ಬಿಎಂಟಿಸಿ ಬಸ್‌ ಬ್ರೇಕ್‌ ಹಿಡಿದ್ರೆ ಚಾಲಕನಿಗೆ ಬರುತ್ತೆ ನೋಟಿಸ್‌!

ಬೆಂಗಳೂರು: ಬೆಂಗಳೂರಿನಂತ ನಗರಗಳಲ್ಲಿ ಟ್ರಾಫಿಕ್‌ ದಟ್ಟಣೆ ಕಡಿಮೆಯೇನಿರುವುದಿಲ್ಲ. ಹೆಜ್ಜೆ ಹೆಜ್ಜೆಗೂ ಇರುವ ಸಿಗ್ನಲ್‌ಗಳಲ್ಲಿ ಬ್ರೇಕ್‌ ತುಳಿಯದ ವಾಹನ ಸವಾರರೇ ಇಲ್ಲವೆಂದರೂ ತಪ್ಪಾಗುವುದಿಲ್ಲ. ಆದರೆ ಬಿಎಂಟಿಸಿ ಬಸ್‌ನಲ್ಲಿ ಬ್ರೇಕ್‌ ತುಳಿಯುವಂತಿಲ್ಲ. ಬ್ರೇಕ್‌ ತುಳಿದ ಚಾಲಕನಿಗೆ ನೋಟಿಸ್‌ ನೀಡಲಾಗುತ್ತಿದೆ.

ಬಿಎಂಟಿಸಿ ಬಸ್​​ನಲ್ಲಿ ಬ್ರೇಕ್ ತುಳಿದ ಚಾಲಕನಿಗೆ ಬಿಎಂಟಿಸಿ ಘಟಕ 33 ರಲ್ಲಿ ವ್ಯವಸ್ಥಾಪಕರಿಂದ ನೋಟಿಸ್ ಜಾರಿ ಮಾಡಲಾಗಿದೆ. ಅನಾವಶ್ಯಕವಾಗಿ 77 ಬಾರಿ ಬ್ರೇಕ್ ತುಳಿದ್ದೀರ ಎಂದು ನೋಟಿಸ್‌ ನೀಡಲಾಗಿದೆ.

ಅನಾವಶ್ಯಕವಾಗಿ ಬ್ರೇಕ್‌ ತುಳಿಯುವುದರಿಂದ ಮೈಲೇಜ್​ ಕಡಿಮೆ ಆಗುತ್ತದೆ. ಇಂಧನ ಬಳಕೆ ಜಾಸ್ತಿಯಾಗುತ್ತದೆ. ಇದರಿಂದಾಗಿ ಸಂಸ್ಥೆಗೆ ಆರ್ಥಿಕ ಹೊರೆ ಬೀಳುತ್ತದೆ. ಐಟಿಎಸ್​ನಿಂದ ಅನಾವಶ್ಯಕ ಬ್ರೇಕ್ ಹಾಕಿರುವುದು ಬೆಳಕಿಗೆ ಬಂದಿದೆ ಎಂದು ನೋಟಿಸ್‌ ನೀಡಲಾಗಿದೆ.

ಇನ್ನು ಬಿಎಂಟಿಸಿಯಿಂದ ಜಾರಿಯಾಗಿರುವ ನೋಟಿಸ್‌ ನೋಡಿ ಚಾಲಕ ಕಂಗಾಲಾಗಿದ್ದು, ಟ್ರಾಫಿಕ್​ನಲ್ಲಿ ಬ್ರೇಕ್ ಹಾಕದೆಯೇ ಹೇಗೆ ಬಸ್​ ಓಡಿಸುವುದು ಎಂದು ಚಿಂತೆಯಲ್ಲಿ ಮುಳುಗಿದ್ದಾರೆ. (ದಿಗ್ವಿಜಯ ನ್ಯೂಸ್)