ಯುವರತ್ನದಲ್ಲಿ ಲೇಡಿ ಬಾಡಿ ಬಿಲ್ಡರ್ ಮಮತಾ

ಬೆಂಗಳೂರು: ‘ಪವರ್ ಸ್ಟಾರ್’ ಪುನೀತ್​ರಾಜ್​ಕುಮಾರ್ ನಟಿಸುತ್ತಿರುವ ‘ಯುವರತ್ನ’ ಸಿನಿಮಾ ಹಲವು ಕಾರಣಗಳಿಂದಾಗಿ ಸದ್ದು ಮಾಡುತ್ತಿದೆ. ‘ರಾಜಕುಮಾರ’ ಚಿತ್ರದ ಬಳಿಕ ಪುನೀತ್ ಜತೆ ನಿರ್ದೇಶಕ ಸಂತೋಷ್ ಆನಂದ್​ರಾಮ್ ಕೈ ಜೋಡಿಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬಹು ವರ್ಷಗಳ ಬಳಿಕ ಕಾಲೇಜು ವಿದ್ಯಾರ್ಥಿಯಾಗಿ ‘ಪವರ್ ಸ್ಟಾರ್’ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಬಳಗಕ್ಕೆ ಹೊಸ ಪ್ರತಿಭೆ ಎಂಟ್ರಿ ನೀಡಿದೆ. ಹಾಗಂತ ಅವರೇನೂ ಸಿನಿಮಾ ಕ್ಷೇತ್ರದವರಲ್ಲ. ಬದಲಿಗೆ ಫ್ರೊಫೆಷನಲ್ ಬಾಡಿ ಬಿಲ್ಡರ್! ಹೌದು ಕರ್ನಾಟಕದ ಮೊದಲ ಲೇಡಿ ಬಾಡಿ ಬಿಲ್ಡರ್ ಮಮತಾ ಸನತ್​ಕುಮಾರ್ ‘ಯುವರತ್ನ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಚಂದನವನಕ್ಕೆ ಅವರು ಕಾಲಿಟ್ಟಿದ್ದಾರೆ. 2017ರಲ್ಲಿ ಒತ್ತಡದಿಂದ ಆಚೆ ಬರುವ ಉದ್ದೇಶಕ್ಕೆ ಮಮತಾ ಜಿಮ್ೆ ಸೇರ್ಪಡೆಗೊಂಡಿದ್ದರು. ನಂತರದ ದಿನಗಳಲ್ಲಿ ವೃತ್ತಿಪರ ದೇಹದಾರ್ಢ್ಯ ಪಟುವಿನಂತೆ ದೇಹವನ್ನು ಹುರಿಯಾಗಿಸಿಕೊಂಡರು. ಸೌತ್ ಇಂಡಿಯನ್ ಚಾಂಪಿಯನ್​ಶಿಪ್​ನಲ್ಲಿ ಪಾಲ್ಗೊಂಡು ಬಂಗಾರದ ಪದಕ ಪಡೆದು ಈಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತಯಾರಾಗುತ್ತಿದ್ದಾರೆ. ಅದರ ನಡುವೆಯೇ ಪುನೀತ್ ಜತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿರುವ ‘ಯುವರತ್ನ’ ಚಿತ್ರತಂಡ ಸದ್ಯ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಅಲ್ಲಿನ ಕಾಲೇಜ್​ವೊಂದರಲ್ಲಿ ಕೆಲ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದು, ಮಮತಾ ಸಹ ಪಾಲ್ಗೊಂಡಿದ್ದಾರೆ. ಆದರೆ, ಚಿತ್ರದಲ್ಲಿ ಅವರ ಪಾತ್ರ ಎಂಥದ್ದು? ಸಿನಿಮಾದಲ್ಲಿ ಎಷ್ಟು ಭಾಗ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Leave a Reply

Your email address will not be published. Required fields are marked *