಅನುಕೂಲ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ದೇಹ ದಾನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ ಎಂದು ತೆಲಂಗಾಣದ ನೆರಡಗುಂಬದ ಸಿದ್ಧಲಿಂಗೇಶ್ವರ ಮಹಾಸ್ವಾಮೀಜಿ ತಿಳಿಸಿದರು.
ಭಾನುವಾರ ಸಂಜೆ ನಗರದ ಎನ್ವಿಎಂ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ನಿಂದ ನಡೆದ ಜನಜಾಗೃತಿ ಕ್ರಾಂತಿಗೀತೆಗಳ ಗಾಯನ ಮತ್ತು ದೇಹ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ವೈಜ್ಞಾನಿಕ ಯುಗದಲ್ಲಿ ದೇಹ ದಾನದ ಬಗ್ಗೆ ಜನರಲ್ಲಿ ಇನ್ನೂ ಹಲವಾರು ಸಂಶಯಗಳಿವೆ. ಅದರ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ದೇಹ ದಾನ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಶಿವಾನಂದ ಹೂಗಾರ ಮಾತನಾಡಿ, ನಾವು ದೇಹ ದಾನ ಮಾಡುವ ಮೂಲಕ ನಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆಯಬೇಕಿದೆ. ರಾಜ್ಯದಲ್ಲಿ ಜಾಗೃತಿ ಸಮಿತಿ ಅಸ್ತಿತ್ವಕ್ಕೆ ಬರುವ ಮುನ್ನವೇ ಗಡಿ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ಘಟಕದವರು ಮಹತ್ವದ ದೇಹ ದಾನದ ಬಗ್ಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಗುರುಮಿಠಕಲ್ ಖಾಸಾ ಮಠದ ಪೀಠಾಧಿಪತಿ ಶ್ರೀಶಾಂತವೀರ ಮಹಾಸ್ವಾಮೀಜಿ ಮಾತನಾಡಿ, ಈ ಭೂಮಿ ಮೇಲೆ ಮನುಷ್ಯನಿಗೆ ಉನ್ನತ ಸ್ಥಾನವಿದೆ. ನಾವೆಲ್ಲರೂ ಶರಣರ ಮಾನವೀಯ ಮೌಲ್ಯಗಳು ಹಾಗೂ ದಾಸೋಹ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತಾ ಸದೃಢ ಸಮಾಜದ ನಿರ್ಮಾಣದತ್ತ ದೃಷ್ಠಿ ಹಾಗೂ ಕಾಯಕ ಹರಿಸುವುದು ಸೂಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದೇಹ ದಾನಿಗಳಾದ ಸಿದ್ರಾಮರೆಡ್ಡಿ ಯಲಸತ್ತಿ, ಅರುಣಕುಮಾರ ಮಾಸನ್, ತಿಮ್ಮಪ್ಪ ಪೊಲೀಸ್ ಪಾಟೀಲ್ ಮಾಚನೂರುಗೆ ಗೌರವಿಸಲಾಯಿತು. ವೇದಿಕೆ ಮೇಲೆ ಪರಿಷತ್ನ ತಾಲೂಕಾಧ್ಯಕ್ಷ ಗುಂಡಪ್ಪ ಕಲಬುರಗಿ, ಜವಾಹರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಸಿ.ಕಾಡ್ಲೂರ್, ಜಿಲ್ಲಾ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜಪ್ಪ ಜೈನ್, ಜಿಲ್ಲಾ ಖಜಾನೆ ಅಧಿಕಾರಿ ಶೇಖ್ ಮಹಿಬೂಬಿ, ನಿವೃತ್ತ ಶಿಕ್ಷಕ ವೆಂಕಪ್ಪ ಅಲೆಮನಿ, ಕುಪೇಂದ್ರ ವಠಾರ, ಸಾಹಿತಿ ಶೋಭಾ ಸಾಲುಮಂಟಪಿ ಇದ್ದರು.
ಕಾರ್ಯಕ್ರಮದಲ್ಲಿ ಗಂಗಾವತಿಯ ಶರಣ ಕಲಾ ಬಳಗದ ಕ್ರಾಂತಿಕಾರಿ ಗೀತೆಗಳು ಸಭಿಕರನ್ನು ಆಕರ್ಷಿ ಸಿತು.ಸಾಹಿತಿ ವಿಶ್ವನಾಥರೆಡ್ಡಿ ಗೊಂದಡಗಿ ಸ್ವಾಗತ ಗೀತೆ ಹಾಡಿದರು. ಡಾ. ಭೀಮರಾಯ ಲಿಂಗೇರಿ ಸ್ವಾಗತಿಸಿದರು. ಡಾ.ಮರೆಪ್ಪ ವಡಿಗೇರಿ ನಿರೂಪಿಸಿ ವಂದಿಸಿದರು.