ಉಗ್ರರ ಮಾರಣಹೋಮ ಒಪ್ಪಿಕೊಂಡ ಪಾಕ್ ಸೇನೆ

ನವದೆಹಲಿ: ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್​ನ ಪರಿಣಾಮದ ಕುರಿತ ಅನುಮಾನಗಳಿಗೆ ಕೊನೆಗೂ ಪಾಕಿಸ್ತಾನವೇ ತೆರೆಯೆಳೆದಿದೆ. ಭಾರತದ ವೈಮಾನಿಕ ದಾಳಿಯಲ್ಲಿ 200ಕ್ಕೂ ಅಧಿಕ ಜೈಷ್-ಎ-ಮೊಹಮದ್ ಉಗ್ರರು ಹತರಾಗಿದ್ದು ನಿಜ ಎಂದು ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೇ ಒಪ್ಪಿಕೊಂಡಿದ್ದಾರೆ. ಇದು ಜಿಹಾದ್​ಗಾಗಿ ಮಾಡಿರುವ ತ್ಯಾಗ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಉಪಗ್ರಹ ಚಿತ್ರ ಸಾಕ್ಷ್ಯ: ಇಂಗ್ಲಿಷ್ ಮಾಧ್ಯಮವೊಂದು ಪ್ರಕಟಿಸಿರುವ ಗೂಗಲ್ ಅರ್ಥ್ ಚಿತ್ರದ ಪ್ರಕಾರ ಜೈಷ್ ಉಗ್ರ ತಾಣ ನಾಶವಾಗಿರು ವುದು ಸಾಬೀ ತಾಗಿದೆ. ಉಗ್ರರು ನೆಲೆಸಿದ್ದ ವಸತಿ ನಿಲಯ ಸಂಪೂರ್ಣ ವಾಗಿ ಧ್ವಂಸ ಆಗಿರುವುದು ಚಿತ್ರ ದಲ್ಲಿ ಗೋಚರಿಸಿದೆ. ಇದಲ್ಲದೆ ಅತಿಥಿಗೃಹದ ಮೇಲ್ಛಾವಣಿ ಮೇಲೂ ಬಾಂಬ್ ಬಿದ್ದಿರುವ ಗುರುತುಗಳಿವೆ. ಪಾಕಿಸ್ತಾನದ ರೈಲ್ವೆ ಸಚಿವ ಹಾಗೂ ಜೈಷ್ ಸಂಘಟನೆಯವರು ಕೂಡ ಮದರಸಾ ನಾಶವಾಗಿರುವುದನ್ನು ಒಪ್ಪಿಕೊಂಡಿದ್ದರು. ಇದಲ್ಲದೆ ಅಮೆರಿಕದ ವಿಶ್ಲೇಷಕರೊಬ್ಬರು ಸಂಗ್ರಹಿಸಿದ ಮಾಹಿತಿ ಪ್ರಕಾರ ಭಾರತದ ಬಾಲಾಕೋಟ್ ದಾಳಿ ಬಳಿಕ ಉಗ್ರರ ಶವಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

ಫೆ.14ರಂದು ಜೈಷ್ ಉಗ್ರರು ನಡೆಸಿದ್ದ ಪುಲ್ವಾಮಾ ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಭಾರತ ಫೆ.26ರಂದು ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಜೈಷ್ ತರಬೇತಿ ಕೇಂದ್ರದ ಮೇಲಿನ ದಾಳಿಯಿಂದ 250ಕ್ಕೂ ಅಧಿಕ ಉಗ್ರರು ಸತ್ತಿದ್ದಾರೆನ್ನಲಾಗಿತ್ತು. ಆದರೆ ಪಾಕಿಸ್ತಾನ ಸರ್ಕಾರ ಉಗ್ರರ ಹತ್ಯೆ ನಿರಾಕರಿಸಿದ್ದರೆ, ಭಾರತದ ಪ್ರತಿಪಕ್ಷಗಳು ಸಾಕ್ಷ್ಯ ಕೇಳಿದ್ದವು.

ಸೇನೆ ಬಣ್ಣ ಬಯಲು

ಸಾಮಾಜಿಕ ಜಾಲತಾಣದಲ್ಲಿರುವ 2 ನಿಮಿಷ 20 ಸೆಕೆಂಡಿನ ವಿಡಿಯೋದಲ್ಲಿ ಪಾಕಿಸ್ತಾನದ ನೈಜ ಬಣ್ಣ ಬಯಲಾಗಿದೆ. ಸರ್ಜಿಕಲ್ ಸ್ಟ್ರೈಕ್​ನಲ್ಲಿ ಹತರಾದ ಉಗ್ರರ ಅಂತಿಮ ಸಂಸ್ಕಾರದಲ್ಲಿ ಯೋಧರು ಕೂಡ ಭಾಗಿಯಾಗಿರುವುದು ಬಹಿರಂಗವಾಗಿದೆ. ಈ ಮೂಲಕ ಉಗ್ರರಿಗೆ ಪಾಕ್ ಸೇನೆಯ ಬೆಂಬಲ ಖಾತ್ರಿಯಾಗಿದೆ. ಆದರೆ ಈ ವಿಡಿಯೋ ಕುರಿತು ಭಾರತ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಪಾಕಿಸ್ತಾನ ಉದ್ಧಟತನ

ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನ ಮಂಗಳವಾರ ತಡರಾತ್ರಿ ಮತ್ತೆ ಉದ್ಧಟತನ ಪ್ರದರ್ಶಿಸಿದೆ. ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಎರಡು ಯುದ್ಧ ವಿಮಾನಗಳು ಕೆಲಕಾಲ ಹಾರಾಟ ನಡೆಸಿದ್ದರಿಂದಾಗಿ ಆತಂಕದ ವಾತಾವರಣ ನಿರ್ವಣವಾಗಿತ್ತು. ಆದರೆ ಭಾರತದ ವಾಯುಸೇನೆ ತೀವ್ರ ಕಟ್ಟೆಚ್ಚರದಲ್ಲಿರುವ ಹಿನ್ನೆಲೆಯಲ್ಲಿ ಗಡಿ ದಾಟುವ ಸಾಹಸಕ್ಕೆ ಪಾಕಿಸ್ತಾನ ಮುಂದಾಗಿಲ್ಲ. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನವು ಎಲ್ಲ ಎಫ್-16 ಯುದ್ಧ ವಿಮಾನಗಳನ್ನು ಸಿದ್ಧವಾಗಿಟ್ಟಿರುವ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಭಾರತೀಯ ವಾಯುಸೇನೆ ಹೈ ಅಲರ್ಟ್ ಘೋಷಿಸಿದೆ.