ಅಗ್ನಿಶಾಮಕ ಠಾಣೆಯಲ್ಲಿಲ್ಲ ರೆಸ್ಕ್ಯೂ ವೆಹಿಕಲ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ನದಿಗಳಿಗೆ ಆಕಸ್ಮಿಕವಾಗಿ ಬೀಳುವ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಶವ ಹುಡುಕಿ ತೆಗೆಯಲು ಅಗ್ನಿ ಶಾಮಕ ಠಾಣೆಯಲ್ಲಿ ಅಗತ್ಯ ಪರಿಕರಗಳೇ ಇಲ್ಲ.

ಇತ್ತೀಚೆಗೆ ನೀರಿನಲ್ಲಿ ಬಿದ್ದ ನಾಲ್ಕೈದು ಶವ ಹುಡುಕಿದ್ದು ಸಹ ಸೇವಾ ಭಾವನೆಯ ಮುಳುಗು ತಜ್ಞರು. ತುರ್ತು ಸೇವೆ ನೀಡಬೇಕಾದ ಅಗ್ನಿ ಶಾಮಕ ಠಾಣೆ ಮಾತ್ರ ಜಪ್ಪಯ್ಯ ಅಂದರೂ ನೀರಿಗಿಳಿಯಲು ಮುಂದಾಗಲಿಲ್ಲ. ಕನಿಷ್ಠ ಒಂದು ಯಾಂತ್ರಿಕ ಬೋಟ್ ಇಲ್ಲದಿರುವುದರಿಂದ ನೀರಿನಲ್ಲಿ ಶವ ಹುಡುಕುವುದಕ್ಕೆ ವಾರಗಟ್ಟಲೆ ವಿಳಂಬವಾಗುತ್ತಿದೆ. ತುರ್ತು ಸೇವೆಗಾಗಿಯೆ ಒಂದು ಸರ್ಕಾರಿ ಇಲಾಖೆ ಇದ್ದರೂ ಅದರ ಪ್ರಯೋಜನ ಮಾತ್ರ ಸಾರ್ವಜನಿಕರಿಗೆ ದೊರೆಯದಿರುವುದು ವಿಪರ್ಯಾಸ.

ಸುರಕ್ಷಿತ ಸಹಾಯಕ ಪರಿಕರ ಹಾಗೂ ಅಗತ್ಯ ಜಲ ವಾಹನಗಳಿಲ್ಲದೆ ಅಗ್ನಿ ಶಾಮಕ ಠಾಣೆ ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ನದಿಗೆ ಬಿದ್ದವರ ಶವ ಹುಡುಕಲು ಒಂದು ಯಾಂತ್ರಿಕ ಬೋಟ್ ಸಹ ಠಾಣೆಯಲ್ಲಿ ಇಲ್ಲದಂತಾಗಿದೆ. ಅಗ್ನಿ ಶಾಮಕ ಠಾಣೆಗೆ ಪ್ರಕೃತಿ ವಿಕೋಪ ಮತ್ತು ಆಪತ್ತು ಸಂದರ್ಭಗಳಲ್ಲಿ ತುರ್ತು ಸೇವೆ ನೀಡುವ ಜವಾಬ್ದಾರಿ ಸಹ ಕೊಡಲಾಗಿದೆ. ಇಂಥ ಜವಾಬ್ದಾರಿ ವಹಿಸಿರುವ ಸರ್ಕಾರ, ಇದಕ್ಕೆ ಬೇಕಾದ ಯಾಂತ್ರಿಕ ಗರಗಸ, ಮೆಷಿನ್ ಬೋಟ್​ಗಳು, ಶಾಖಾ ನಿರೋಧಕ ಕೋಟ್​ಗಳು, ಫೈರ್ ಬ್ಲಾಂಕೆಟ್, ಜಂಪಿಂಗ್ ಕುಷನ್, ಕೂಲಿಂಗ್ ಜಾಕೆಟ್ ಸೇರಿದಂತೆ ಅಗತ್ಯ ಪರಿಕರ ನೀಡುವುದನ್ನೇ ಮರೆತಿದೆ.

ಜಿಲ್ಲಾ ಕೇಂದ್ರ ಸೇರಿ ಏಳು ತಾಲೂಕುಗಳಲ್ಲಿಯೂ ಅಗ್ನಿ ಶಾಮಕ ಠಾಣೆಗಳಿವೆ. ಜಿಲ್ಲಾ ಕೇಂದ್ರದಲ್ಲಿ ಮೂರು ಜಲ ವಾಹನಗಳಿದ್ದು, ಒಂದು ದುರಸ್ಥಿಯಲ್ಲಿದೆ. ಕಡೂರಿನಲ್ಲಿ ಎರಡಿದ್ದು, ಒಂದು ದುರಸ್ತಿಯಲ್ಲಿದೆ. ಉಳಿದ ತಾಲೂಕುಗಳಲ್ಲಿ ಒಂದೊಂದು ಜಲ ವಾಹನಗಳಿವೆ. ಬೇಸಿಗೆ ಸಂದರ್ಭ ಒಂದೇ ಸಂದರ್ಭದಲ್ಲಿ ಎರಡೂ ಮೂರು ಕಡೆ ಬೆಂಕಿ ಅವಘಡ ಉಂಟಾದ ಸಂದರ್ಭ ಯಾವ ಕಡೆ ಜಲ ವಾಹನ ಬೆಂಕಿ ನಂದಿಸಲು ಕಳುಹಿಸಬೇಕೆಂಬ ಜಿಜ್ಞಾಸೆ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಉಂಟಾಗುತ್ತದೆ. ತಾಲೂಕು ಕೇಂದ್ರಗಳಲ್ಲಿ ಕನಿಷ್ಠ ಎರಡು ಹಾಗೂ ಜಿಲ್ಲಾ ಕೇಂದ್ರದಲ್ಲಿ ಐದು ಜಲ ವಾಹನ ಬೇಡಿಕೆ ಇದೆ.

ರೆಸ್ಕ್ಯೂ ವೆಹಿಕಲ್ ಇಲ್ಲ: ಬಹು ಉಪಯೋಗಿ ಸುರಕ್ಷತೆ ಕಾರ್ಯಾಚರಣೆ ಮಾಡುವ ಯಂತ್ರಗಳನ್ನು ಹೊಂದಿರುವ ರೆಸ್ಕ್ಯೂ ವೆಹಿಕಲ್​ನ್ನು ರಾಜ್ಯ ಸರ್ಕಾರ ಅಗ್ನಿ ಶಾಮಕ ಠಾಣೆಗೆ ಪರಿಚಯಿಸಿ ಆರು ವರ್ಷಗಳಾಗಿದೆ. ಇಲ್ಲಿಯ ತನಕ ರೆಸ್ಕ್ಯೂ ವೆಹಿಕಲ್ ಚಿಕ್ಕಮಗಳೂರಿಗೆ ಬಂದಿಲ್ಲ. ಈ ವಾಹನ ಇದ್ದರೆ ಅಗ್ನಿ ಅವಘಡ, ಪ್ರಕೃತಿ ವಿಕೋಪದಲ್ಲಿ ಸಿಲುಕಿಕೊಂಡವರನ್ನು ತ್ವರಿತಗತಿಯಲ್ಲಿ ಸುರಕ್ಷಿತವಾಗಿ ಪಾರು ಮಾಡಲು ಸಹಾಯಕವಾಗುತ್ತದೆ.

ಯಾವುದೇ ಬಹು ಅಂತಸ್ತಿತನ ಕಟ್ಟಡದಲ್ಲಿ ಬೆಂಕಿ ಬಿದ್ದಾಗ ಕಟ್ಟಡದೊಳಗೆ ಇದ್ದವರನ್ನು ರಕ್ಷಿಸಲು, ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ಕಟ್ ಮಾಡಿ ತೆರವು ಮಾಡಲು, ಕುಸಿದ ಬಿಲ್ಡಿಂಗ್​ನಲ್ಲಿ ಸಿಲುಕಿದವರನ್ನು ಹೊರ ತರಲು ಬೇಕಾದ ಬಹುತೇಕ ಪರಿಕರ ರೆಸ್ಕ್ಯೂವೆಹಿಕಲ್​ನಲ್ಲಿವೆ. ಆದರೆ, ಇಂಥ ಮುಖ್ಯ ವಾಹನ ಜಿಲ್ಲಾ ಕೇಂದ್ರದಲ್ಲಿಯೇ ಇಲ್ಲವೆಂದರೆ ವಿಪತ್ತು ನಿರ್ವಹಣೆ ಇಲ್ಲಿ ಕಷ್ಟದ ಮಾತಾಗಿದೆ.