ಬೆಳಗಾವಿ: ಚೆಸ್ ಅಥವಾ ಚದುರಂಗ ಆಟವನ್ನು 64 ಚೌಕಗಳಿರುವ ಮಣೆಯ ಮೇಲೆ ಆಡಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಚೆಸ್ ಮನೆಯನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಅದು ಇನ್ನೂ ಅನೇಕ ಚೌಕಗಳನ್ನು ಒಳಗೊಂಡಿರುವುದು ಕಂಡುಬರುತ್ತದೆ. ಅದೇ ರೀತಿ ನಮ್ಮ ನಿಜ ಜೀವನದಲ್ಲೂ ಸಹ ನಮ್ಮ ಕಣ್ಣಿಗೆ ಗೋಚರಿಸದೆ ಇರುವ ಅನೇಕ ಸಂಗತಿಗಳಿವೆ. ನಾವು ಅವುಗಳನ್ನು ಅರ್ಥೈಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಏಕೆಂದರೆ ನಮ್ಮ ಕಣ್ಣಿಗೆ ಕಾಣುವುದೆಲ್ಲಾ ನಿಜವಲ್ಲ. ವಿದ್ಯಾರ್ಥಿಗಳು ಸತ್ಯ ಅರಿಯುವ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು
ವಿಭಾಗೀಯ ಲೆಕ್ಕ ಪರಿಶೋಧನಾ ವರ್ತುಲದ ಜಂಟಿ ನಿರ್ದೇಶಕ ಶಂಕರಾನಂದ ಬನಶಂಕರಿ ಅಭಿಪ್ರಾಯಪಟ್ಟರು. ಅವರು ಇಂದು ನಗರದ ನಾಗನೂರು ಶ್ರೀ ಪ್ರಭುದೇವ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಒಂದು ದಿನದ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಮಾತನಾಡಿ ವಿದ್ಯಾರ್ಥಿಗಳು ಸಾಧಕರಾಗಬೇಕಾದರೆ ಸದೃಡ ಮನಸ್ಸು ಅತೀ ಅವಶ್ಯಕ. ಅಂತಹ ಸದೃಡ ಮನಸ್ಸು ನಿರ್ಮಾಣ ಮಾಡಲು ಚೆಸ್ ಸಹಕಾರಿಯಾಗಿದ್ದು, ತಾವೆಲ್ಲಾ ಭವಿಷ್ಯದ ಸಾಧಕರಾಗಿರಿ ಎಂದು ಹಾರೈಸಿದರು.
ಆರ್.ಎಲ್. ವಿಜ್ಞಾನ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಶಿವಾನಂದ ಬುಲಬುಲೆ, ನಿವೃತ್ತ ಪ್ರಾಧ್ಯಾಪಕ ಡಾ. ಜಿ. ಎನ್. ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯೋಜಕ ಪ್ರಭು ಶಿವನಾಯ್ಕರ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾಥಮಿಕ ಕಿರಿಯ, ಹಿರಿಯ, ಪ್ರೌಢ ಹಾಗೂ ಕಾಲೇಜು ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಜರುಗಿದ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಶಾಲೆ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾಚಾರ್ಯ ಸ್ವಪ್ನಾ ಜೋಷಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಕಾವ್ಯಾ ಭಜಂತ್ರಿ ಹಾಗೂ ಪ್ರೀತಿ ದಳವಾಯಿ ಪ್ರಾರ್ಥಿಸಿದರು. ಕೊನೆಗೆ ಪ್ರಾಧ್ಯಾಪಕ ವಿವೇಕ ನಿರೂಪಿಸಿ ವಂದಿಸಿದರು.