ಬರಲಿದೆ ಬೋಟ್ ಟ್ರ್ಯಾಕರ್ ಆ್ಯಪ್

 ಪ್ರಕಾಶ್ ಮಂಜೇಶ್ವರ ಮಂಗಳೂರು

ಯಾವುದೇ ತುರ್ತು ಸಂದರ್ಭ ಕಡಲಲ್ಲಿ ಇರುವ ಕರಾವಳಿಯ ಬೋಟ್‌ಗಳೆಷ್ಟು? ಅದರಲ್ಲಿ ಇರುವ ಮೀನುಗಾರರು ಯಾರು? ಮತ್ತು ಅವರ ಸುರಕ್ಷತೆ ಕುರಿತು ನಿಖರ ಮಾಹಿತಿ ಜಿಲ್ಲಾಡಳಿತ ಪಡೆಯಲು ಅನುಕೂಲವಾಗುವಂತೆ ಹೊಸ ಆ್ಯಪ್ ಸಿದ್ಧಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರ ಪರಿಕಲ್ಪನೆಯ ಈ ಆ್ಯಪ್ ಅನ್ನು ಮೈಸೂರಿನ ವಿಝ್‌ಲೈಟ್ ಇನ್ನೋವೇಶನ್ ಸೆಂಟರ್ ರಚಿಸಿದ್ದು, ಪೈಲಟ್ ಪ್ರಾಜೆಕ್ಟ್ ಆಗಿ ಮುಂದಿನ ವಾರ ಮಂಗಳೂರಿನ ಕರಾವಳಿಯ ಐದು ಬೋಟ್‌ಗಳಲ್ಲಿ ಜಾರಿಗೊಳಿಸಲು ತಯಾರಿ ನಡೆದಿದೆ.
ಪ್ರಥಮ ಹಂತದಲ್ಲಿ ಮಂಗಳೂರು ಕರಾವಳಿಯಲ್ಲಿ ಈ ಆ್ಯಪ್ ಬಳಸಲು ಉದ್ದೇಶಿಸಲಾಗಿದ್ದು, ಮುಂದಿನ ಹಂತದಲ್ಲಿ ಕರ್ನಾಟಕ ಕರಾವಳಿಯ ಇತರ ಜಿಲ್ಲೆಗಳಲ್ಲಿ ಕೂಡ ಉಪಯೋಗಿಸುವ ಕುರಿತು ಚರ್ಚೆ ನಡೆಯುತ್ತಿದೆ.

ಯೋಜನೆ ಉದ್ದೇಶ
ಪ್ರಸ್ತುತ ಕರಾವಳಿಯ ಯಾವುದೇ ಬೋಟ್‌ಗಳಲ್ಲಿ ಎಷ್ಟು ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳುತ್ತಾರೆ ಎನ್ನುವ ಬಗ್ಗೆ ಎಲ್ಲಿಯೂ ನಿಖರ ದಾಖಲಾತಿ ಇರುವುದಿಲ್ಲ (ಬೋಟ್ ಮಾಲೀಕರಲ್ಲಿ ಕೂಡ). ಚಂಡಮಾರುತದಂತಹ ಯಾವುದೇ ಪ್ರಾಕೃತಿಕ ವಿಕೋಪ ಸಂದರ್ಭ ಅಗತ್ಯ ಮುಂಜಾಗರೂಕತಾ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತದಲ್ಲಿ ಸಮುದ್ರದಲ್ಲಿ ಇರುವ ಕರಾವಳಿಯ ಬೋಟ್‌ಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಈ ಕೊರತೆ ಮತ್ತು ಕೆಲ ತಿಂಗಳ ಹಿಂದೆ ಉಡುಪಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಿಗೂಢ ರೀತಿಯಲ್ಲಿ ಏಳು ಮೀನುಗಾರರು ಕಣ್ಮರೆಯಾದ ಪ್ರಕರಣ ಹೊಸ ಆ್ಯಪ್ ರಚನೆಗೆ ಪ್ರೇರಣೆ.

ಕಾರ್ಯನಿರ್ವಹಣೆ
ಹೊಸ ಆ್ಯಪ್‌ಅನ್ನು ಎಲ್ಲ ಬೋಟ್ ಮಾಲೀಕರು ಡೌನ್‌ಲೋಡ್ ಮಾಡಿಟ್ಟುಕೊಳ್ಳುತ್ತಾರೆ. ಬೋಟ್ ಪ್ರತೀ ಬಾರಿ ಸಮುದ್ರದಲ್ಲಿ ಪ್ರಯಾಣ ಆರಂಭಿಸುವ ಮೊದಲು ತಂಡದ ನಾಯಕ ಬೋಟ್‌ನಲ್ಲಿರುವ ಸದಸ್ಯರ ಗ್ರೂಪ್ ಫೋಟೋ/ ವಿಡಿಯೋ ತೆಗೆದು ಪೂರಕ ಮಾಹಿತಿ ಜತೆ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಮೀನುಗಾರಿಕೆ ನಡೆಸಿ ವಾಪಸಾಗುವ ಸಂದರ್ಭದಲ್ಲಿ ಕೂಡ ಗ್ರೂಪ್ ಫೋಟೋ ಅಪ್‌ಲೋಡ್ ಮಾಡಬೇಕು. ಹೊಸ ಆ್ಯಪ್ ಜಿಪಿಎಸ್ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನುತ್ತಾರೆ ವಿಝ್‌ಲೈಟ್ ಇನ್ನೋವೇಶನ್ ಸಂಸ್ಥೆಯ ಇಂಜಿನಿಯರ್ ನವೀನ್ ಕುಮಾರ್. ಅಂತರ್ಜಾಲ ಸಂಪರ್ಕ ಇಲ್ಲದ ಸಂದರ್ಭ ಆಫ್‌ಲೈನಲ್ಲಿಯೂ ಕಾರ್ಯನಿರ್ವಹಿಸುವಂತೆ ಈ ತಂತ್ರಜ್ಞಾನ ರೂಪಿಸಲಾಗಿದೆ. ಟೋಲ್‌ಗೇಟ್‌ನಲ್ಲಿರುವ ಫಾಸ್ಟಾೃಗ್ ತಂತ್ರಜ್ಞಾನ ಮಾದರಿ ಬೋಟ್ ಪ್ರವೇಶ ಮತ್ತು ನಿರ್ಗಮನ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ರವಾನೆಯಾಗುವ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ನಡೆದಿದೆ. ಮೀನುಗಾರರು ಹಾಗೂ ಇಲಾಖೆ ನಡುವೆ ಸಂವಹನ ನಡೆಸಲು ಕೂಡ ಆ್ಯಪ್ ನೆರವಾಗಲಿದೆ.

ಬೋಟ್ ಟ್ರಾೃಕರ್ ಆ್ಯಪ್ ಆರಂಭಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪ್ರಥಮ ಹಂತದಲ್ಲಿ ಮಂಗಳೂರು ಕರಾವಳಿಯ ಐದು ಬೋಟ್‌ಗಳಲ್ಲಿ ಪೈಲಟ್ ಪ್ರಾಜೆಕ್ಟ್ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ. ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರ ಸುರಕ್ಷತೆ ದೃಷ್ಟಿಯಿಂದ ಈ ಆ್ಯಪ್ ಹೆಚ್ಚು ನೆರವಾಗಲಿದೆ.
ದಿಲೀಪ್ ಕುಮಾರ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಂಗಳೂರು

Leave a Reply

Your email address will not be published. Required fields are marked *