ದೋಣಿ ದುರಂತ: ಒಂದೇ ಕುಟುಂಬದ 7 ಜನರ ಸಾಮೂಹಿಕ ಅಂತ್ಯಕ್ರಿಯೆ

ಹಾವೇರಿ: ಕಾರವಾರದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಮುಗಿಸಿ ಸೋಮವಾರ ವಾಪಸಾಗುತ್ತಿದ್ದ ದೋಣಿ ಮುಳುಗಿ ಮೃತಪಟ್ಟಿದ್ದ ಒಂದೇ ಕುಟುಂಬದ ಏಳು ಜನರ ಅಂತ್ಯ ಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾ. ಹೊಸೂರು ಗ್ರಾಮದ ಒಂದೇ ಕುಟುಂಬದ ಪರಶುರಾಮ ಬಸವಣ್ಣೆಪ್ಪ ಬೆಳವಲಕೊಪ್ಪ (38), ಭಾರತಿ(28),ಸಂಜೀವಿನಿ (14), ಸೌಜನ್ಯ(13), ನಿರ್ಮಲಾ(24),ಕಿರಣ(5) ಮತ್ತು ಅರುಣ (2) ರ ಮೃತದೇಹಗಳು ಪತ್ತೆಯಾಗಿದ್ದು, ಸಂದೀಪ ಪರಶುರಾಮ ಬೆಳವಲಕೊಪ್ಪ(12) ಮತ್ತು ಕೀರ್ತಿ ಸೋಮಪ್ಪ ಬೆಳವಲಕೊಪ್ಪ(6) ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ.

ದುರಂತದಲ್ಲಿ ಮೃತಪಟ್ಟ ಈ ಕುಟುಂಬದವರ ಪೈಕಿ 7 ಜನರ ಮೃತ ದೇಹಗಳನ್ನು ಸ್ವಗ್ರಾಮಕ್ಕೆ ತರಲಾಗಿದ್ದು, ತಹಸೀಲ್ದಾರ್​​ ಚಂದ್ರಶೇಖರ್​​ ನೇತೃತ್ವದಲ್ಲಿ 7 ಮೃತದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಸೋಮಪ್ಪ ಬೆಳವಲಕೊಪ್ಪ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. (ದಿಗ್ವಿಜಯ ನ್ಯೂಸ್)